ಹುಬ್ಬಳ್ಳಿ: ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನದ ಅಭಿವೃದ್ಧಿಗೆ ಮಹಾನಗರ ಪಾಲಿಕೆಯಿಂದ ಅನುದಾನ ಕಾಯ್ದಿರಿಸಲಾಗಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಹೇಳಿದರು.
ಗೋಕುಲ ರಸ್ತೆ ಹೊಸ ಸಿಎಆರ್ ಮೈದಾನದಲ್ಲಿಂದು ನಡೆದ ವಾರ್ಷಿಕ ಪೊಲೀಸ್ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಮೈದಾನದ ಅಭಿವೃದ್ಧಿಗೆ 30 ಲಕ್ಷ ರೂ. ತೆಗೆದಿರಿಸಲಾಗಿದೆ. ಶೀಘ್ರದಲ್ಲಿ ಮೈದಾನ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.
ನಂತರ ಮೂರು ದಿನ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೂ ಹಾಗೂ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಪೊಲೀಸರಲ್ಲಿ ಉತ್ತಮ ಸ್ಪರ್ಧಾ ಮನೋಭಾವ ಇರಬೇಕು. ಜೀವನದಲ್ಲಿ ಎಂತಹುದೇ ಪರಿಸ್ಥಿತಿ ಎದುರಾದರೂ ಹೋರಾಟ ಮಾಡಬೇಕು. ಕೋವಿಡ್ 3ನೇ ಅಲೆಯ ಮುನ್ಸೂಚನೆ ದೊರೆತಿದೆ. ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸುವಂತೆ ನೋಡಿಕೊಳ್ಳುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು
ಎಂದರು.
ಪೊಲೀಸ್ ಆಯುಕ್ತ ಲಾಭೂರಾಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಕ್ರೀಡಾ ಸ್ಫೂರ್ತಿ ಹಾಗೂ ಉತ್ಸಾಹದಿಂದ ಮೂರು ದಿನಗಳ ನಡೆದ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದೀರಿ. ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿದೆ. ದೈಹಿಕ-ಮಾನಸಿಕ ಆರೋಗ್ಯ ಕಾಪಾಡಲು ವರ್ಷದ 365 ದಿನವೂ ವ್ಯಾಯಾಮ, ಯೋಗ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಿ ಎಂದರು. ನಿವೃತ್ತ ಪೊಲೀಸ್ ಸಿಬ್ಬಂದಿಗೆ ಸನ್ಮಾನಿಸಲಾಯಿತು.
ಕ್ರೀಡಾಕೂಟದ ಮುಂದಾಳು ಸಶಸ್ತ್ರ ಮೀಸಲು ಪಡೆಯ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಮುರೋಳ ನೇತೃತ್ವದಲ್ಲಿ ವಾರ್ಷಿಕ ಕ್ರೀಡಾಕೂಟದ ಮುಕ್ತಾಯ ಕವಾಯತು ನೆರವೇರಿತು. ಪೊಲೀಸ್ ಧ್ವಜದ ಆವರೋಹಣ ಮಾಡಲಾಯಿತು. ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಪೊಲೀಸ್ ಧ್ವಜವನ್ನು ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ ಅವರಿಗೆ ಹಸ್ತಾಂತರಿಸಿದರು. ಡಿಸಿಪಿ ಸಾಹಿಲ್ ಬಾಗ್ಲಾ, ಎಸ್.ಬಿ.ಬಸರಗಿ, ಸಿಎಆರ್ ಉಪ ಪೊಲೀಸ್ ಆಯುಕ್ತ ಎಸ್ .ವಿ.ಯಾದವ್, ಮೈತ್ರಿ ಬಿಸ್ವಾಸ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.