Advertisement

ನರೇಗಾದಲ್ಲಿ 30.81 ಲಕ್ಷ ಮಹಿಳೆಯರಿಗೆ ಉದ್ಯೋಗ : ಈಶ್ವರಪ್ಪ

06:35 PM Mar 09, 2022 | Team Udayavani |

ಬೆಂಗಳೂರು: ನರೇಗಾ ಯೋಜನಡೆಯಡಿ ಪ್ರಸ್ತುತ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರ ನೀಡಿದ್ದ 13 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯ ಗುರಿಯನ್ನು ರಾಜ್ಯವು ಡಿಸೆಂಬರ್‌ ಅಂತ್ಯದಲ್ಲಿಯೇ ಪೂರ್ಣಗೊಳಿಸಲು ಮಹಿಳೆಯರು ಮಹತ್ವ ಕೊಡುಗೆ ನೀಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ “ಮಹಿಳಾ ಕಾಯಕ ಬಂಧುಗಳನ್ನು ಗೌರವಿಸಿ ಮಾತನಾಡಿದ ಅವರು, ನರೇಗಾದಿಂದ ಉದ್ಯೋಗ ಹಾಗೂ ದೇಶದ ಆಸ್ತಿ ಜಾಸ್ತಿಯಾಗುತ್ತಿದೆ. ರೈತರ ಭೂಮಿ ಫ‌ಲವತ್ತತ್ತೆಯಾಗುವ ನಿಟ್ಟಿನಲ್ಲಿ ಕೃಷಿ ಅಭಿವೃದ್ಧಿಪಡಿಸಿ, ಉತ್ಪಾದಕ ವ್ಯವಸ್ಥೆ ತರುವ ಮಾರ್ಗದಲ್ಲಿ ಇಡೀ ದೇಶದಲ್ಲಿ ಕ್ರಾಂತಿಯಾಗುತ್ತಿದೆ. ಈ ಕಾರ್ಯದಲ್ಲಿ ಮಹಿಳೆಯರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ನಲ್ಲಿ ಅವಕಾಶ ನೀಡಲಾಗುತ್ತಿದೆ. ಸ್ತ್ರೀಶಕ್ತಿ ಸಂಘಗಳು ಮಹಿಳೆಯರಿಗೆ ಉದ್ಯೋಗ ಕೊಡಿಸಲು ಅವಕಾಶ ಕಲ್ಪಿಸುತ್ತಿವೆ ಎಂದು ಹೇಳಿದರು.

ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ 30.81 ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡಲಾಗಿದೆ. ದೇಶದಲ್ಲಿಯೇ ಪ್ರಥಮ ಪ್ರಯತ್ನವಾಗಿ 2,400ಕ್ಕೂ ಹೆಚ್ಚು ಗ್ರಾಮಪಂಚಾಯ್ತಿಗಳಿಗೆ ಪೂರ್ಣ ಪ್ರಮಾಣದಲ್ಲಿ ಗ್ರಾಮ ಕಾಯಕ ಮಿತ್ರ ರೆಂದು ನೇಮಕ ಮಾಡಲಾಗಿದೆ. ಈ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ವಿಶೇಷ ಮಹಿಳಾ ಕಾಯಕೋತ್ಸವ ಹಮ್ಮಿಕೊಳ್ಳಲಾಗಿದೆ. ಪ್ರಸ್ತಕ ಸಾಲಿನಲ್ಲಿ ಒಟ್ಟಾರೆ ಪರಿಷ್ಕೃತ 16 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯ ಗುರಿಯಲ್ಲಿ 15.27 ಕೋಟಿ ಮಾನವ ಉದ್ಯೋಗ ಗುರಿ ತಲುಪಿದೆ ಎಂದರು.

ವಿವಿಧ ಜಿಲ್ಲೆಗಳಲ್ಲಿನ 48 ಅತ್ಯುತ್ತಮ ಮಹಿಳಾ ಕಾಯಕ ಬಂಧುಗಳಿಗೆ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಸನ್ಮಾನಿಸಲಾಯಿತು. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತೆ ಶಿಲ್ಪಾ ನಾಗ್‌, ಬೆಂಗಳೂರು ಗ್ರಾಮಾಂತರ ಸಿಒಒ ರೇವಣಪ್ಪ, ಇಲಾಖೆಯ ನಿರ್ದೇಶಕ ಪ್ರಾಣೇಶ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next