Advertisement

ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ 3 ವರ್ಷ

10:51 AM Jul 28, 2019 | keerthan |

ಉಡುಪಿ: ಅನಿವಾಸಿ ಭಾರತೀಯ ಉದ್ಯಮಿ ಉಡುಪಿ ಇಂದ್ರಾಳಿಯ ಭಾಸ್ಕರ ಶೆಟ್ಟಿ ಅವರ ಕೊಲೆ ನಡೆದು ಜು.28ಕ್ಕೆ ಮೂರು ವರ್ಷ ಆಗಿದೆ. ಇವರನ್ನು ಆಸ್ತಿ ಮತ್ತು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ 2016ರ ಜು.28ರಂದು ಕೊಲೆ ಮಾಡಲಾಗಿತ್ತು.

Advertisement

ಅವರ ಮನೆಯಲ್ಲಿಯೇ ಕೊಂದು ಶವವನ್ನು ಬೆಳ್ಮಣ್‌ ಸಮೀಪದ ನಂದಳಿಕೆಯಲ್ಲಿ ಜೋತಿಷಿಯ ಮನೆಯಂಗಳದ ಹೋಮ ಕುಂಡದಲ್ಲಿ ಸುಟ್ಟು ಹಾಕಲಾಗಿದ್ದ ಈ ಪ್ರಕರಣ ಕರಾವಳಿಯಲ್ಲಿ ತಲ್ಲಣ ಮೂಡಿಸಿತ್ತು. ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್‌ ಶೆಟ್ಟಿ ಮತ್ತು ಜೋತಿಷಿ ನಿರಂಜನ್‌ ಭಟ್‌ ಮುಖ್ಯ ಆರೋಪಿಗಳು. ಈ ಪೈಕಿ ರಾಜೇಶ್ವರಿ ಶೆಟ್ಟಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದು ನವನೀತ್‌ ಶೆಟ್ಟಿ ಮತ್ತು ನಿರಂಜನ್‌ ಭಟ್‌ ಇನ್ನೂ ಜೈಲಲ್ಲಿದ್ದಾರೆ. ನಿರಂಜನ್‌ ಭಟ್‌ ಜಾಮೀನಿಗಾಗಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರೂ ತಿರಸ್ಕೃತವಾಗಿತ್ತು. ಸಾಕ್ಷ್ಯನಾಶ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ನಿರಂಜನ್‌ ಭಟ್‌ನ ತಂದೆ ಶ್ರೀನಿವಾಸ ಭಟ್‌ ಮತ್ತು ಚಾಲಕ ರಾಘವೇಂದ್ರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಭಾಸ್ಕರ ಶೆಟ್ಟಿ ತನ್ನ ತಾಯಿಯ ಹೆಸರಿನಲ್ಲಿ ಉಯಿಲು ಬರೆದಿಟ್ಟಿದ್ದು ಅದರ ನೋಂದಣಿ ಬಾಕಿಯಾಗಿತ್ತು. ನೋಂದಣಿಯಾದರೆ ತಮಗೆ ಆಸ್ತಿ ದೊರೆಯದು ಎಂದು ಭಾವಿಸಿ ಪತ್ನಿ, ಮಗ ಸೇರಿ ಕೊಲೆ ಮಾಡಲಾಗಿತ್ತು ಎಂದು ದೋಷಾರೋಪಣ ಪಟ್ಟಿಯಲ್ಲಿ ಹೇಳಲಾಗಿತ್ತು.

ಸಿಐಡಿ ತನಿಖೆ
ಭಾಸ್ಕರ ಶೆಟ್ಟಿ ನಾಪತ್ತೆಯಾಗಿದ್ದಾರೆ ಎಂದು ಜು.29ರಂದು ಅವರ ತಾಯಿ ಗುಲಾಬಿ ಶೆಡ್ತಿ ದೂರು ನೀಡಿದ್ದರು. ಪೊಲೀಸ್‌ ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಕೂಡ ನಡೆದಿತ್ತು. ಅನಂತರ ತನಿಖೆ ನಡೆದು ಅದು ಕೊಲೆ ಪ್ರಕರಣವಾಗಿ ದಾಖಲಾಗಿತ್ತು. ಮೊದಲು ಇನ್‌ಸ್ಪೆಕ್ಟರ್‌ ಗಿರೀಶ್‌, ಅನಂತರ ಡಿಎಸ್‌ಪಿ ಸುಮನಾ ಅವರು ತನಿಖಾಧಿಕಾರಿಯಾಗಿದ್ದರು. ಬಳಿಕ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿತ್ತು. ಸಿಐಡಿ ಡಿಎಸ್‌ಪಿ ಚಂದ್ರಶೇಖರ್‌ ಅವರು ತನಿಖಾಧಿಕಾರಿಯಾಗಿ 1,500ಕ್ಕೂ ಅಧಿಕ ಪುಟಗಳ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ಉಡುಪಿಯ ಹಿರಿಯ ನ್ಯಾಯವಾದಿ ಶಾಂತಾರಾಮ ಶೆಟ್ಟಿ ಅವರನ್ನು ನೇಮಿಸಲಾಗಿತ್ತು. ಇದರ ವಿರುದ್ಧ ಆರೋಪಿಗಳು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು. ಅನಂತರ ನ್ಯಾಯಾಲಯ ತನ್ನ ಅಂತಿಮ ಆದೇಶದಲ್ಲಿ ಶೆಟ್ಟಿ ಅವರ ನೇಮಕವನ್ನು ಎತ್ತಿ ಹಿಡಿಯಿತು. ಪ್ರಸ್ತುತ ಶಾಂತಾರಾಮ ಶೆಟ್ಟಿ ಅವರು ಸಾಕ್ಷಿಗಳ ವಿಚಾರಣೆ ನಡೆಸುತ್ತಿದ್ದಾರೆ.

Advertisement

ಅನೈತಿಕ ಸಂಬಂಧ ಆರೋಪ
ಭಾಸ್ಕರ ಶೆಟ್ಟಿ ವಿದೇಶದಲ್ಲಿ ನರ್ಸ್‌ ಜತೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಪತ್ನಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದ ನರ್ಸ್‌ನನ್ನು ಕೂಡ ಕರೆಸಿ ನ್ಯಾಯಾಲಯ ವಿಚಾರಣೆ ನಡೆಸಿತ್ತು.

ಸಾಕ್ಷಿಗಳಿಗೂ ಬೆದರಿಕೆ
ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಲು ಬಂದಿದ್ದ ಇಬ್ಬರಿಗೆ ಜೀವಬೆದರಿಕೆ ಕರೆ ಬಂದ ಬಗ್ಗೆಯೂ ಪ್ರಕರಣ ದಾಖಲಾಗಿತ್ತು. ಇದಕ್ಕೂ ಮೊದಲು ಆರೋಪಿ ನಿರಂಜನ್‌ ಭಟ್‌ ಪೊಲೀಸ್‌ ವಶದಲ್ಲಿರುವಾಗಲೇ ವಜ್ರದುಂಗುರ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ನದಿಯಲ್ಲಿ ಮೂಳೆ ಪತ್ತೆ
ಭಾಸ್ಕರ ಶೆಟ್ಟಿಯನ್ನು ಕೊಂದ ಬಳಿಕ ಹೋಮಕುಂಡದಲ್ಲಿ ಸುಟ್ಟು ಉಳಿದ ಬೂದಿ ಹಾಗೂ ಇತರ ವಸ್ತುಗಳನ್ನು ನದಿಗೆ ಎಸೆಯಲಾಗಿತ್ತು. ಅನಂತರ ಎಲುಬುಗಳು ಪತ್ತೆಯಾಗಿದ್ದವು. ಈ ಬಗ್ಗೆ ವಿಧಿವಿಜ್ಞಾನದ ತಜ್ಞರು ವರದಿ ನೀಡಿದ್ದರು. ಈ ಎಲ್ಲ ಘಟನಾವಳಿಗಳ ನಡುವೆಯೇ ಇಂದ್ರಾಳಿಯಲ್ಲಿರುವ ಭಾಸ್ಕರ ಶೆಟ್ಟಿ ಮನೆಯಲ್ಲಿ ಕಳವಾಗಿರುವ ಬಗ್ಗೆಯೂ ಪ್ರಕರಣ ದಾಖಲಾಗಿತ್ತು.

ಜು. 30, 31ಕ್ಕೆ ಮತ್ತೆ ವಿಚಾರಣೆ
ಒಟ್ಟು ಸುಮಾರು 175 ಮಂದಿ ಸಾಕ್ಷಿಗಳ ಪೈಕಿ ಇದುವರೆಗೆ 74 ಮಂದಿ ಸಾಕ್ಷಿಗಳ ವಿಚಾರಣೆ ನಡೆದಿದೆ. ಜು. 30 ಮತ್ತು 31ರಂದು ಸಿಐಡಿಯ ತನಿಖಾಧಿಕಾರಿ ಚಂದ್ರಶೇಖರ್‌ ಸಹಿ ತ ಸಿಐಡಿಯ ಮೂವರು ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ವಿಚಾರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next