Advertisement

3 ಸಾವಿರ ಕೋಟಿ ಸಂಪೂರ್ಣ ಖರ್ಚಿಗೆ ಬದ್ಧ

09:39 AM Mar 20, 2022 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) 2022-23ನೇ ಮುಂಗಡ ಪತ್ರದಲ್ಲಿ ಘೋಷಿಸಲಾಗಿರುವ ಮೂರು ಸಾವಿರ ಕೋ.ರೂ ಸಂಪೂರ್ಣ ಖರ್ಚು ಮಾಡಲು ಈಗಿಂದಲೇ ಕಾರ್ಯಪ್ರವೃತ್ತರಾಗುವುದರ ಜತೆಗೆ ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್‌ ರೇವೂರ ತಿಳಿಸಿದರು.

Advertisement

ಮಂಡಳಿಯ ಸಭಾಂಗಣದಲ್ಲಿ ಶನಿವಾರ ನಡೆದ ನೂತನ ಮಂಡಳಿಯ ಪ್ರಥಮ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡಳಿಯ ಕ್ರಿಯಾ ಯೋಜನೆ ರೂಪಿಸಲು ಕಾಮಗಾರಿಗಳ ಮಾಹಿತಿ ನೀಡುವಂತೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಶಾಸಕರಿಗೆ ಹಾಗೂ ಆಯಾ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಪ್ರಸಕ್ತ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಹಿಂದಿನ ಸಾಲಿನ ಅನುದಾನ ಸಂಪೂರ್ಣ ಬಳಕೆ ಜತೆಗೆ ಮೂರು ಸಾವಿರ ಕೋ.ರೂ. ಸಂಪೂರ್ಣ ಖರ್ಚು ಮಾಡುವ ಜತೆಗೆ ಸಂಪೂರ್ಣ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸುವ ಬಗ್ಗೆ ನಿರ್ಧರಿಸಲಾಗಿದೆ. 1500 ಕೋ.ರೂ ಮೈಕ್ರೋ ಹಾಗೂ 1500 ಕೋ. ರೂ ಮ್ಯಾಕ್ರೋ ಯೋಜನೆಗೆಂದು ವಿಂಗಡಿಸಿ, ಮ್ಯಾಕ್ರೋದಲ್ಲಿ ಬೃಹತ್‌ ಯೋಜನೆ ಅಥವಾ ಕಾಮಗಾರಿ ಕೈಗೊಳ್ಳಲು ಹಾಗೂ ಇನ್ನೂಳಿದ 1500 ಕೋ.ರೂ ಅನುದಾನ ರೇಗ್ಯೂಲರ್‌ ಕಾಮಗಾರಿಗಳಿಗಾಗಿ ವಿನಿಯೋಗಿಸಲಾಗುವುದು ಎಂದು ಅಪ್ಪುಗೌಡ ವಿವರಿಸಿದರು.

ಬೃಹತ್‌ ಯೋಜನೆಗಳೆಂದರೆ ಅದು ಜಿಲ್ಲೆಗೆ ವಿಶೇಷತೆ ಎನ್ನುವಂತಿರಬೇಕು. ಕಲಬುರಗಿಯಲ್ಲಿ ಮಾದರಿಯ ಕ್ರೀಡಾ ಸಮುಚ್ಚಯ ನಿರ್ಮಿಸಲು ಮುಂದಾಗಿದೆ. ಅದೇ ರೀತಿ ವಿಮಾನ ನಿಲ್ದಾಣ ಹಾಗೂ ಕೆಲವೊಂದು ಕಾಮಗಾರಿಗಳನ್ನು ವಿಶೇಷವೆಂದು ಪರಿಗಣಿಸಲಾಗುತ್ತಿದೆ. ಒಟ್ಟಾರೆ 3 ಸಾವಿರ ಕೋ.ರೂ ಸರ್ಕಾರದಿಂದ 3 ಸಾವಿರ ಕೋ. ರೂ ಸಂಪೂರ್ಣ ಬಿಡುಗಡೆ ಜತೆಗೆ ಬಿಡುಗಡೆಯಾದ ಅನುದಾನ ಸಂಪೂರ್ಣ ಖರ್ಚು ಮಾಡುವ ಬದ್ಧತೆ ಹೊಂದಲಾಗಿದೆ ಎಂದು ಪುನರುಚ್ಚರಿಸಿದರು.

ಪ್ರತ್ಯೇಕ ಎಂಜಿನಿಯರಿಂಗ್‌ ವಿಭಾಗ

Advertisement

ಮಂಡಳಿಯ ಈಗಿನ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ, ಜಿಪಂ ಎಂಜಿನಿಯರಿಂಗ್‌ ಸೇರಿ ಇತರರಿಗೆ ನೀಡಲಾಗುತ್ತಿದೆ. ಆದರೆ ಕಾಮಗಾರಿಗಳು ಬೇಗ ಮುಗಿಯುವಂತಾಗಲು ಜತೆಗೆ ಕಾಮಗಾರಿಗಳ ಮೇಲೆ ನೇರವಾಗಿ ನಿಗಾ ವಹಿಸುವಂತಾಗಲು ಮಂಡಳಿಯಿಂದಲೇ ಪ್ರತ್ಯೇಕ ಎಂಜಿನಿಯರಿಂಗ್‌ ವಿಭಾಗ ತೆರೆಯಲು ಈಚೆಗೆ ಮಂಡಳಿಗೆ ಆಗಮಿಸಿದ್ದ ಸಚಿವ ಶ್ರೀರಾಮುಲು ನೇತೃತ್ವದ 371ಜೆ ವಿಧಿ ಕಾರ್ಯಾನುಷ್ಠಾನದ ಉಪಸಮಿತಿಗೆ ಮನವಿ ಮಾಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತ್ಯೇಕ ಎಂಜಿನಿಯರಿಂಗ್‌ ವಿಭಾಗ ತೆರೆಯುವ ವಿಶ್ವಾಸ ಹೊಂದಲಾಗಿದೆ ಎಂದು ಇದೇ ಸಂದರ್ಭದಲ್ಲಿ ದತ್ತಾತ್ರೇಯ ಪಾಟೀಲ್‌ ತಿಳಿಸಿದರು. ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು.

ಇದಕ್ಕೂ ಮುನ್ನ ನಡೆದ ಮಂಡಳಿಯ ಪ್ರಥಮ ಸಭೆಯಲ್ಲಿ ಬೇಗ ಕ್ರಿಯಾ ಯೋಜನೆ ರೂಪಿಸಬೇಕು. ಪದೇ-ಪದೇ ಕಾಮಗಾರಿಗಳ ಬದಲಾವಣೆಯಾಗಬಾರದು ಎಂದು ಪ್ರಸ್ತಾಪಿಸಲಾಯಿತು. ಸಭೆಯಲ್ಲಿ ಸಮಿತಿಯ ಸದಸ್ಯರುಗಳಾದ ಬಂಡೆಪ್ಪ ಕಾಶಂಪೂರ, ಸುಭಾಷ ಆರ್‌. ಗುತ್ತೇದಾರ, ಬಿ.ಜಿ. ಪಾಟೀಲ್‌, ರಘುನಾಥ ಮಲ್ಕಾಪುರೆ, ಮಂಡಳಿಯ ಕಾರ್ಯದರ್ಶಿ ಆರ್‌. ವೆಂಕಟೇಶಕುಮಾರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಅಭಿವೃದ್ಧಿ ಸೂಚ್ಯಂಕ ನಿಖರತೆಗೆ ಸಮಿತಿ

ಪ್ರಸ್ತುತವಾಗಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿಯೊಂದು ಅಭಿವೃದ್ಧಿ ಸೂಚ್ಯಂಕದಲ್ಲಿ ಯಾವ ಸ್ಥಾನ ಹೊಂದಿವೆ ಹಾಗೂ ಯಾವ ನಿಟ್ಟಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂಬುದನ್ನು ನಿಖರವಾಗಿ ನಿರ್ಧರಿಸಲು ಈಗಾಗಲೇ ತಜ್ಞರು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿ ಈಗಾಗಲೇ ಕಾರ್ಯೋನ್ಮುಖಗೊಂಡಿದೆ. ಸಮಿತಿಯ ವರದಿ ನಂತರ ಮಂಡಳಿಯು ಆದ್ಯತಾ ಕಾಮಗಾರಿಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ. ಅದೇ ರೀತಿ ಕಕ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿ ನಿಟ್ಟಿನಲ್ಲಿ ಆಯಾ ಜಿಲ್ಲಾಡಳಿತದಿಂದ ಪ್ರಸ್ತಾವನೆ ಬಂದರೆ ಮಂಡಳಿಯಿಂದ ಅನುದಾನ ನೀಡಿ ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ದತ್ತಾತ್ರೇಯ ಪಾಟೀಲ್‌ ರೇವೂರ ತಿಳಿಸಿದರು.

ಕೇಂದ್ರದ ಬಳಿ ನಿಯೋಗ

ಕಲಬುರಗಿಯಲ್ಲೇ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪಿಸುವಂತೆ, ಏಮ್ಸ್‌ ಕಲಬುರಗಿಯಲ್ಲೇ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ, ಬೀದರ್‌-ಕಲಬುರಗಿ-ಬೆಂಗಳೂರು ನಡುವೆ ಹೊಸ ರೈಲು ಓಡಿಸುವಂತೆ, ಕಲಬುರಗಿ ಎರಡನೇ ವರ್ತುಲ್‌ ರಸ್ತೆಗೆ ಅನುಮೋದನೆ ನೀಡುವುದು, ರೈಲ್ವೆ ವಿಭಾಗೀಯ ಕಚೇರಿ ಕಾರ್ಯಾರಂಭ ಸೇರಿದಂತೆ ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶೀಘ್ರದಲ್ಲೇ ಕೇಂದ್ರದ ಬಳಿ ಶಾಸಕರ ನಿಯೋಗವೊಂದು ತೆರಳಲಾಗುವುದು ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್‌ ರೇವೂರ ಇದೇ ಸಂದರ್ಭದಲ್ಲಿ ತಿಳಿಸಿದರು. ಶಾಸಕ ಬಸವರಾಜ ಮತ್ತಿಮಡು ಇದಕ್ಕೆ ಧ್ವನಿಗೂಡಿಸಿದರು.

ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿ ಮಹಾನಗರದಲ್ಲಿ ಜಿಲ್ಲಾಧಿಕಾರಿ ಸೇರಿ ಎಲ್ಲ ಕಚೇರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸುವಂತಾಗಲು ಕಲಬುರಗಿಯಲ್ಲಿ ಕಲ್ಯಾಣಸೌಧ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 16 ಎಕರೆ ಜಮೀನು ಅಗತ್ತವಿದ್ದು, ಸೂಕ್ತ ಸ್ಥಳಗಳ ಪರಿಶೀಲನೆ ನಡೆದಿದೆ. -ದತ್ತಾತ್ರೇಯ ಪಾಟೀಲ್‌ ರೇವೂರ, ಅಧ್ಯಕ್ಷರು, ಕೆಕೆಆರ್‌ಡಿಬಿ

Advertisement

Udayavani is now on Telegram. Click here to join our channel and stay updated with the latest news.

Next