Advertisement

ಕೊಡಗಿನ ಮೂವರು ಸ್ವದೇಶಕ್ಕೆ ;11 ವಿದ್ಯಾರ್ಥಿಗಳು ಅತಂತ್ರ

12:52 AM Mar 03, 2022 | Team Udayavani |

ಮಡಿಕೇರಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ಕೊಡಗು ಜಿಲ್ಲೆಯ ಒಟ್ಟು 14 ವಿದ್ಯಾರ್ಥಿಗಳಲ್ಲಿ ಈವರೆಗೆ ಮೂವರನ್ನು ಭಾರತ ಸರಕಾರದ “ಆಪರೇಷನ್‌ ಗಂಗಾ’ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿದೆ.

Advertisement

ಗೋಣಿಕೊಪ್ಪಲುವಿನ ನಿವಾಸಿ ಗಫ‌ೂರ್‌ ಪುತ್ರಿ ಎಂ.ಜಿ. ಮದೀಹ (22), ಪೊನ್ನಂಪೇಟೆಯ ವಿ.ಜೆ. ಶಿನ್ಯಾ (22) ಮತ್ತು ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದ ಕಾವೇರಿ ಬಡಾವಣೆ ನಿವಾಸಿ ಆಲಿಷಾ (22) ಪಾರಾಗಿ ಬಂದವರು. ಈ ಪೈಕಿ ಮದೀಹ ತವರು ಸೇರಿದ್ದಾರೆ.

ರಕ್ಷಣೆಗಾಗಿ ಮೊರೆ
ಉಕ್ರೇನ್‌ನ ಪರಿಸ್ಥಿತಿ ಬಿಗಡಾಯಿಸಿದ್ದು, ಕುಶಾಲನಗರ ಐಮುಡಿಯಂಡ ಅಕ್ಷಿತಾ ಅಕ್ಕಮ್ಮ, ಅಮ್ಮತ್ತಿ ಹೊಸೂರಿನ ನಿರ್ಮಲಾ, ಬೇಟೋಳಿಯ ಶ್ರೇಯಾ ಪ್ರದೀಪ್‌, ಹೆಗ್ಗಳ ಗ್ರಾಮದ ಡಯಾನಾ ಮೇರಿ, ಶನಿವಾರಸಂತೆಯ ಅರ್ಜುನ್‌ ವಸಂತ್‌, ವೀರಾಜ ಪೇಟೆಯ ಕಾಂತರಾಜ್‌ ತೇಜಸ್ವಿನಿ, ಗೋಣಿಕೊಪ್ಪದ ಬಲ್ಲಚಂಡ ಶೀತಲ್‌, ವೀರಾಜಪೇಟೆ ಆರ್ಜಿ ಗ್ರಾಮದ ನಿವಾಸಿ ಶಾರುಖ್‌, ಕುಶಾಲ ನಗರ ಮುಳ್ಳುಸೋಗೆಯ ಬಿ.ಕೆ. ಲಿಖೀತ್‌, ಕುಶಾಲನಗರ ನಿವಾಸಿ ಚಂದನ್‌ ಗೌಡ ಹಾಗೂ ಬಿ.ವಿ. ಅಶ್ವಿ‌ನ್‌ ಕುಮಾರ್‌ ಅವರು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನೂ ಶೀಘ್ರ ರಕ್ಷಿಸಿ ಎಂದು ಪೋಷಕರು ಮನವಿ ಮಾಡಿದ್ದಾರೆ.

ಮರುಜನ್ಮ ಸಿಕ್ಕಿದೆ
ಮಾಧ್ಯಮದೊಂದಿಗೆ ಮಾತನಾಡಿರುವ ಮದೀಹ, ನನಗೆ ಮರುಜನ್ಮ ಸಿಕ್ಕಂತಾಗಿದೆ. ಭಾರತ ಸರಕಾರ ಮತ್ತು ರಾಯಭಾರ ಕಚೇರಿಗೆ ಧನ್ಯವಾದ ಅರ್ಪಿಸುವೆ ಎಂದರು. ವಿದ್ಯಾರ್ಥಿ ನವೀನ್‌ ಸಾವು ತುಂಬಾ ಬೇಸರ ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಅಲ್ಲಿ ಬಾಕಿಯಾಗಿರುವ ಇತರ ವಿದ್ಯಾರ್ಥಿಗಳೂ ಸುರಕ್ಷಿತ ವಾಗಿ ಊರು ಸೇರುವಂತಾಗಲಿ ಎಂದು ಹಾರೈಸಿದರು.

ಮದೀಹ ತಾಯಿ ಮಾತನಾಡಿ, ಟಿವಿಯಲ್ಲಿ ಉಕ್ರೇನ್‌ನ ಪರಿಸ್ಥಿತಿಯನ್ನು ನೋಡುವಾಗ ತುಂಬಾ ಭಯವಾಗುತ್ತಿತ್ತು. ಈಗ ತುಂಬಾ ಸಂತೋಷವಾಗಿದೆ. ನನ್ನ ಮಗಳನ್ನು ಕರೆತಂದಂತೆ ಇತರರನ್ನೂ ಕೂಡಲೇ ಕರೆತರಬೇಕು ಎಂದು ಮನವಿ ಮಾಡಿದರು.

Advertisement

ದಿಲ್ಲಿಗೆ ಬಂದ ಇನ್ನಿಬ್ಬರು
ವಿ.ಜೆ. ಶಿನ್ಯಾ ಮತ್ತು ಆಲಿಷಾ ಅವರನ್ನು ಏರ್‌ಲಿಫ್ಟ್ ಮೂಲಕ ದಿಲ್ಲಿಗೆ ಕರೆತರಲಾಗಿದೆ. ಆಲಿಷಾ ಅವರು ಉಕ್ರೇನ್‌-ಪೋಲೆಂಡ್‌ ಗಡಿಯ ಇವಾನೋ ಫ್ರಾನ್ಸಿಸ್ಕೋ ನಗರದ ಫ್ಲ್ಯಾಟ್‌ ಒಂದರಲ್ಲಿ ನೆಲೆಸಿದ್ದರು.

ಈ ನಡುವೆ ದಿಲ್ಲಿ ವಿಮಾನ ನಿಲ್ದಾಣದಿಂದ ವೀಡಿಯೋ ಮೂಲಕ ಸಂದೇಶ ನೀಡಿರುವ ಶಿನ್ಯಾ, ಉಕ್ರೇನ್‌ನಿಂದ ಹಂಗೇರಿ ಮೂಲಕ ಗಡಿ ಪ್ರವೇಶಿಸಲು ಒಂದು ದಿನವೇ ಬೇಕಾಯಿತು. ಅಲ್ಲಿನ ರಾಯಭಾರ ಕಚೇರಿ ಅಧಿಕಾರಿಗಳು ತುಂಬಾ ಸಹಾಯ ಮಾಡಿದ್ದಾರೆ. ಒಟ್ಟು 300 ಮಂದಿ ವಿದ್ಯಾರ್ಥಿಗಳು ದಿಲ್ಲಿಗೆ ತಲುಪಿದ್ದೇವೆ. ಕರ್ನಾಟಕದ 7 ಮಂದಿ ಇದ್ದು, ಸರಕಾರ ಊಟದ ವ್ಯವಸ್ಥೆ ಮಾಡಿದೆ. ದಿಲ್ಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next