Advertisement
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಖಾಡದಲ್ಲಿದ್ದ 15 ಮಂದಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಅಡಗಿರುವ ಇವಿಎಂ ಮತಯಂತ್ರಗಳನ್ನು ಶೇಖರಿಸಿಟ್ಟಿರುವ ನಗರದ ಹೊರ ವಲಯದ ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಜಿಲ್ಲಾಡಳಿತ ಸ್ಥಾಪಿಸಿರುವ ಸ್ಟ್ರಾಂಗ್ ರೂಮ್ ಬಳಿ ಶುಕ್ರವಾರ ಬೆಳಗ್ಗೆ ಕಂಡು ಬಂದ ದೃಶ್ಯಗಳು ಇವು.
Related Articles
Advertisement
ಡೀಸಿ ಮುಂದಾಳತ್ವದಲ್ಲಿ ಬೀಗ ಮುದ್ರೆ: ಶುಕ್ರವಾರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಎಸ್‌ಪಿ ಕೆ.ಸಂತೋಷಬಾಬು, ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ, ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ಸಮ್ಮುಖದಲ್ಲಿ ಬಿಗಿ ಭದ್ರತೆಯಲ್ಲಿ ಬಂದಿರುವ ಇವಿಎಂ ಹಾಗೂ ವಿವಿ ಪ್ಯಾಟ್‌ಗಳ ಯಂತ್ರಗಳನ್ನು ಒಟ್ಟು 8 ಕೊಠಡಿಗಳನ್ನು ಪಡೆದು ಕ್ರಮವಾಗಿ ಜೋಡಿಸಿ ಇಡಲಾಗಿದೆ.
ಸ್ಟ್ರಾಂಗ್ ರೂಮ್‌ಗೆ 18 ಸಿಸಿ ಕ್ಯಾಮೆರಾ ಅಳವಡಿಕೆ: ಸ್ಟ್ರಾಂಗ್ ರೂಮ್ ಇರುವ ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಬರೋಬ್ಬರಿ 18 ಸಿಸಿ ಕ್ಯಾಮೆರಾಗಳನ್ನು ಮುಂಜಾಗ್ರತಾವಾಗಿ ಅಳವಡಿಸಲಾಗಿದ್ದು, 8 ಕೊಠಡಿಗಳಿಗೆ ತಲಾ ಇಬ್ಬರಂತೆ 16 ಮಂದಿ ಕೇಂದ್ರ ಮೀಸಲು ಅರೆಸೇನಾ ಪಡೆಯನ್ನು ಶಸ್ತ್ರಸಜ್ಜಿತವಾಗಿ ನೇಮಿಸಲಾಗಿದೆ.
ಪಾಳಿಯಂತೆ ದಿನದ 24 ಗಂಟೆ ಕಾಲ ಪೊಲೀಸರನ್ನು ನಿಯೋಜಿಸಲಾಗಿದ್ದು, 1 ಡಿವೈಎಸ್‌ಪಿ, 3 ಸಿಪಿಐ, 6 ಪಿಎಸ್‌ಐ ಹಾಗೂ 1 ಡಿಆರ್ ಹಾಗೂ 1 ಕೆಎಸ್‌ಆರ್‌ಪಿ ತುಕಡಿಗಳನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು ತಿಳಿಸಿದರು.
ನಾಗಾರ್ಜುನ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಸ್ಟ್ರಾಂಗ್ ರೂಮ್ ತೆರೆದು ಒಟ್ಟು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು 8 ಕೊಠಡಿಗಳನ್ನು ತೆರೆದು ಇವಿಎಂ ಹಾಗೂ ಮತಯಂತ್ರಗಳನ್ನು ಜೋಡಿಸಿ ಇಡಲಾಗಿದೆ. ಸ್ಟ್ರಾಂಗ್ ರೂಮ್‌ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಎಲ್ಲಾ 8 ಕೊಠಡಿಗಳ ಕಿಟಕಿ, ಬಾಗಿಲುಗಳನ್ನು ಸಂಪೂರ್ಣ ಬಂದ್ ಮಾಡಿ ಸೀಲ್ ಮಾಡಲಾಗಿದೆ. -ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ