ಹುಬ್ಬಳ್ಳಿ: ತಾಂತ್ರಿಕ ಯುಗದಲ್ಲೂ ನೈಸರ್ಗಿಕ ಪ್ರಕ್ರಿಯೆ ಋತುಚಕ್ರದ ಬಗ್ಗೆ ಹೆಣ್ಣು ಮಕ್ಕಳಲ್ಲಿ ಹಲವು ತಪ್ಪು ಅಭಿಪ್ರಾಯಗಳಿವೆ. ಸ್ವತ್ಛತೆ ಬಗ್ಗೆ ಗಮನ ಹರಿಸದಿದ್ದರಿಂದ ಅನೇಕರು ಆರೋಗ್ಯ ಸಮಸ್ಯೆಗಳಿಗೆ ಈಡಾಗುತ್ತಾರೆ. ಆರ್ಥಿಕ, ಧಾರ್ಮಿಕ ಸೇರಿದಂತೆ ವಿವಿಧ ಕಾರಣಗಳಿಂದ ಸ್ಯಾನಿಟರಿ ನ್ಯಾಪ್‌ಕಿನ್ ಬಳಕೆಯಿಂದ ಅನೇಕ ಮಹಿಳೆಯರು ವಿಮುಖರಾಗುತ್ತಾರೆ.
ವಿದ್ಯಾರ್ಥಿನಿಯರಿಗೆ ಕಡಿಮೆ ಹಣದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಒದಗಿಸುವ ದಿಸೆಯಲ್ಲಿ ಮಜೇಥಿಯಾ ಫೌಂಡೇಶನ್ ನಗರದಲ್ಲಿ ಮೂರು ಕಡೆ ಸ್ಯಾನಿಟರಿ ನ್ಯಾಪ್‌ಕಿನ್ ವೆಂಡಿಂಗ್ ಮಶಿನ್ ಹಾಗೂ ಇನ್ಸಿನಿರೇಟರ್ ಅಳವಡಿಸಿದೆ. ನಗರದ ಕೌಲ್ ಪೇಟೆಯ ಆಂಗ್ಲೋ ಉರ್ದು ಮಾಧ್ಯಮಿಕ ಶಾಲೆಯಲ್ಲಿ ಈಗಾಗಲೇ ವೆಂಡಿಂಗ್ ಮಶಿನ್ ಅಳವಡಿಸಲಾಗಿದ್ದು, ಶನಿವಾರ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಹಾಸ್ಟೆಲ್‌ನಲ್ಲಿ ಯಂತ್ರ ಇಡಲಾಗಿದೆ. ಅಲ್ಲದೇ ಬಡಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುವ ಚಿಟಗುಪ್ಪಿ ಆಸ್ಪತ್ರೆಯ ಆವರಣದಲ್ಲಿ ಇನ್ನೊಂದು ವೆಂಡಿಂಗ್ ಮಶಿನ್ ಇಡಲಾಗುತ್ತದೆ.
ಯೋಜನೆ-ಯೋಚನೆ ಹಿನ್ನೋಟ: ಜಿತೇಂದ್ರ ಮಜೇಥಿಯಾ ಅವರು ಒಬ್ಬ ಐಎಎಸ್ ಅಧಿಕಾರಿಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅಧಿಕಾರಿ ನೀಡಿದ ಸಲಹೆಯಿಂದ ಪ್ರೇರಿತರಾಗಿ ಮಶಿನ್ ಅಳವಡಿಸಲು ಮುಂದಾದರು. ವೆಂಡಿಂಗ್ ಯಂತ್ರ ಉತ್ಪಾದನೆ ಮಾಡುವ ಹಲವು ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆದು ಕೊನೆಗೆ ಭಾರತ ಸರ್ಕಾರದ ಹಿಂದೂಸ್ತಾನ್ ಲ್ಯಾಟೆಕ್ಸ್ ಲಿಮಿಟೆಡ್ ಉತ್ಪಾದಿಸುವ ಯಂತ್ರಗಳನ್ನು ಖರೀದಿಸಿದರು. ವೆಂಡಿಂಗ್ ಯಂತ್ರದಲ್ಲಿ ಬಳಕೆ ಮಾಡುವ ನ್ಯಾಪ್‌ಕಿನ್ ಗಳು ಬಯೋ ಡಿಗ್ರೇಡೆಬಲ್ ಆಗಿದ್ದು, ಪರಿಸರಕ್ಕೆ ಹಾನಿಯಾಗದ ಸಾಮಗ್ರಿಗಳಿಂದ ತಯಾರಿಸಲಾಗಿದೆ.
ಏನಿದು ವೆಂಡಿಂಗ್ ಮಶಿನ್: ಹಿಂದೂಸ್ತಾನ್ ಲ್ಯಾಟೆಕ್ಸ್ ಲಿಮಿಟೆಡ್ ಸಂಸ್ಥೆ ವಿನ್ಯಾಸಗೊಳಿಸಿದ ವೆಂಡಿಂಗ್ ಮಶಿನ್ ಹಾಗೂ ಇನ್ಸಿನಿರೇಟರ್ ಅಳವಡಿಸಲಾಗಿದೆ. ಇದರ ಬೆಲೆ 70,000 ರೂ. ಯಂತ್ರ 36 ಪ್ಯಾಡ್‌ಗಳ ಸಾಮರ್ಥ್ಯ ಹೊಂದಿದ್ದು, 10 ರೂ. ನಾಣ್ಯ ಹಾಕಿದರೆ ಮೂರು ನ್ಯಾಪ್‌ಕಿನ್ ಗಳನ್ನು ಪಡೆಯಬಹುದಾಗಿದೆ. 3 ರೂ. 30 ಪೈಸೆಗೆ 1 ನ್ಯಾಪ್‌ಕಿನ್ ಸಿಗುತ್ತದೆ. ನ್ಯಾಪ್‌ಕಿನ್ ಖಾಲಿ ಆದರೆ ಫೌಂಡೇಶನ್ ವತಿಯಿಂದ ಮತ್ತೆ ತುಂಬಿಸಲಾಗುತ್ತದೆ.
ಇನ್ಸಿನಿರೇಟರ್ ಯಾಕೆ?: ಇತ್ತೀಚಿಗೆ ಬಳಸಿದ ನ್ಯಾಪ್‌ಕಿನ್‌ಗಳನ್ನು ಸುಡಲು ಇನ್ಸಿನಿರೇಟರ್‌ಗಳ ಬಳಕೆ ಹೆಚ್ಚಾಗುತ್ತಿದೆ. ಉದ್ಯೋಗ ಸಂಸ್ಥೆಗಳು, ಕಚೇರಿಗಳಲ್ಲಿ ಇನ್ಸಿನಿರೇಟರ್‌ಗಳನ್ನು ಅಳವಡಿಸಲಾಗುತ್ತಿದೆ. ಹಲವು ಹೆಣ್ಣುಮಕ್ಕಳು ಬಳಸಿದ ನ್ಯಾಪ್‌ಕಿನ್‌ಗಳನ್ನು ಕಸದಲ್ಲಿ ಹಾಕುವುದರಿಂದ ಸಾಕಷ್ಟು ತೊಂದರೆಗಳಾಗುತ್ತವೆ.
ಚರಂಡಿಗಳಲ್ಲಿ ಹಾಕುವುದರಿಂದ ಚರಂಡಿಗಳಲ್ಲಿ ತ್ಯಾಜ್ಯ ಸರಾಗವಾಗಿ ಹರಿಯಲು ತೊಂದರೆಯಾಗುತ್ತದೆ. ಡಸ್ಟ್‌ಬಿನ್‌ಗಳಲ್ಲಿ ಹಾಕುವುದರಿಂದ ದನಕರುಗಳು ಅವುಗಳನ್ನು ತಿಂದು ತೊಂದರೆ ಅನುಭವಿಸುತ್ತವೆ. ಅಲ್ಲದೇ ನ್ಯಾಪ್‌ಕಿನ್‌ಗಳನ್ನು ಸರಿಯಾಗಿ ವಿಸರ್ಜಿಸದಿದ್ದರೆ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇನ್ಸಿನಿರೇಟರ್‌ನಲ್ಲಿ ಬಳಸಿದ ನ್ಯಾಪ್‌ಕಿನ್‌ಗಳನ್ನು ದಹಿಸಲಾಗುತ್ತದೆ.
ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮಣ್ಣಿನಲ್ಲಿ ಸೇರಿಕೊಳ್ಳಲು ನೂರಾರು ವರ್ಷಗಳು ಬೇಕು. ನಗರವನ್ನು ಶುಚಿಯಾಗಿಡುವ ಕುರಿತು ಮಹಾನಗರ ಪಾಲಿಕೆಯನ್ನು ದೂರುತ್ತ ಕೂಡುವುದು ಸರಿಯಲ್ಲ. ಇನ್ಸಿನಿರೇಟರ್ ಯಂತ್ರಗಳ ಸಂಖ್ಯೆ ಹೆಚ್ಚಿಸುವುದರಿಂದ ಬಳಕೆ ಮಾಡಿದ ನ್ಯಾಪ್‌ಕಿನ್‌ಗಳ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದಾಗಿದೆ.
* ವಿಶೇಷ ವರದಿ