ನವದೆಹಲಿ: ಇತ್ತೀಚೆಗಷ್ಟೇ ಫುಟ್ಬಾಲ್ ಆಡಿ ಗಮನ ಸೆಳೆದಿದ್ದ ಯೋಗ ಗುರು ಬಾಬಾ ರಾಮ್‌ದೇವ್ ಇದೀಗ ಕುಸ್ತಿ ಅಖಾಡಕ್ಕೆ ಧುಮುಕಿದ್ದಾರೆ. ಅದು ಅಂತಿಂಥವರೊಂದಿಗೆ ಅಲ್ಲ, 2008ರ ಒಲಿಂಪಿಕ್ಸ್‌ನಲ್ಲಿ ಭಾರತ ಸುಶೀಲ್ ಕುಮಾರ್‌ರನ್ನು ಮಣಿಸಿದ ಪ್ರಬಲ ಎದುರಾಳಿ ಆ್ಯಂಡ್ರೆ ಸ್ಟಾಡ್ನಿಕ್ ಜತೆಗೆ ಎನ್ನುವುದು ವಿಶೇಷ. ಬುಧವಾರ ಪ್ರೊ ಕುಸ್ತಿ ಲೀಗ್‌ನ 2ನೇ ಸೆಮಿಫೈನಲ್ ಪಂದ್ಯದ ವೇಳೆ ನಡೆದ ಸೌಹಾರ್ದ ಪಂದ್ಯದಲ್ಲಿ ರಾಮ್‌ದೇವ್ ತಮ್ಮ ಪವರ್ ತೋರಿಸಿದರು. ಒಲಿಂಪಿಕ್ಸ್ ಪದಕ ವಿಜೇತನನ್ನು 12-0 ಅಂತರದಿಂದ ಸೋಲಿಸಿದರು. ಯೋಗದಲ್ಲಿ ಎಷ್ಟು ಶಕ್ತಿ ಇದೆ ಎನ್ನುವುದನ್ನು ತೋರಿಸುವ ಸಲುವಾಗಿ ಒಲಿಂಪಿಕ್ಸ್ ಪದಕ ವಿಜೇತನ ವಿರುದ್ಧ ಹೋರಾಡಿದೆ ಎಂದು ರಾಮ್‌ದೇವ್ ತಿಳಿಸಿದರು.
ಪಂದ್ಯಕ್ಕೆ ಮುನ್ನ ಬಾಬಾ ರಾಮ್ ದೇವ್ ಅವರು ಸೂರ್ಯ ನಮಸ್ಕಾರ ಗೈದು ಕುಸ್ತಿಯನ್ನು ಆರಂಭಿಸಿದ್ದರು. ಭಾರತ್ ಮಾತಾ ಕೀ ಜೈ; ವಂದೇ ಮಾತರಂ ಎಂಬ ಘೋಷಣೆಗಳೊಂದಿಗೆ ಕುಸ್ತಿ ಪಂದ್ಯವು ರೋಮಾಂಚಕ ಅಂತ್ಯವನ್ನು ಕಂಡಿತು.
ವಿಶೇಷವೆಂದರೆ ಬಾಬಾ ರಾಮ್ ದೇವ್ ಅವರು ಈ ಮೈತ್ರಿ ಪಂದ್ಯಕ್ಕಾಗಿ ಕಳೆದ ಕೆಲ ಸಮಯದಿಂದ ತೀವ್ರ ಮಟ್ಟದ ತರಬೇತಿಯನ್ನು ನಡೆಸಿ ಪೂರ್ಣ ಮಟ್ಟದ ಸಿದ್ಧತೆಯನ್ನು ಮಾಡಿಕೊಂಡಿದ್ದರು.
“ನಾನು ಈ ಹಿಂದೆ ರಾಷ್ಟ್ರ ಮಟ್ಟದ ಕುಸ್ತಿ ಪಟುಗಳೊಂದಿಗೆ ಕುಸ್ತಿ ನಡೆಸಿದ್ದೇನೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಪಟುವಿನೊಂದಿಗೆ ಕುಸ್ತಿ ಮಾಡುವ ಅನುಭವವೇ ಬೇರೆ.ಇದು ಹೆಚ್ಚು ರೋಮಾಂಚಕವಾಗಿದೆ. ಈ ಪಂದ್ಯದಲ್ಲಿ ನೀವು ಯೋಗದ ನಿಜವಾದ ಶಕ್ತಿ ಏನೆಂಬುದನ್ನು ಕಾಣುವಿರಿ’ ಎಂದು ಬಾಬಾ ರಾಮ್ ದೇವ್ ಅವರು ಪಂದ್ಯಕ್ಕೆ ಮುನ್ನ ಹೇಳಿದ್ದರು. ಅಂತೆಯೇ ಅದನ್ನು ತಮ್ಮ ರೋಮಾಂಚಕ ಕುಸ್ತಿ ಪಂದ್ಯದಲ್ಲಿ ವೀಕ್ಷಕರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ತೋರಿಸಿಕೊಟ್ಟರು.
ಸ್ಟಾಡ್‌ನಿಕ್ ಅವರು 2008ರ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಅವರನ್ನು ಸàಒಲಿಸಿ ಪುರುಷರ ಫ್ರೀಸ್ಟೈಲ್ ಲೈಟ್‌ವೇಟ್ ವಿಭಾಗದ ಫೈನಲ್‌ಗೆ ತೇರ್ಗಡೆಗೊಂಡು ಅಲ್ಲಿ ರಜತ ಪದಕವನ್ನು ಗೆದ್ದಿದ್ದರು.
ಕಳೆದ ವರ್ಷ ಬಾಬಾ ರಾಮ್ ದೇವ್ ಅವರು ಹರಿದ್ವಾರದಲ್ಲಿನ ತಮ್ಮ ಆಶ್ರಮದ 20ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮೊಂದಿಗೆ ಕುಸ್ತಿ ನಡೆಸುವಂತೆ ಸುಶೀಲ್ ಕುಮಾರ್‌ಗೆ ಚ್ಯಾಲೆಂಜ್ ಹಾಕಿದ್ದರು.
ಪಂಜಾಬ್ ಫೈನಲ್‌ಗೆ
ತೀವ್ರ ಪೈಪೋಟಿ ಯಿಂದ ನಡೆದ ಪಂದ್ಯದಲ್ಲಿ ಪಂಜಾಬ್ ರಾಯಲ್ಸ್ ಪ್ರೊ ಕುಸ್ತಿ ಲೀಗ್‌ನಲ್ಲಿ ಮುಂಬೈ ಮರಾಠಿ ತಂಡವನ್ನು 5-4 ರಿಂದ ಬಗ್ಗುಬಡಿದು ಫೈನಲ್‌ಪ್ರವೇಶಿಸಿದೆ. ಫೈನಲ್‌ನಲ್ಲಿ ಹರ್ಯಾಣ ಹಮ್ಮರ್ ಸವಾಲನ್ನು ಎದುರಿಸಲಿದೆ. ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡದ ಕುಸ್ತಿಪಟುಗಳು ಮೇಲುಗೈ ಸಾಧಿಸಿದರು. ಆದರೆ ಹಾಲಿ ಚಾಂಪಿಯನ್ ಮುಂಬೈ ತಂಡದ ಕುಸ್ತಿಪಟು ಗಳು ಕೂಡ ಭರ್ಜರಿ ಫೈಟ್ ನೀಡಿದ್ದಾರೆ.