ಬಿಲಾಸ್‌ಪುರ: ರಾಯ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ರ‍್ಯಾಲಿಗೆ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ವೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸೂರಜ್‌ಪುರ ಜಿಲ್ಲೆಯ ಸಜನ್ (30), ರುಕ್‌ದೇವ್ (45) ಮತ್ತು ಬಸ್ ಚಾಲಕ ಬಲರಾಮ್‌ಪುರ ಜಿಲ್ಲೆಯ ನಿವಾಸಿ ಅಕ್ರಂ ರಾಜಾ (28) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸುಮಾರು 40 ಜನರಿದ್ದ ಬಸ್ ಅಂಬಿಕಾಪುರದಿಂದ ರಾಯಪುರಕ್ಕೆ ತೆರಳುತ್ತಿದ್ದಾಗ ಬೆಲ್ಟಾರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ಬಿಲಾಸ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ರಸ್ತೆಬದಿಯಲ್ಲಿ ನಿಂತಿದ್ದ ಟ್ರಕ್ ಅನ್ನು, ಬಸ್ ಚಾಲಕನಿಗೆ ಸ್ಪಷ್ಟವಾಗಿ ಗೋಚರಿಸದ ಕಾರಣ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
ಸೂರಜ್‌ಪುರದ ಬಿಜೆಪಿಯ ಲಾಟೋರಿ ಘಟಕದ ಮಂಡಲ ಅಧ್ಯಕ್ಷ ಲಿಲು ಗುಪ್ತಾ ಮತ್ತು ಸೂರಜ್‌ಪುರದ ಪಕ್ಷದ ಮಂಡಲ ಪ್ರಧಾನ ಕಾರ್ಯದರ್ಶಿ ವಿಶಂಭರ್ ಯಾದವ್ ಸ್ಥಿತಿ -ಗಂಭೀರವಾಗಿದ್ದು ಅವರನ್ನು ಬಿಲಾಸ್‌ಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.
ಗಾಯಗೊಂಡ ಇತರ ನಾಲ್ವರನ್ನು ಛತ್ತೀಸ್‌ಗಢ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಐಎಂಎಸ್) ಬಿಲಾಸ್‌ಪುರಕ್ಕೆ ದಾಖಲಿಸಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತಪಟ್ಟವರ ಪ್ರತಿ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ರಾಯ್‌ಪುರದ ಸೈನ್ಸ್ ಕಾಲೇಜು ಮೈದಾನದಲ್ಲಿ ಪ್ರಧಾನಿಯವರ ರ‍್ಯಾಲಿಯನ್ನು ಆಯೋಜಿಸಲಾಗಿತ್ತು .