ರಾಯಪುರ: ಸಾರ್ವಜನಿಕರ ಆಸ್ತಿಪಾಸ್ತಿಗೆ ನಿರಂತರ ಹಾನಿ ಮಾಡುತ್ತ, ಸಾವುನೋವಿಗೆ ಕಾರಣವಾಗುತ್ತಿದ್ದ ಛತ್ತೀಸಗಢ ನಕ್ಸಲರನ್ನು ಸಹಜಜೀವನಕ್ಕೆ ಮರಳಿ ಕರೆತರುವ “ಲೊನ್ ವರ್ರಟು’ ಯೋಜನೆ ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಭಾನುವಾರ ಮೂವರು ನಕ್ಸಲರು ದಾಂತೇವಾಡ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ, ಶರಣಾಗಿದ್ದಾರೆ.
ಇವರು ಪೊಳ್ಳು ಮಾವೋವಾದಿ ವಿಚಾರಗಳಿಂದ ಬೇಸತ್ತು ಸಹಜ ಜೀವನಕ್ಕೆ ಮರಳಲು ಬಯಸಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
ಶರಣಾಗಿರುವ ಮೂವರ ಪೈಕಿ ಒಬ್ಬರಾದ ಬುದ್ರಾಮ್ ಕವಸಿ (24) ತಲೆಗೆ 1 ಲಕ್ಷ ರೂ. ಘೋಷಿಸಲಾಗಿತ್ತು! ಖುಟ ಕವಸಿ (22), ಲಕ್ಮ ರಾಮ್ ಕಶ್ಯಪ್ (22) ಇನ್ನಿಬ್ಬರು ಶರಣಾಗತರು. ಇದುವರೆಗೆ ಒಟ್ಟು 327 ನಕ್ಸಲರು ದಾಂತೇವಾಡದಲ್ಲಿ ಶರಣಾಗಿದ್ದಾರೆ.
ತಮ್ಮ ತಲೆ ಮೇಲೆ ನಗದು ಬಹುಮಾನದ ತೂಗುಗತ್ತಿಯನ್ನು ಹೊಂದಿಯೇ ತಿರುಗಾಡುತ್ತಿದ್ದ 87 ಮಂದಿಯೂ ಇವರಲ್ಲಿ ಸೇರಿದ್ದಾರೆ.
ಇದನ್ನೂ ಓದಿ :ಕೋವಿಡ್ ನಿರ್ಮೂಲನೆಗೆ ರೋಗನಿರೋಧಕ ಪಾನ್ ಲಡ್ಡು
ಮಹಾರಾಷ್ಟ್ರದಲ್ಲಿ ಸ್ಫೋಟಕಗಳು ವಶ: ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ ಪೊಲೀಸರ ಮೇಲೆ ದಾಳೆಯೆಸಗಲು ಹೊಂಚುಹಾಕಿದ್ದ ನಕ್ಸಲರ ಮೇಲೆ ಸಿ-60 ಪೊಲೀಸ್ ಕಮ್ಯಾಂಡೊಗಳು ದಾಳಿ ಮಾಡಿದ್ದಾರೆ. ಎರಡೂ ಗುಂಪಿನ ನಡುವೆ ಗುಂಡಿನ ನಡೆದ ಪರಿಣಾಮ, ನಕ್ಸಲರು ಜಾಗಬಿಟ್ಟು ತೆರಳಿದ್ದಾರೆ. ಈ ವೇಳೆ 1 ರೈಫಲ್, ಮದ್ದುಗುಂಡು, ಕುಕ್ಕರ್ ಬಾಂಬ್ ಸೇರಿದಂತೆ ಹಲವು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.