Advertisement

ಬಿಹಾರ, ಗುಜರಾತ್‌ ಆಯ್ತು ಈಗ ಉ.ಪ್ರ.ದಲ್ಲೂ ರಾಜೀನಾಮೆ ಶಾಕ್‌

05:20 AM Jul 30, 2017 | Team Udayavani |

– ಇಬ್ಬರು ಎಸ್ಪಿ, ಓರ್ವ ಬಿಎಸ್‌ಪಿ ಶಾಸಕರಿಂದ ರಾಜೀನಾಮೆ

Advertisement

– ಮೋದಿ, ಯೋಗಿ ಗುಣಗಾನ ಮಾಡಿ ಬಿಜೆಪಿಯತ್ತ ಹೆಜ್ಜೆ

ಲಕ್ನೋ: ಕಾಂಗ್ರೆಸ್‌ ಮುಕ್ತ ಭಾರತದ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ, ಈಗ ವಿಪಕ್ಷ ಮುಕ್ತ ಭಾರತದತ್ತ ಮುನ್ನುಗ್ಗುತ್ತಿದೆ. ಒಂದೊಂದೇ ರಾಜ್ಯದಲ್ಲಿ ತನ್ನ ಹಿಡಿತ ಸ್ಥಾಪಿಸಿಕೊಳ್ಳುತ್ತಿರುವ ಅದು, ಬಿಹಾರದಲ್ಲಿ ನಿತೀಶ್‌ ಜತೆ ಮರು ಸ್ನೇಹ ಮಾಡಿಕೊಂಡಿತು. ಈಗ ಗುಜರಾತ್‌ ಮತ್ತು ಉತ್ತರಪ್ರದೇಶಗಳಲ್ಲಿ ಆಪರೇಶನ್‌ ಕಮಲ ನಡೆಸಿದ್ದು, ವಿಪಕ್ಷಗಳಿಗೆ ಶಾಕ್‌ ಮೇಲೆ ಶಾಕ್‌ ಕೊಡುತ್ತಿದೆ. ಇದರ ಜತೆಗೆ ದಿಲ್ಲಿ ಮತ್ತು ತಮಿಳುನಾಡಿನ ಮೇಲೆ ಪ್ರಧಾನಿ ಮೋದಿ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕಣ್ಣಿಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಇಬ್ಬರ ರಾಜೀನಾಮೆ: 2019ರ ಲೋಕಸಭೆ ಚುನಾವಣೆ ಹೊತ್ತಿಗೆ ಪಕ್ಷವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು ಮುಂದಾಗಿರುವ ಬಿಜೆಪಿ, ವಿಪಕ್ಷಗಳ (ಯುಪಿಎ) ಶಾಸಕರನ್ನು ಸೆಳೆಯುತ್ತಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್‌ ಶಾಸಕರ ರಾಜೀನಾಮೆ ಪ್ರಹಸನದ ಬೆನ್ನಲ್ಲೇ, ಶನಿವಾರ ಸಮಾಜವಾದಿ ಪಕ್ಷ (ಎಸ್‌ಪಿ)ದ ಇಬ್ಬರು, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಓರ್ವ ಶಾಸಕ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಸೇರ್ಪಡೆ ಆಗುತ್ತಿರುವ ಬಗ್ಗೆಯೂ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಬುಕ್ಕಲ್‌ ನವಾಬ್‌, ಯಶವಂತ್‌ ಸಿಂಗ್‌ ಹಾಗೂ ಠಾಕೂರ್‌ ಜೈವೀರ್‌ ಸಿಂಗ್‌ ರಾಜೀನಾಮೆ ಸಲ್ಲಿಸಿ ಬಿಜೆಪಿಯತ್ತ ಮುಖಮಾಡಿರುವ ಶಾಸಕರು. ರಾಜೀನಾಮೆ ಬಳಿಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರ ಗುಣಗಾನ ಮಾಡಿದ್ದಾರೆ.

ದಿಲ್ಲಿ, ತಮಿಳುನಾಡು ಮುಂದಿನ ಟಾರ್ಗೆಟ್‌
ಬಿಹಾರ ಆಯ್ತು, ಗುಜರಾತ್‌, ಉತ್ತರ ಪ್ರದೇಶದಲ್ಲೂ ಆಪರೇಷನ್‌ ನಡೆಯುತ್ತಿದೆ. ಇನ್ನು ಮೋದಿ-ಶಾ ಅವರ ಮುಂದಿನ ಗುರಿ ದಿಲ್ಲಿ ಮತ್ತು ತಮಿಳುನಾಡು! ಇಂಥದ್ದೊಂದು ಸುಳಿವು ಬಿಜೆಪಿ ಪಾಳಯದಿಂದಲೇ ಹೊರ ಬಿದ್ದಿದೆ. ದಿಲ್ಲಿಯಲ್ಲಿ ಆಡಳಿತದಲ್ಲಿರುವ ಆಮ್‌ ಆದ್ಮಿ ಪಕ್ಷದಲ್ಲಿ ಬಿರುಕು ಮೂಡುತ್ತಿದ್ದು, ಪಕ್ಷದ ನಾಯಕರು ಮುಗುಮ್ಮಾಗಿ ಕುಳಿತಿದ್ದಾರೆ. ಅಲ್ಲದೆ ಎಎಪಿಯ 21ಕ್ಕೂ ಹೆಚ್ಚು ಶಾಸಕರು ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿ ಅನರ್ಹತೆಯ ಸುಳಿಯಲ್ಲಿದ್ದಾರೆ. ಒಂದು ವೇಳೆ ಇವರು ಅನರ್ಹವಾದರೆ ಅವಧಿಗೂ ಮುನ್ನವೇ ಚುನಾವಣೆಗೆ ಹೋಗಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಈಗಾಗಲೇ ಕೆಲವು ಶಾಸಕರು ಕೇಜ್ರಿವಾಲ್‌ ವಿರುದ್ಧ ನಿಂತಿರುವುದು ಬಹಿರಂಗವಾಗಿದೆ.

Advertisement

ಇನ್ನು ತಮಿಳುನಾಡಿನಲ್ಲಿ ಜಯಲಲಿತಾ ನಿಧನ ಹೊಂದಿದ ಮೇಲೆ ಎಐಎಡಿಎಂಕೆ ಪಕ್ಷ ಇಬ್ಭಾಗವಾಗಿದೆ. ಪಳನಿಸ್ವಾಮಿ ನೇತೃತ್ವದ ಸರಕಾರ ಆಡಳಿತದಲ್ಲಿದ್ದರೂ ಕೇಂದ್ರ ಸರಕಾರದ ಜತೆ ಉತ್ತಮ ಸಂಬಂಧ ಹೊಂದಿರುವುದು ಮುಚ್ಚಿಡುವ ಸಂಗತಿಯೇನಲ್ಲ. ಇನ್ನು ಇನ್ನೊಂದು ಗುಂಪಾದ ಪನ್ನೀರ್‌ ಸೆಲ್ವಂ ಬಣವೂ ಬಿಜೆಪಿ ಜತೆ ಉತ್ತಮ ಬಾಂಧವ್ಯ ಇರಿಸಿಕೊಂಡಿದೆ. ಅಲ್ಲದೆ ರಾಜಕೀಯ ಪ್ರವೇಶಕ್ಕೆ ಸಿದ್ಧವಾಗಿರುವ ರಜನೀಕಾಂತ್‌ ಕೂಡ ಪ್ರಧಾನಿ ಮೋದಿ ಜತೆ ಚೆನ್ನಾಗಿದ್ದಾರೆ. ಇವರು ಪ್ರಾದೇಶಿಕ ಪಕ್ಷ ಕಟ್ಟಿದರೂ ಅದನ್ನು ಮುಂದೆ ಜತೆಯಲ್ಲಿ ಸೇರಿಸಿಕೊಳ್ಳಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಅಲ್ಲದೆ ಎಐಎಡಿಎಂಕೆಯ ಒಂದು ಬಣವನ್ನೂ ಬಿಜೆಪಿಯೊಳಗೆ ವಿಲೀನ ಮಾಡಿಕೊಳ್ಳುವ ಲೆಕ್ಕಾಚಾರವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next