Advertisement

ಅನೈತಿಕ ಸಂಬಂಧ; ದೃಶ್ಯಂ ಸಿನಿಮಾ ಮಾದರಿಯಲ್ಲೇ ಕೊಲೆಗೈದು ಹೂತು ಹಾಕಿ ಕಥೆ ಕಟ್ಟಿದ್ರು!

10:03 AM Feb 04, 2020 | Nagendra Trasi |

ನಾಗ್ಪುರ್:ದೃಶ್ಯಂ ಸಿನಿಮಾ ಮಾದರಿಯಲ್ಲಿಯೇ ಕೊಲೆ ಕೃತ್ಯ ಎಸಗಿ ಆತನ ಶವವನ್ನು ಫುಡ್ ಸ್ಟಾಲ್ ನ ಹಿಂಬದಿ ಆವರಣದೊಳಗೆ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಹಾರಾಷ್ಟ್ರದ ನಾಗ್ಪುರ್ ಪೊಲೀಸರು ಬಂಧಿಸಿದ್ದಾರೆ.

Advertisement

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಆರೋಪಿ ಅಜಯ್ ದೇವಗನ್ ನಟನೆಯ ಬಾಲಿವುಡ್ ನ ದೃಶ್ಯಂ ಸಿನಿಮಾದಿಂದ ಪ್ರಭಾವಿತನಾಗಿ ಪಂಕಜ್ ದಿಲೀಪ್ ಗಿರಾಂಕರ್ (32) ಎಂಬಾತನನ್ನು ಅಮರ್ ಸಿಂಗ್ ಹತ್ಯೆಗೈದಿದ್ದ. ಪಂಕಜ್ ಹಳ್ದಿರಾಮ್ ಕಂಪನಿಯಲ್ಲಿ ಇಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ವರದಿ ತಿಳಿಸಿದೆ.

ಏನಿದು ಪ್ರಕರಣ:

ಪ್ರಮುಖ ಆರೋಪಿ ಅಮರ್ ಸಿಂಗ್ ಅಲಿಯಾಸ್ ಜೋಗೇಂದರ್ ಸಿಂಗ್ ಠಾಕೂರ್ (24ವರ್ಷ) ಸ್ವಂತ ಫುಡ್ ಸ್ಟಾಲ್ ಹೊಂದಿದ್ದ. ಈತ ಗಿರಾಂಕರ್ ಪತ್ನಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ನಿಲೇಶ್ ಭರ್ನೆ ಸುದ್ದಿಗಾರರಿಗೆ ತಿಳಿಸಿದ್ದರು.

ಡಿಸೆಂಬರ್ 28ರಂದು ಗಿರಾಂಕರ್ ತನ್ನ ಕುಟುಂಬವನ್ನು ನೆರೆಯ ವಾರ್ಧಾ ಜಿಲ್ಲೆಗೆ ಸ್ಥಳಾಂತರಿಸಿದ್ದ. ಕೆಲವು ಸಮಯದ ಮಟ್ಟಿಗೆ ಪತ್ನಿಯನ್ನು ಠಾಕೂರ್ ನಿಂದ ದೂರ ಇರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದ. ನಂತರ ತನ್ನ ಬೈಕ್ ನಲ್ಲಿ ಠಾಕೂರ್ ಫುಡ್ ಸ್ಟಾಲ್ ಹತ್ತಿರ ಬಂದು ಪತ್ನಿ ಜತೆಗಿನ ಸಂಬಂಧ ಬಿಟ್ಟು ಬಿಡುವಂತೆ ಕೇಳಿಕೊಂಡಿದ್ದ ಎಂದು ವರದಿ ತಿಳಿಸಿದೆ.

Advertisement

ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದ ವೇಳೆ ಠಾಕೂರ್ ಹರಿತವಾದ ತಲವಾರಿನಿಂದ ಗಿರಾಂಕರ್ ನ ತಲೆಯನ್ನೇ ಕತ್ತರಿಸಿಬಿಟ್ಟಿದ್ದ. ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದ ಗಿರಾಂಕರ್ ಸಾವನ್ನಪ್ಪಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನಂತರ ಅಡುಗೆ ಸಹಾಯಕ ಹಾಗೂ ಮತ್ತೊಬ್ಬನ ನೆರವಿನೊಂದಿಗೆ ಶವವನ್ನು ಸ್ಟೀಲ್ ಡ್ರಮ್ ನೊಳಗೆ ಹಾಕಿದ್ದ. ಮತ್ತೊಬ್ಬ ವ್ಯಕ್ತಿಯನ್ನು ಕರೆದು ಫುಡ್ ಸ್ಟಾಲ್ ಹಿಂದೆ ಹತ್ತು ಅಡಿ ಆಳದ ಹೊಂಡ ತೆಗೆಯಲು ಹೇಳಿದ್ದ. ಹೊಂಡದೊಳಗೆ 50 ಕೆಜಿ ಉಪ್ಪು ಸುರಿದು ಅದರೊಳಗೆ ಶವ ಇಟ್ಟು ಮರಳಿನಿಂದ ಮುಚ್ಚಿದ್ದ. ಜತೆಗೆ ಆತನ ಮೋಟಾರ್ ಸೈಕಲ್ ಅನ್ನು ಕೂಡಾ ಹೊಂಡದೊಳಗೆ ಹಾಕಿ ಮುಚ್ಚಿಬಿಟ್ಟಿದ್ದ ಎಂದು ಭರ್ನೆ ತಿಳಿಸಿದ್ದಾರೆ.

ಆರೋಪಿ ಠಾಕೂರ್ ಗಿರಾಂಕರ್ ಮೊಬೈಲ್ ಫೋನ್ ಅನ್ನು ರಾಜಸ್ಥಾನದತ್ತ ತೆರಳುವ ಲಾರಿ ಮೇಲೆ ಎಸೆದು ಬಿಟ್ಟಿದ್ದ. ಏತನ್ಮಧ್ಯೆ ಗಿರಾಂಕರ್ ಮನೆಗೆ ವಾಪಸ್ ಬಾರದಿರುವುದನ್ನು ಕಂಡು ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ನಡೆಸುತ್ತಿದ್ದ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳಿಗೆ ಗಿರಾಂಕರ್ ಹಲವು ಬಾರಿ ಫುಡ್ ಸ್ಟಾಲ್ ಬಳಿ ಹೋಗಿರುವ ಸುಳಿವು ದೊರಕಿತ್ತು. ಆ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಎಲ್ಲಾ ಮಾಹಿತಿ ಕಲೆ ಹಾಕಿ, ಪೊಲೀಸರು ಆರೋಪಿ ಠಾಕೂರ್ ಹಾಗೂ ಅಡುಗೆಯ ಮನೋಜ್ ಅಲಿಯಾಸ್ ಮುನ್ನಾ ರಾಮ್ ಪರ್ವೇಶ್ ತಿವಾರಿ (37ವರ್ಷ) ಹಾಗೂ ಶುಭಂ ಅಲಿಯಾಸ್ ತುಷಾರ್ ರಾಕೇಶ್ ಡೋಂಗ್ರೆ(28ವರ್ಷ)ಯನ್ನು ಬಂಧಿಸಿದ್ದರು.

ವಿಚಾರಣೆ ವೇಳೆ ಹತ್ಯೆಯ ವಿಚಾರವನ್ನು ಬಾಯ್ಬಿಟ್ಟಿರುವುದಾಗಿ ಪೊಲೀಸ್ ಅಧಿಕಾರಿ ಭರ್ನೆ ತಿಳಿಸಿದ್ದಾರೆ. ಬಳಿಕ ಹೊಂಡ ಅಗೆದು ಶವದ ಮೂಳೆ ಹಾಗೂ ಮೋಟಾರ್ ಸೈಕಲ್ ಅನ್ನು ವಶಕ್ಕೆ ತೆಗೆದುಕೊಂಡಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next