Advertisement

3 ವರ್ಷದಲ್ಲಿ ಪ್ರತಿ ರೈತನಿಗೆ 3ಲಕ್ಷ ಸಾಲ

08:29 AM Sep 25, 2022 | Team Udayavani |

ಕಲಬುರಗಿ: ಆರ್ಥಿಕ ನಷ್ಟದಿಂದ ಬ್ಯಾಂಕ್‌ ಹಂತ-ಹಂತವಾಗಿ ಹೊರ ಬರುತ್ತಿದ್ದು, ಮೂರು ವರ್ಷದೊಳಗೆ ಪ್ರತಿ ರೈತರಿಗೆ ಬಡ್ಡಿ ರಹಿತವಾಗಿ ಮೂರು ಲಕ್ಷ ರೂ ಸಾಲ ನೀಡುವ ಯೋಜನೆ ಹೊಂದ ಲಾಗಿದೆ ಎಂದು ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.

Advertisement

ನಗರದ ಬೆಣ್ಣೂರು ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬ್ಯಾಂಕ್‌ ನ 96 ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಮೂರು ಲಕ್ಷ ರೂ. ಬಡ್ಡಿ ರಹಿತ ಸಾಲವನ್ನು ಐದು ಲಕ್ಷ ರೈತರಿಗೆ‌ ನೀಡಲಾಗುವುದು. ತಾವು ಬ್ಯಾಂಕ್‌ ಅಧ್ಯಕ್ಷರಾದ ಸಂದರ್ಭದಲ್ಲಿ ಬ್ಯಾಂಕ್‌ 54ಕೋಟಿ ರೂ. ಹಾನಿಯಲ್ಲಿತ್ತು. ಕೆಲವು ಕಠಿಣ ಕ್ರಮ ಕೈಗೊಂಡ ಪರಿಣಾಮ ಹಾಗೂ ಸಾಲ ವಸೂಲಾತಿ ಕಠಿಣಗೊಳಿಸಿದ್ದರಿಂದ ನಷ್ಟ ತಗ್ಗಿಸ ಲಾಗಿದೆ. ಪ್ರಮುಖವಾಗಿ ಶೆ. 1ರಷ್ಟು ಸೇವಾ ತೆರಿಗೆ ವಿಧಿಸಿರುವುದು, ಈಗ 38 ಕೋಟಿ ರೂ.ಗೆ ತಂದು ನಿಲ್ಲಿಸಲಾಗಿದೆ. ಆದರೆ ತಮ್ಮ ಅಧ್ಯಕ್ಷತೆಯ ಒಂದೂವರೆ ವರ್ಷದ ಅವಧಿಯಲ್ಲಿ 20ಕೋಟಿ ರೂ. ಲಾಭ ಗಳಿಸಿದೆ ಎಂದು ವಿವರಿಸಿದರು.

ಸಂಕಷ್ಟದ ನಡುವೆ 200ಕೋಟಿ ರೂ. ಅಪೆಕ್ಸ್‌ ಸಾಲವನ್ನು ಬಡ್ಡಿ ಸಮೇತ ಮುಟ್ಟಿಸಲಾಗಿದೆ. ಹೀಗಾಗಿ ಹೊಸದಾಗಿ ಸಾಲ ದೊರೆಯಲು ಸಾಧ್ಯವಾಗಿದೆ. ಪ್ರಸಕ್ತವಾಗಿ 632ಕೋಟಿ ರೂ. ಬೆಳೆ ಸಾಲ ವಿತರಿಸಲಾಗಿದೆ ಎಂದು ಹೇಳಿದರು.

ಒಟಿಎಸ್ಮುಂದುವರಿಕೆ: ಮಧ್ಯಮಾವಧಿ ಸಾಲ ವಸೂಲಾತಿಯಾಗದಿರುವುದು ನಷ್ಟಕ್ಕೆ ಕಾರಣವಾಗಿದೆ. ಸಾಲ ವಸೂಲಾತಿಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸಾಲ ಮರು ಪಾವತಿ ಮಾಡಲು ಏಕ ಕಾಲಿಕ ಸಾಲ ತಿರುವಳಿ ( ಒನ್‌ ಟೈಮ್‌ ಸೆಟ್ಲೆಮೆಂಟ್‌) ಯೋಜನೆ ಜಾರಿಗೆ ತರಲಾಗಿದೆ. ಸಾಲದ ಬಡ್ಡಿಯಲ್ಲಿ ಶೇ. 40ರಷ್ಟು ರಿಯಾಯ್ತಿ ನೀಡಲಾಗಿದೆ. ಒಟಿಎಸ್‌ನ್ನು ಸಾಲಗಾರರ ಅನುಕೂಲಕ್ಕಾಗಿ ಬರುವ ಅಕ್ಟೋಬರ್‌ 31ರ ವರೆಗೆ ಸಾಲ ಮರುಪಾವತಿಸಲು ಅವಕಾಶ ವಿಸ್ತರಿಸಲಾಗಿದೆ ಎಂದು ತೇಲ್ಕೂರ ಪ್ರಕಟಿಸಿದರಲ್ಲದೇ ಹರಾಜಿಗೆ ಅವಕಾಶ ಕೊಡಬಾರದು ಎಂದರು.

Advertisement

ಸಾಲ ಮನ್ನಾದ ರೈತರಿಗೂ ಶೀಘ್ರದಲ್ಲೇ ಬೆಳೆಸಾಲ ವಿತರಿಸಲಾಗುವುದು. ಮುಂದಿನ ವರ್ಷ ದೊಳಗೆ ಈಗಿರುವ 11 ಬ್ರ್ಯಾಂಚ್‌ಗಳನ್ನು 21 ಬ್ರ್ಯಾಂಚ್‌ಗಳಿಗೆ ವಿಸ್ತರಿಸಲಾಗುವುದು. ನಷ್ಟದಲ್ಲಿರುವ ಸಂಘಗಳ ಪುನಶ್ಚೇತನ ಗೊಳಿಸಲಾಗುವುದು ಎಂದು ಹೇಳಿದರು.

ಕೃಷಿ ಆಧಾರಿತ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಣ್ಣ ಅಂದರೆ ಮಿನಿ ದಾಲ್‌ ಮಿಲ್‌, ಆಯಿಲ್‌ ಮಿಲ್‌, ಹಿಟ್ಟಿನ ಗಿರಣಿ ಸೇರಿದಂತೆ ಇತರ ಉದ್ಯಮಗಳಿಗೆ ಸಾಲ ನೀಡಲು ಡಿಸಿಸಿ ಬ್ಯಾಂಕ್‌ ನಿರ್ಧರಿಸಿದೆ. ಈ ಸಾಲ ಪಡೆದು ಅರ್ಥಿಕವಾಗಿ ಸ್ವಾವಲಂಬನೆ ಹೊಂದಬೇಕು ಎಂದರು.

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸುರೇಶ ಸಜ್ಜನ ಮಾತನಾಡಿ, ಬ್ಯಾಂಕ್‌ ಸುಧಾರಣೆ ನೋಡಿಕೊಂಡು ದೊಡ್ಡ ಮೊತ್ತದ ಸಾಲ ನೀಡುವಿಕೆಗೆ ಮುಂದಾಗಲಾಗುವುದು ಎಂದರು.

ಡಿಸಿಸಿ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರಣಬಸಪ್ಪ ಬೆಣ್ಣೂರ ಮಾತನಾಡಿ, ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಿದರೆ ಮತ್ತಷ್ಟು ಅಭಿವೃದ್ಧಿ ಸಾ ಧಿಸಬಹುದು ಎಂದು ಹೇಳಿದರು.

ಪ್ರಶಸ್ತಿ: ಅಫಜಲಪುರ ತಾಲೂಕಿನ ಭೈರಾಮಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಸೇಡಂ ತಾಲೂಕಿನ ಶಿಲಾರಕೋಟ, ಕಲಬುರಗಿ ತಾಲೂಕಿನ ಫಿರೋಜಾಬಾದ್‌, ಆಳಂದ ತಾಲೂಕಿನ ಮಡಕಿ, ಜೇವರ್ಗಿ ತಾಲೂಕಿನ ಕುಳಗೇರಾ, ಚಿತ್ತಾಪುರ ತಾಲೂಕಿನ ಕೊಲ್ಲೂರು, ಚಿಂಚೋಳಿ ತಾಲೂಕಿನ ಹಸರಗುಂಡಗಿ, ಯಾದಗಿರಿ ತಾಲೂಕಿನ ಯೆಲೇರಿ, ಶಹಾಪುರ ತಾಲೂಕಿನ ಮಾಡಬೂಳ, ಸುರಪುರ ತಾಲೂಕಿನ ಬೈಚಬಾಳ ಹಾಗೂ ಇತರ ಸಹಕಾರಿ ಸಂಘಗಳಿಗೆ ಉತ್ತಮ ಸಂಘವೆಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಶಿವಾನಂದ ಮಾನಕರ್‌, ಅಶೋಕ ಸಾವಳೇಶ್ವರ, ಬಾಪುಗೌಡ ಪಾಟೀಲ, ಬಸವರಾಜ ಪಾಟೀಲ, ಮಹಾಂತಗೌಡ ಪಾಟೀಲ, ಸಿದ್ರಾಮರೆಡ್ಡಿ ಪಾಟೀಲ ಕೌಳೂರ, ಚಂದ್ರಶೇಖರ ತಳ್ಳಳ್ಳಿ, ಉತ್ತಮ ಬಜಾಜ್‌, ಕಲ್ಯಾಣಪ್ಪ ಪಾಟೀಲ, ಅಪೆಕ್ಸ್‌ ಬ್ಯಾಂಕ್‌ನ ಪ್ರತಿನಿಧಿ ಬಿ.ಎಸ್‌. ಸಜ್ಜನ್‌ ಮುಂತಾದವರಿದ್ದರು. ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಬ್ಯಾಂಕ್‌ನ ಹಿರಿಯ ನಿರ್ದೇಶಕರಾದ ಶರಣಬಸಪ್ಪ ಪಾಟೀಲ ಅಷ್ಠಗಾ ಸ್ವಾಗತಿಸಿದರು. ನವಲಿಂಗ ಪಾಟೀಲ್‌ ನಿರೂಪಿಸಿದರು. ಮತ್ತೋರ್ವ ನಿರ್ದೇಶಕ ಗೌತಮ ಪಾಟೀಲ ವಂದಿಸಿದರು.

ಡಿಸಿಸಿ ಬ್ಯಾಂಕ್‌ ಸಾಲ ಮನ್ನಾ ಆಗುವ ಸಾಲವೆಂಬ ಮನೋಭಾವ ಎಲ್ಲರಲ್ಲೂ ತೊಲಗಲಿ. ಸರಿಯಾದ ಸಮಯಕ್ಕೆ ಕಟ್ಟಿದರೆ ಮಾತ್ರ ಲಾಭ ಎಂಬುದನ್ನು ಯಾರೂ ಮರೆಯಬಾರದು. ಫೆಬ್ರುವರಿ-ಮಾರ್ಚ್‌ನಲ್ಲಿ ಸಾಲ ಕಟ್ಟುವರು ಡಿಸೆಂಬರ್‌ದಲ್ಲೇ ಕಟ್ಟಿದರೆ ವಾರದೊಳಗೆ ಹೆಚ್ಚುವರಿಯಾಗಿ ಸಾಲ ಕೊಡಲಾಗುವುದು. ಬ್ಯಾಂಕ್‌ನಲ್ಲಿ ಅವ್ಯವಹಾರ ಎಸಗಿದ ಸಿಬ್ಬಂದಿ- ಅಧಿಕಾರಿಗಳ ವಿರುದ್ಧ ಈಗ ಎಫ್ಐಆರ್‌ ದಾಖಲಿಸಲಾಗಿದೆ. ಒಟ್ಟಾರೆ ಬ್ಯಾಂಕ್‌ ನ ಅಭಿವೃದ್ಧಿಗೆ ಹಗಲಿರಳು ಶ್ರಮಿಸಲಾಗುವುದು. ರಾಜಕುಮಾರ ಪಾಟೀಲ ತೇಲ್ಕೂರ, ಅಧ್ಯಕ್ಷ, ಡಿಸಿಸಿ ಬ್ಯಾಂಕ್

Advertisement

Udayavani is now on Telegram. Click here to join our channel and stay updated with the latest news.

Next