ನವದೆಹಲಿ:ಭಾರತೀಯ ಹವಾಮಾನ ಇಲಾಖೆಯ ಎಚ್ಚರಿಕೆಯಂತೆ ಯಾಸ್ ಚಂಡಮಾರುತ ಬುಧವಾರ(ಮೇ 26) ಒಡಿಶಾ ಮತ್ತು ಪಶ್ಚಿಮಬಂಗಾಳ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದೆ. ಯಾಸ್ ಚಂಡಮಾರುತ ಹೊಡೆತಕ್ಕೆ ಪಶ್ಚಿಮಬಂಗಾಳದಲ್ಲಿ ಮೂರು ಲಕ್ಷ ಮನೆಗಳು ಹಾನಿಗೀಡಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣ: ತಪ್ಪಿತಸ್ಥರ ವಿರುದ್ಧಕ್ರಮಕ್ಕೆ ಪ್ರಕಾಶ ರಾಠೋಡ ಆಗ್ರಹ
ಒಡಿಶಾದ ದಕ್ಷಿಣ ಬಾಲಾಸೋರ್ ನಲ್ಲಿ ಇಂದು ಬೆಳಗ್ಗೆ 10.30ರಿಂದ 11.30ರ ನಡುವೆ ಗಂಟೆಗೆ 150 ಕಿಲೋ ಮೀಟರ್ ನಷ್ಟು ವೇಗದಲ್ಲಿ ಚಂಡಮಾರುತ ಅಪ್ಪಳಿಸಿರುವುದಾಗಿ ವರದಿ ವಿವರಿಸಿದೆ. ಯಾಸ್ ಚಂಡಮಾರುತದಿಂದಾಗಿ ಒಡಿಶಾ, ಪಶ್ಚಿಮಬಂಗಾಳ ಮತ್ತು ಜಾರ್ಖಂಡ್ ನಲ್ಲಿ ಸಾಧಾರಣದಿಂದ ಭಾರೀ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು.
ಒಡಿಶಾದ ಭದ್ರಕ್ ಜಿಲ್ಲೆಯ ದಾಮ್ರಾ ಬಂದರು ಪ್ರದೇಶದ ಕರಾವಳಿಗೆ ಯಾಸ್ ಚಂಡಮಾರುತ ಅಪ್ಪಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ಭದ್ರಕ್ ಜಿಲ್ಲೆಯ ಜಮುಜ್ಹಾದಿ ರಸ್ತೆ ಹಾನಿಗೀಡಾಗಿರುವುದಾಗಿ ವರದಿ ತಿಳಿಸಿದೆ.
ಹವಾಮಾನ ವೈಪರೀತ್ಯ ಮತ್ತು ಯಾಸ್ ಚಂಡಮಾರುತದಿಂದ ಸುಮಾರು ಒಂದು ಕೋಟಿ ಜನರ ಮೇಲೆ ಪರಿಣಾಮ ಬೀರಿದೆ. ಒಡಿಶಾ ಮತ್ತು ಪಶ್ಚಿಮಬಂಗಾಳದಲ್ಲಿ ನಾಳೆಯೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.