ಪಾಟ್ನಾ:ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ ಬಹಿರ್ದೆಸೆಗಾಗಿ ತೆರಳಿದ್ದ ವೇಳೆ ಭೂ ಪ್ರದೇಶ ಕುಸಿದು ಬಿದ್ದ ಪರಿಣಾಮ ಮೂವರು ಮಹಿಳೆಯರು ದಾರುಣವಾಗಿ ಕೊನೆಯುಸಿರೆಳೆದಿರುವ ಘಟನೆ ಜಾರ್ಖಂಡ್ ನ ಧನ್ ಬಾದ್ ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Ranbir Kapoor: ‘ಅನಿಮಲ್’ ಟೀಸರ್ ಡೇಟ್ ಔಟ್; ಹೊಸ ಪೋಸ್ಟರ್ ನಲ್ಲಿ ಮಿಂಚಿದ ರಣ್ಬೀರ್
ಒಬ್ಬರು ಮಹಿಳೆ ಭೂ ಭಾಗ ಕುಸಿದು ಅವಶೇಷದಡಿ ಸಿಲುಕಿಕೊಂಡಿದ್ದಾಗ, ಇನ್ನುಳಿದ ಇಬ್ಬರು ಆಕೆಗೆ ನೆರವು ನೀಡಲು ಹೋದಾಗ ಅವರು ಕೂಡಾ ಜೀವಂತವಾಗಿ ಸಮಾಧಿಯಾಗಿರುವುದಾಗಿ ವರದಿ ವಿವರಿಸಿದೆ.
ಧೋಬಿ ಕುಲ್ಹಿ ಪ್ರದೇಶದಲ್ಲಿ ವಾಸವಾಗಿದ್ದ ಪಾರ್ಲಾ ದೇವಿ, ಥಾಂಡಿ ದೇವಿ ಮತ್ತು ಮಾಂಡವಾ ದೇವಿ ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಧೋಬಿ ಕುಲ್ಹಿಯ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಕೋಲ್ (Coal) ಇಂಡಿಯಾ ಲಿಮಿಟೆಡ್ ನ ಅಂಗಸಂಸ್ಥೆಯಾದ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ (BCCL) ಗೋಂದುದಿಹ್ ಖಾಸ್ ಕುಸುಂಡಾ ಕಲ್ಲಿದ್ದಲು ಗಣಿಯ ಕೆಲಸವನ್ನು ನಿರ್ವಹಿಸುತ್ತಿದೆ. ಧನ್ ಬಾದ್ ನ ಗೋಂದುದಿಹ್ ಕಲ್ಲಿದ್ದಲು ಗಣಿಯ ಎತ್ತರದ ಪ್ರದೇಶದಲ್ಲಿ ಮಹಿಳೆಯರು ಬಹಿರ್ದೆಸೆಗೆ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿತ್ತು.
ಸ್ಥಳೀಯರು ಮಾಹಿತಿ ನೀಡಿದ ನಂತರ ಪೊಲೀಸರು ಮತ್ತು ಬಿಸಿಸಿಎಲ್ ನ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಬಿಸಿಸಿಎಲ್ ನ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಮತ್ತು ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಪೊಲೀಸ್ ಮತ್ತು ಸಿಐಎಸ್ ಎಫ್ ತಂಡ ಮೂವರು ಮಹಿಳೆಯರ ಶವವನ್ನು ಮೇಲಕ್ಕೆ ಎತ್ತುವ ಕಾರ್ಯದಲ್ಲಿ ತೊಡಗಿದ್ದು, ಶವವನ್ನು ಹೊರತೆಗೆದ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಧನ್ ಬಾದ್ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಲಾಯಕ್ ತಿಳಿಸಿದ್ದಾರೆ.