Advertisement

ಬಿಜೆಪಿಯಲ್ಲಿ ಮೂರು ಗುಂಪು! ಒಂದು ದೆಹಲಿಯಲ್ಲಿದ್ದರೆ, ಎರಡು ಕರ್ನಾಟಕದಲ್ಲಿ: ಸತೀಶ ಜಾರಕಿಹೊಳಿ

03:20 PM Nov 08, 2020 | sudhir |

ಬೆಳಗಾವಿ: ಬಿಜೆಪಿ ಹಾಗೂ ಕಾಂಗ್ರೆಸ್‌ ಸೇರಿದಂತೆ ಎಲ್ಲ ಪಕ್ಷದಲ್ಲಿ ಗುಂಪುಗಾರಿಕೆ ಇದ್ದೇ ಇದೆ. ಅದೇನು ಹೊಸದಲ್ಲ. ಬಿಜೆಪಿಯಲ್ಲಿ ಮೂರು ಗುಂಪುಗಳಿವೆ. ಒಂದು ಗುಂಪು ದೆಹಲಿಯಲ್ಲಿದ್ದರೆ, ಎರಡು ಗುಂಪು ಕರ್ನಾಟಕದಲ್ಲಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ತಿರುಗೇಟು ನೀಡಿದರು.

Advertisement

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಸ್ಥಿತಿ ಮನೆಯೊಂದು ಮೂರು ಬಾಗಿಲು ಆಗಿದ್ದು, ಅವನತಿಯ ಅಂಚಿನಲ್ಲಿದೆ ಎಂಬ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪ್ರತಿಯೊಬ್ಬರು ತಮ್ಮ ನಾಯಕತ್ವದಲ್ಲಿ ಇರಲಿದ್ದಾರೆ. ಆದರೆ ಪಕ್ಷ ಅಂತ ಬಂದಾಗ ಎಲ್ಲರೂ ಒಗ್ಗಟ್ಟಾಗಿಯೇ ಕೆಲಸ ಮಾಡುತ್ತಾರೆ ಎಂದರು. ಶಿರಾ ಮತ್ತು ಆರ್‌.ಆರ್‌. ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ. ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬುದನ್ನು ನೋಡಬೇಕಷ್ಟೇ ಎಂದು ಹೇಳಿದರು.

ಇದನ್ನೂ ಓದಿ:“ಶಾಂತಪ್ಪ ಚಡಚಣನಿಂದ ಭೈರಗೊಂಡನವರೆಗೆ”; ಶರಣನಾಡಿನ ಶಾಂತಿ ಕದಡಿದ ‘ಭೀಮಾ ತೀರ’ದ ಕ್ರೂರ ಕಥಾನಕ

ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆಯು ವ್ಯಕ್ತಿಗತ, ಅವರ ಗೌರವ, ಸ್ಥಾನದ ಮೇಲೆ ನಡೆಯುತ್ತದೆ. ಖಾನಾಪುರ ಕ್ಷೇತ್ರದಿಂದ ಶಾಸಕಿ ಅಂಜಲಿ ನಿಂಬಾಳಕರ ಗೆಲ್ಲುವ ಎಲ್ಲ ಅವಕಾಶಗಳು ಇದ್ದವು. ಆದರೆ ಕೊನೆ ಗಳಿಗೆಯಲ್ಲಿ ಸಮಸ್ಯೆಯಾಗಿ ಸೋಲಬೇಕಾಯಿತು. ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಅಂತ ಬರುವುದಿಲ್ಲ. ಇಲ್ಲಿ ಸಹಕಾರಿ ತತ್ವದ ಮೇಲೆ ಪಕ್ಷಾತೀತವಾಗಿ ಚುನಾವಣೆ ನಡೆಯುತ್ತದೆ. ಹೀಗಾಗಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎನ್ನುವುದು ತಪ್ಪು ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಅಧಿಕ ಸ್ಥಾನ ಗೆಲ್ಲುವದು ನಮ್ಮ ಮುಂದಿನ ಟಾರ್ಗೆಟ್‌ ಎಂದು ಬಿಜೆಪಿ ಮುಖಂಡರು ಹೇಳಿರುವ ಬಗ್ಗೆ ಪ್ರಸ್ತಾಪಿಸಿ, ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದೆ. ಬರುವ ದಿನಗಳಲ್ಲಿ ದೇಶ ಹಾಗೂ ಕರ್ನಾಟಕದಲ್ಲಿ ಸಾಕಷ್ಟು
ಬದಲಾವಣೆ ಆಗಲಿದೆ. ಮುಂದೆ ಇವರೇ ಯಾವ ಪಕ್ಷದಲ್ಲಿ ಇರುತ್ತಾರೋ ಗೊತ್ತಿಲ್ಲ. ಕಾದು ನೋಡೋಣ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next