ಹೂವಿನಹಡಗಲಿ: ದೇಶ ವ್ಯಾಪಿ ಕಾರ್ಮಿಕರ ವಿಚಾರಣಾ ಹಂತದ 3 ಕೋಟಿ ಪ್ರಕರಣಗಳು ಬಾಕಿಯಿದ್ದು, ಅವುಗಳನ್ನು ಲೋಕ ಅದಾಲತ್, ಕಾನೂನು ನೆರವು ಸಮಿತಿಯಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ನಿವೃತ್ತ ಸರಕಾರಿ ಸಹಾಯಕ ಅಭಿಯೋಜಕ ಕಾಳಿಂಗರಾವ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಇತರ ಸಂಘ-ಸಂಸ್ಥೆಗಳ ಸಹಯೋಗದಿಂದ ಇಲ್ಲಿನ ನ್ಯಾಯಾಲಯದ ಆವರಣಲ್ಲಿ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರತಿ ನ್ಯಾಯಾಲಯದಲ್ಲಿ ಕಾನೂನು ನೆರವು ಸಮಿತಿ, ಸರಕಾರಿ ವಕೀಲರು, ಲೋಕ ಅದಾಲತ್ ವ್ಯವಸ್ಥೆಯಿದೆ. ಆದ್ದರಿಂದ ಈವರೆಗೆ ಇತ್ಯರ್ಥವಾಗದೆ ಇರುವ ಕಾರ್ಮಿಕರ ಪ್ರಕರಣಗಳನ್ನು ಕೂಡಲೇ ಇತ್ಯರ್ಥ ಪಡಿಸಿಕೊಳ್ಳಬೇಕೆಂದು ಹೇಳಿದರು.
ಸರಕಾರಿ ಸಹಾಯಕ ಅಭಿಯೋಜಕ ಕೆ.ಅಜ್ಜಯ್ಯ, ದೇಶದಲ್ಲಿ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ನೀಡಲು ನಾನಾ ಜಾರಿಗೊಳಿಸಿರುವ ನಾನಾ ಕಾಯಿದೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಕಾರ್ಮಿಕರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕಿದೆ. ಕಾರ್ಮಿಕರು ದೇಶದ ಪ್ರತಿ ನ್ಯಾಯಾಲಯದಲ್ಲಿ ಸ್ಥಾಪಿಸಿರುವ ಉಚಿತ ಕಾನೂನು ನೆರವು ಸಮಿತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ನ್ಯಾಯವಾದಿ ಅಟವಾಳಗಿ ಕೊಟ್ರೇಶ, ದೇಶದಲ್ಲಿ ಇಂದಿಗೂ ಬಾಲಕಾರ್ಮಿಕ ಅನಿಷ್ಠ ಪದ್ಧತಿ ಮುಂದುವರಿದಿರುವುದು ಖೇದದ ಸಂಗತಿ. ಮಕ್ಕಳು ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಕಡ್ಡಾಯ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು.
ನ್ಯಾಯವಾದಿ ಜಿ.ವಸಂತ, ಷಣ್ಮುಖನಗೌಡ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಎಂ.ಗಂಗಾಧರ ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿ ತಾಲೂಕು ಸಂಚಾಲಕ ಸುರೇಶ ಹಲಗಿ, ತಾಪಂ ಸಹಾಯಕ ನಿರ್ದೇಶಕ ಹೇಮಾದ್ರಿ ನಾಯ್ಕ ಇತರರಿದ್ದರು.