ಬೆಂಗಳೂರು: ಹಜ್ ಯಾತ್ರೆಯ ಕನಸು ನನಸು ಮಾಡಿಕೊಳ್ಳುವ ಸಲುವಾಗಿ 100ಕ್ಕೂ ಅಧಿಕ ಮಂದಿ ವಿಶೇಷ ಪ್ಯಾಕೇಜ್ ರೂಪದಲ್ಲಿ ಕಟ್ಟಿದ್ದ 3 ಕೋಟಿ ರೂ. ಸಂಗ್ರಹಿಸಿ ಸಿಬ್ಗತ್‌ಉಲ್ಲಾ ಷರೀಫ್ ಎಂಬಾತ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಿಯಾಯಿತಿ ದರದಲ್ಲಿ ಹಜ್ ಯಾತ್ರೆ ಕೈಗೊಳ್ಳುವ ಆಸೆಯಿಂದ ಹಣ ಹಾಗೂ ಪಾಸ್‌ಪೋರ್ಟ್ ನೀಡಿ ವಂಚನೆಗೊಳಗಾಗಿರುವ 113 ಮಂದಿ ಹಜ್ ಯಾತ್ರಿಕರಿಂದ ಹಣ ಪಡೆದು ಪರಾರಿಯಾಗಿರುವ ಜಯನಗರದ ಹರೀಮ್ ಟೂರ್ ಡೋರ್ ಮಾಲೀಕ ಸಿಬ್ಗತ್ ಉಲ್ಲಾ ಶರೀಫ್ ಹಾಗೂ ಅಬ್ದುಲ್ ರೆಹಮಾನ್, ಜಿಶಾನ್ ಉಲ್ಲಾ ವಿರುದ್ಧ ಕ್ರಮ ಜರುಗಿಸುವಂತೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್‌ಗೆ ದೂರು ಸಲ್ಲಿಸಿದ್ದಾರೆ.
ವಂಚನೆಗೊಳಗಾದವರು ನೀಡಿದ ದೂರಿನ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ತಿಲಕ್‌ನಗರ ಠಾಣೆ ಪೊಲೀಸರು, ತಲೆಮರೆಸಿಕೊಂಡಿರುವ ಸಿಗ್ಬತ್ ಉಲ್ಲಾ, ಆತನ ಇಬ್ಬರು ಮಕ್ಕಳು ಹಾಗೂ ಮತ್ತಿತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಳೆದ 15 ವರ್ಷದಿಂದ ಕಂಪೆನಿ ನಡೆಸುತ್ತಿರುವ ಆರೋಪಿ ಸಿಬ್ಗತ್‌ಉಲ್ಲಾ, ಕೆಲ ತಿಂಗಳ ಹಿಂದೆ ರಿಯಾಯಿತಿ ದರದಲ್ಲಿ ಹಜ್ ಪ್ರವಾಸ ಕರೆದೊಯ್ಯುವುದಾಗಿ ಜಯನಗರದ ಸುತ್ತಮುತ್ತಲ ಭಾಗದಲ್ಲಿ ಪ್ರಚಾರ ನಡೆಸಿದ್ದ. ಇದನ್ನು ನಂಬಿದ್ದ 113 ಮಂದಿ ತಲಾ ಒಬ್ಬರಿಗೆ 3 ಲಕ್ಷ ರೂ. ಪಾವತಿಸಿದ್ದರು.
ಆಗಸ್ಟ್ 13ರಂದು ಸೌದಿ ಅರೆಬಿಯಾಗೆ ತೆರಳಲು ಟಿಕೆಟ್ ಬುಕ್ ಮಾಡಿದ್ದೇನೆ ಎಂದು ನಂಬಿಸಿದ್ದ ಆರೋಪಿ, ವೀಸಾ ಪಡೆಯುವ ಸಲುವಾಗಿ ಎಲ್ಲರ ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡಿದ್ದ. ಕೆಲ ದಿನಗಳ ಹಿಂದೆ ವೀಸಾ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಆರೋಪಿಗೆ ಕರೆ ಮಾಡಿದಾಗ ಆತನ ಫೋನ್ ಸ್ವಿಚ್ ಆಫ್ ಆಗಿತ್ತು.
ಅನುಮಾನದ ಮೇಲೆ ಕಚೇರಿ ಬಳಿ ತೆರಳಿದಾಗ ಆತ ಕಚೇರಿ ಮುಚ್ಚಿಕೊಂಡು ಕೆಲದಿನಗಳ ಹಿಂದೆಯೇ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಗೊತ್ತಾಯಿತು ಎಂದು ದೂರುದಾರರು ತಿಳಿಸಿದ್ದಾರೆ.ಈ ದೂರಿನ ಕುರಿತು ತನಿಖೆ ನಡೆಸುತ್ತಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.