Advertisement

3 ಕೋ.ರೂ. ಅನುದಾನ: ಕಿಲ್ಲೆ ಮೈದಾನ ಪರಿಸರಕ್ಕೆ ಹೊಸ ಸ್ಪರ್ಶ

12:10 PM Jul 13, 2018 | |

ನಗರ : ನಗರಸಭಾ ಕಚೇರಿಯ ಎದುರಿನ ಐತಿಹಾಸಿಕ ಕಿಲ್ಲೆ ಮೈದಾನ ಸಹಿತ ಸುತ್ತಲಿನ ಪರಿಸರ ಹೊಸ ಅಭಿವೃದ್ಧಿ ಕೆಲಸಗಳಿಗೆ ಸಾಕ್ಷಿಯಾಗಲಿದೆ. ನಗರಸಭೆ ಆಡಳಿತ ನೇತೃತ್ವದಲ್ಲಿ ಸುಮಾರು 3 ಕೋ. ರೂ. ವೆಚ್ಚದ ವಿವಿಧ ಅಭಿವೃದ್ಧಿ ಕೆಲಸಗಳು ಆರಂಭವನ್ನು ಪಡೆದುಕೊಂಡಿವೆ.

Advertisement

ನಗರಸಭೆಗೆ ಹಿಂದಿನ ಸರಕಾರ ಮಂಜೂರು ಮಾಡಿದ 25 ಕೋ.ರೂ. ನಗರೋತ್ಥಾನ ಯೋಜನೆ ಅನುದಾನದಲ್ಲಿ ವಿವಿಧ ಕಾಮಗಾರಿಗಳು ನಗರಸಭಾ ವ್ಯಾಪ್ತಿಯಲ್ಲಿ ಅನುಷ್ಠಾನ ಹಂತದಲ್ಲಿವೆ. ಇದರೊಂದಿಗೆ ದೇಶಭಕ್ತ ಎನ್‌.ಎಸ್‌. ಕಿಲ್ಲೆ ಅವರ ಗೌರವದ ಹೆಸರಿರುವ ಕಿಲ್ಲೆ ಮೈದಾನಕ್ಕೆ ಹೊಸತನವನ್ನು ನೀಡುವ ಯೋಜನೆಯ ಕಾಮಗಾರಿಯೂ ಆರಂಭಗೊಂಡಿದೆ.

ಅಭಿವೃದ್ಧಿ ಕೆಲಸಗಳು ಹೀಗಿವೆ
ಕಿಲ್ಲೆ ಮೈದಾನದ ಪಶ್ಚಿಮ ದಿಕ್ಕಿನಲ್ಲಿ ಸುಂದರ ಗ್ಯಾಲರಿ ನಿರ್ಮಾಣ. ಸುಮಾರು 150 ಮೀ. ಉದ್ದದ ಈ ಗ್ಯಾಲರಿಗೆ 8 ಹಂತದ ಮೆಟ್ಟಿಲುಗಳಿರುತ್ತವೆ. ಮೈದಾನದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ವೀಕ್ಷಿಸಲು ಪೂರಕವಾಗಿ ಈ ಗ್ಯಾಲರಿ ನಿರ್ಮಾಣವಾಗಲಿದೆ. ಗ್ಯಾಲರಿಗೆ ಅಭಿಮುಖವಾಗಿ ಮೈದಾನದ ಪೂರ್ವ ಭಾಗದಲ್ಲಿ ಬಯಲು ರಂಗಮಂದಿರ ನಿರ್ಮಿಸಲಾಗುತ್ತದೆ. ಮೈದಾನದ ಸುತ್ತ ಆವರಣ ಗೋಡೆ ನಿರ್ಮಿಸಲು ಉದ್ದೇಶಿಸಲಾಗಿದ್ದು, 2 ಕಡೆ ಗೇಟ್‌ ಸಹಿತ ಪ್ರವೇಶ ದ್ವಾರ ಇರುತ್ತದೆ. ಗ್ಯಾಲರಿಯ ಹಿಂದೆ ಅಂದರೆ ಧ್ವಜಕಟ್ಟೆಯ ಬಳಿ ಹುತಾತ್ಮ ಸೈನಿಕರನ್ನು ನಿತ್ಯ ಸ್ಮರಿಸುವ ಅಮರ್‌ ಜವಾನ್‌ ಜ್ಯೋತಿ ಸ್ಮಾರಕವಿದೆ. ಇದರ ಎದುರು ಇಂಟರ್‌ಲಾಕ್‌ ಅಳವಡಿಸಿದ ಪರೇಡ್‌ ಮೈದಾನವಿದೆ. ಇನ್ನೊಂದು ಮೂಲೆಯಲ್ಲಿ ಪುರಭವನದ ಪಕ್ಕಕ್ಕೆ ಹಳೆಯ ರೇಡಿಯೋ ಟವರ್‌ ಮತ್ತು ಸೈರನ್‌ ಸ್ತಂಭ ನವೀಕರಣ ಕಾರ್ಯ ನಡೆಯುತ್ತಿದೆ. ಮಿನಿ ವಿಧಾನಸೌಧದ ರಸ್ತೆಗೆ ಹೊಂದಿಕೊಂಡು ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತಿದೆ.

ಸಂತೆ ಸ್ಥಳಾಂತರ
ಹಳೆಯ ಪುರಸಭೆ ಕಟ್ಟಡದ ಜಾಗದಲ್ಲಿ 1 ಕೋ.ರೂ. ವೆಚ್ಚದಲ್ಲಿ ವಾರದ ಸಂತೆ ಹಾಗೂ ದಿನವಹಿ ಸಂತೆ ಮಾರುಕಟ್ಟೆ ನಿರ್ಮಿಸಲು ನಗರಸಭೆ ಆಡಳಿತ ಯೋಜನೆ ರೂಪಿಸಿದ್ದು, ಸಂತೆಕಟ್ಟೆ ನಿರ್ಮಾಣವಾದ ಬಳಿಕ ಕಿಲ್ಲೆ ಮೈದಾನದ ಸಂತೆ ಅಲ್ಲಿಗೆ ಸ್ಥಳಾಂತರವಾಗಲಿದೆ. 

ಒಟ್ಟು ಯೋಜನೆ
 · ನಗರಸಭೆ ಸ್ವಂತ ನಿಧಿಯಲ್ಲಿ 36 ಲ.ರೂ. ವೆಚ್ಚದಲ್ಲಿ ರೇಡಿಯೋ ಟವರ್‌, ಸೈರನ್‌ ಸ್ತಂಭ ಮತ್ತು ಪಾರ್ಕಿಂಗ್‌ ಅಭಿವೃದ್ಧಿ.
· ನಗರೋತ್ಥಾನದಲ್ಲಿ 60 ಲ.ರೂ. ವೆಚ್ಚದಲ್ಲಿ ಕಿಲ್ಲೆ ಮೈದಾನ ಅಭಿವೃದ್ಧಿ. 
· ಪುರಭವನದ ನವೀಕರಣ 56 ಲ.ರೂ. ವೆಚ್ಚದಲ್ಲಿ ನಡೆಯುತ್ತಿದ್ದು, ಇನ್ನೂ 40 ಲ.ರೂ. ಮೀಸಲಿಟ್ಟು, ಪ್ರತ್ಯೇಕ ಟೆಂಡರ್‌ ಕರೆಯಲಾಗುತ್ತದೆ.
· ಹಳೆಯ ಪುರಸಭೆ ಕಟ್ಟಡವನ್ನು ತೆಗೆದು 1 ಕೋ.ರೂ. ವೆಚ್ಚದಲ್ಲಿ ಸಂತೆ ಮಾರುಕಟ್ಟೆ ನಿರ್ಮಾಣ.

Advertisement

 ಪುರಭವನವೂ ನವೀಕರಣ
ಪುರಭವನ ನವೀಕರಣ ಕಾಮಗಾರಿಯೂ ನಡೆಯುತ್ತಿದೆ. ಕಿಲ್ಲೆ ಮೈದಾನದ ಅಭಿವೃದ್ಧಿಗೆ ನಗರೋತ್ಥಾನದಲ್ಲಿ 1 ಕೋ.ರೂ. ಮೀಸಲಿಟ್ಟಿದ್ದು, ಅದನ್ನು ಹಂಚಿಕೆ ಮಾಡಿಕೊಂಡು ಕಿಲ್ಲೆ ಮೈದಾನ ಮತ್ತು ಸಾಮೆತ್ತಡ್ಕ ಪಾರ್ಕ್‌ ಅಭಿವೃದ್ಧಿಪಡಿಸಲಾಗುವುದು.
 - ರೂಪಾ ಟಿ. ಶೆಟ್ಟಿ, ಪೌರಾಯುಕ್ತೆ 

Advertisement

Udayavani is now on Telegram. Click here to join our channel and stay updated with the latest news.

Next