ನವದೆಹಲಿ: ಭಾರತದಲ್ಲಿ ಕೋವಿಡ್ ಸೋಂಕು ಕ್ಷಿಪ್ರವಾಗಿ ಏರುತ್ತಿದ್ದು, ಕಳೆದ 24ಗಂಟೆಗಳಲ್ಲಿ ಬರೋಬ್ಬರಿ 3,79, 257 ಕೋವಿಡ್ ಪ್ರಕರಣ ವರದಿಯಾಗಿದ್ದು, 3,645 ಮಂದಿ ಸಾವನ್ನಪ್ಪಿದ್ದಾರೆ. ಇದು ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಪ್ರಕರಣವಾಗಿದೆ ಎಂದು ಗುರುವಾರ(ಏ.29) ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಜನತಾ ಕರ್ಫ್ಯೂನ ಎರಡನೇ ಬೇಕಾಬಿಟ್ಟಿ ಓಡಾಟ ನಡೆಸಿದ ಮಂಗಳೂರು ಜನ
ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 1.83ಕೋಟಿಗೆ ಏರಿಕೆಯಾಗಿದೆ. ಈವರೆಗೆ ದೇಶದಲ್ಲಿ ಕೋವಿಡ್ ಸೋಂಕಿನಿಂದ 2.04 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಕಳೆದ ಒಂದು ವಾರದಿಂದ ದೇಶದಲ್ಲಿ ಮೂರು ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣ ಪತ್ತೆಯಾಗುತ್ತಿದೆ. ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ನಡುವೆ ಆಸ್ಪತ್ರೆಗಳಲ್ಲಿ ಬೆಡ್, ಮೆಡಿಕಲ್ ಆಕ್ಸಿಜನ್ ಮತ್ತು ಕೋವಿಡ್ ಲಸಿಕೆ ಕೊರತೆ ಎದುರಿಸುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿರುವುದಾಗಿ ವರದಿ ವಿವರಿಸಿದೆ.
ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮೇ 1ರಿಂದ 18ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬುಧವಾರ (ಏ.28) 1.33ಕೋಟಿಗೂ ಅಧಿಕ ಮಂದಿ ಕೋ ವಿನ್ ಪೋರ್ಟಲ್ ನಲ್ಲಿ ತಮ್ಮ ಲಸಿಕೆಗಾಗಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ತೀವ್ರವಾಗಿ ಕೋವಿಡ್ ಬಿಕ್ಕಟ್ಟು ಎದುರಿಸುತ್ತಿರುವ ಭಾರತಕ್ಕೆ ಈಗಾಗಲೇ ಅಮೆರಿಕ, ಯುಕೆ, ಕೆನಡಾ, ರಷ್ಯಾ ಹಾಗೂ ಚೀನಾ ನೆರವಿನ ಹಸ್ತ ಚಾಚಿದೆ. ಕೋವಿಡ್ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಬೇಕಾಗಿರುವ ಎಲ್ಲಾ ರೀತಿಯ ನೆರವು ನೀಡಲು ಸಿದ್ಧ ಎಂದು ಅಮೆರಿಕ ಹೇಳಿದೆ.