ಕೋಟ್ ಪುಟ್ಲಿ: ಸುಮಾರು 150 ಅಡಿ ಆಳದ ಕೊಳವೆ (Borewell)ಬಾವಿಗೆ ಮೂರುವರೆ ವರ್ಷದ ಹೆಣ್ಣು ಮಗು ಬಿದ್ದ ಘಟನೆ ರಾಜಸ್ಥಾನದ ಕೋಟ್ ಪುಟ್ಲಿ ಜಿಲ್ಲೆಯ ಕಿರಾಟ್ಪುರ್ ಗ್ರಾಮದಲ್ಲಿ ನಡೆದಿದ್ದು, ಮಗುವನ್ನು ರಕ್ಷಿಸುವ ಕಾರ್ಯ ಬುಧವಾರ (ಡಿ.25) ವೂ ಮುಂದುವರಿದಿದ್ದು, ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಪ್ರಕರಣದ ಕುರಿತು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (SDM) ಬ್ರಜೇಶ್ ಚೌಧರಿ ಎಎನ್ ಐ ಜತೆ ಮಾತನಾಡುತ್ತ, ಮಗುವನ್ನು ಜೀವಂತವಾಗಿ ರಕ್ಷಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಎನ್ ಡಿಆರ್ ಎಫ್ ತಂಡ ಕೂಡಾ ಕಳೆದ 24ಗಂಟೆಗಳಿಂದ ಕಾರ್ಯಾಚರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಯಂತ್ರದ ಮೂಲಕ ಸುರಂಗ ಕೊರೆಯಬೇಕಾಗಿದೆ. ಆದರೆ ಮಗುವನ್ನು ಜೀವಂತವಾಗಿ ರಕ್ಷಿಸುವ ಸಾಧ್ಯತೆ ಕಡಿಮೆ ಇದ್ದಿರುವುದಾಗಿ ಎನ್ ಡಿಆರ್ ಎಫ್ ತಂಡ ತಿಳಿಸಿದೆ. 24ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಸುರಂಗ ಕೊರೆಯುವ ಯಂತ್ರ ಇನ್ನಷ್ಟೇ ಬರಬೇಕಾಗಿದ್ದು, ಇದಕ್ಕೆ 6-7 ಗಂಟೆಗಳ ಕಾರ್ಯಾಚರಣೆಯ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಮೂರು ವರ್ಷದ ಹೆಣ್ಣು ಮಗುವೊಂದು 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿತ್ತು. ನಂತರ ಮಗುವನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಕ್ಲಿಪ್ಸ್ ಬಳಸಿ ಮಗುವನ್ನು 30 ಅಡಿ ಮೇಲಕ್ಕೆ ಎತ್ತಲಾಗಿತ್ತು. ಎನ್ ಡಿಆರ್ ಎಫ್ ತಂಡ ಕೂಡಾ ಮಗುವನ್ನು ಜೀವಂತವಾಗಿ ರಕ್ಷಿಸುವ ಕೆಲಸದಲ್ಲಿ ತೊಡಗಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಓಪಿ ಸರನ್ ತಿಳಿಸಿದ್ದಾರೆ.
ಕೊಳವೆ ಬಾವಿಗೆ ಬಿದ್ದಿರುವ ಮಗುವಿಗೆ ನಿರಂತರವಾಗಿ ಪೈಪ್ ಮೂಲಕ ಆಕ್ಸಿಜನ್ ಸರಬರಾಜು ಮಾಡಲಾಗುತ್ತಿದೆ. ಕ್ಯಾಮರಾ ಮೂಲಕ ಮಗುವಿನ ಚಲನವಲನ ಗಮನಿಸಲಾಗುತ್ತಿದ್ದು, ಮಗುವಿನ ರಕ್ಷಣೆಗೆ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಎನ್ ಡಿಆರ್ ಎಫ್ ತಿಳಿಸಿದೆ.