ರೀಲ್ಸ್ ಹುಚ್ಚಾಟಕ್ಕೆ ಕೊನೆಯೇ ಇಲ್ಲದಂತಾಗಿದೆ, ದಿನದಿಂದ ದಿನಕ್ಕೆ ರೀಲ್ಸ್ ನೋಡುವವರ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ರೀಲ್ಸ್ ಹುಚ್ಚು ಎಷ್ಟರ ಮಟ್ಟಿಗೆ ಬೆಳೆದುಬಿಟ್ಟಿದೆ ಎಂದರೆ ತಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಲು ಹಿಂಜರಿಯುದಿಲ್ಲ.
ಹೀಗೆ ತಾವು ಮಾಡಿದ ರೀಲ್ಸ್ ಇತರರಿಗಿಂತ ಭಿನ್ನವಾಗಿರಬೇಕು ಹೆಚ್ಚಿನ ಜನರು ನೋಡಬೇಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಬೇಕು ಎಂಬುದೇ ಇವರ ಮುಖ್ಯ ಗುರಿ ಇದರ ಹಿಂದಿನ ಸಾಧಕ ಬಾಧಕಗಳು ತಿಳಿಯುವ ಅಗತ್ಯ ಯಾರಿಗೂ ಇಲ್ಲ ಅದರಂತೆ ಇಲ್ಲೊಬ್ಬ ಭೂಪ ತನ್ನ ಮಗನನ್ನೇ ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಕುಳ್ಳಿರಿಸಿ ರೀಲ್ಸ್ ಮಾಡಲು ಮುಂದಾಗಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾನೆ.
ಅಂದಹಾಗೆ ಈ ಘಟನೆ ನಡೆದಿರುವುದು ರಾಜಸ್ಥಾನದ ಝಾಲಾವರ್ನ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಇಲ್ಲಿ ರಾಜಸ್ಥಾನದ ನೋಂದಣಿ ಹೊಂದಿರುವ ಕಪ್ಪು ಬಣ್ಣದ ಆಲ್ಟೊ ಕಾರಿನ ಬಾನೆಟ್ ಮೇಲೆ ಬಾಲಕನೊಬ್ಬನನ್ನು ಕೂರಿಸಿ ಹೆದ್ದಾರಿಯಲ್ಲಿ ಕಾರು ಚಲಾಯಿಸಿಕೊಂಡು ಹೋಗುವ ರೀಲ್ಸ್ ಮಾಡಿದ್ದಾನೆ, ಈ ವೇಳೆ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇನ್ನೊಂದು ಕಾರಿನಲ್ಲಿದ್ದವರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರು ಚಾಲಕನ ಕೃತ್ಯಕ್ಕೆ ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.
ಆರೋಪಿಯನ್ನು ಝಾಲಾವರ್ ನಗರದ ನಿವಾಸಿ ಸುರೇಶ್ ಕುಮಾರ್ ವಾಲ್ಮೀಕಿ (27) ಎಂದು ಗುರುತಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದು ಗಂಟೆಯೊಳಗೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಆರೋಪಿಯನ್ನು ಬಂಧಿಸಿ, ಆತನ ವಾಹನವನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿ ವಿರುದ್ಧ ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವುದಕ್ಕಾಗಿ ಬಿಎನ್ ಎಸ್ ಕಾಯಿದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಿಕೊಂಡಿದ್ದಾರೆ.