ಹೊಸಕೋಟೆ: ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಅವರು ದುಬಾರಿ ಬೆಲೆಯ ಕಾರೊಂದನ್ನು ಖರೀದಿಸಿ ಮತ್ತೆ ಸುದ್ದಿಯಲ್ಲಿದ್ದಾರೆ.
ಅವರು ದುಬಾರಿ ಬೆಲೆಯ ಕಾರು ಹೊಂದಿರುವುದು ಹೊಸದೇನಲ್ಲ. ಆಯಾ ಕಾಲಕ್ಕೆ ತಕ್ಕಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿರುವ ಅವರು ಈಗ ಬಿಎಂಡಬ್ಲೂ ಎಕ್ಸ್ ಎಂ ಕಾರು ಖರೀದಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎಂಟಿಬಿ ನಾಗರಾಜ್ ಅವರ ಬಳಿ ಈಗಾಗಲೇ ಐಷಾರಾಮಿ ರೋಲ್ಸ್ ಫ್ಯಾಂಟಮ್, ಪೋರ್ಷೆಕಯೆನ, ಫೆರಾರಿ ಎಫ್ 8, ಲ್ಯಾಂಡ್ ರೋವರ್ ಮತ್ತು ಮರ್ಸಿಡಿಸ್ ಬೆಂಚ್ ಮತ್ತಿತರ ಹಲವು ಕಾರುಗಳಿವೆ. ಹೊಸ ಕಾರು ಮಾದರಿಯು ಎಕ್ಸ್ ಡ್ರೈವ್ ಎನ್ನುವ ವೆರಿಯೆಂಟ್ ಮತ್ತು ಪವರ್ ಪುಲ್ ಎಸ್‌ಯುವಿ ಆವೃತ್ತಿಯಾಗಿದೆ.
ಇದರ ಎಕ್ಸ್ ಶೋರೂಂ ಪ್ರಕಾರ 2.60 ಕೋಟಿ ರೂ.ಇದ್ದು ವಿಮೆ, ಆರ್‌ಟಿಒ ಶುಲ್ಕ ಸಹಿತ ಆನ್‌ರೋಡ್ ಬೆಲೆ 3.24 ಕೋಟಿ ರೂ.ಆಗಿದೆ.
ಪವರ್‌ಫುಲ್ ಎಂಜಿನ್ ಹೊಂದಿರುವ ಈ ಕಾರು ಕೇವಲ 4.3 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಪ್ರತಿ ಗಂಟೆಗೆ ಟಾಪ್ ಸ್ಪೀಡ್ ಹೊಂದಿದೆ. ಕಾರನ್ನು ಸಂಪೂರ್ಣವಾಗಿ ಪೆಟ್ರೋಲ್‌ನೊಂದಿಗೆ ಚಾಲನೆ ಮಾಡಿದರೆ 11.8 ಕಿ.ಮೀ. ಮೈಲೇಜ್, ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಸಂಯೋಜನೆಯೊಂದಿಗೆ ಪ್ರತಿ ಲೀಟರ್‌ಗೆ 61.9 ಕಿ.ಮೀ. ಮೈಲೇಜ್ ನೀಡುತ್ತದೆ.
ಕಾರಿನಲ್ಲಿ 7 ಸೀಟುಗಳ ಸೌಲಭ್ಯದೊಂದಿಗೆ ಹಲವು ಅತ್ಯಾಧುನಿಕ ಸಲಕರಣೆಗಳಿವೆ. ಮಾರುಕಟ್ಟೆಗೆ ಯಾವುದೇ ಕಾರುಗಳು ಬಂದರೆ ಅದನ್ನು ಅನುಭವಿಸುವುದು ನನ್ನ ಖುಷಿ ಎನ್ನುತ್ತಾರೆ ಎಂಟಿಬಿ ನಾಗರಾಜ್.