Advertisement
ಪ್ಯಾಟ್ ಕಮಿನ್ಸ್ ಜತೆ ಬೌಲಿಂಗ್ ಆರಂಭಿಸಿದ ನಥನ್ ಲಿಯೋನ್ 77 ರನ್ನಿತ್ತು 5 ವಿಕೆಟ್ ಉಡಾಯಿಸಿದರು. ಹೀಗಾಗಿ ಒಂದು ಹಂತದಲ್ಲಿ ಬಾಂಗ್ಲಾ 117 ರನ್ನಿಗೆ 5 ವಿಕೆಟ್ ಉರುಳಿಸಿಕೊಂಡು ಸಂಕಟಕ್ಕೆ ಸಿಲುಕಿತ್ತು. ಆದರೆ 6ನೇ ವಿಕೆಟಿಗೆ ಜತೆಗೂಡಿದ ನಾಯಕ ಮುಶ್ಫಿಕರ್ ರಹೀಂ ಮತ್ತು ಶಬ್ಬೀರ್ ರೆಹಮಾನ್ 105 ರನ್ ಒಟ್ಟುಗೂಡಿಸಿ ಆಸೀಸ್ ಮೇಲುಗೈಗೆ ತಡೆಯೊಡ್ಡಿದರು. ರಹೀಂ 149 ಎಸೆತಗಳಿಂದ ಅಜೇಯ 62 ರನ್ ಮಾಡಿದ್ದು, ಇವರೊಂದಿಗೆ 19 ರನ್ ಗಳಿಸಿರುವ ನಾಸಿರ್ ಹೊಸೇನ್ ಕ್ರೀಸಿನಲ್ಲಿದ್ದಾರೆ. ಶಬ್ಬೀರ್ ರೆಹಮಾನ್ 66 ರನ್ ಹೊಡೆದರು.
ಲಿಯೋನ್ ಮೊದಲ 4 ಬ್ಯಾಟ್ಸ್‌ಮನ್‌ಗಳನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಟೆಸ್ಟ್ ಇತಿಹಾಸದಲ್ಲಿ ಒಬ್ಬನೇ ಬೌಲರ್ ಅಗ್ರ ಕ್ರಮಾಂಕದ ನಾಲ್ವರನ್ನು ಎಲ್‌ಬಿಡಬ್ಲ್ಯು ರೂಪದಲ್ಲಿ ಔಟ್ ಮಾಡಿದ ಮೊದಲ ದೃಷ್ಟಾಂತ ಇದಾಗಿದೆ. ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್‌ನಿಂದ ಬೌಲಿಂಗ್ ಆರಂಭಿಸಿದ್ದು 1938ರ ಬಳಿಕ ಇದೇ ಮೊದಲು. ಅಂದು ಇಂಗ್ಲೆಂಡ್ ಎದುರಿನ ನಾಟಿಂಗಂ ಟೆಸ್ಟ್‌ನಲ್ಲಿ ಬಿಲ್ ಓ’ರಿಲೇ ಆಸೀಸ್ ದಾಳಿ ಆರಂಭಿಸಿದ್ದರು.