ಕರಾಚಿ: ಈಗಿನ ಹೊಡಿಬಡಿ ಕ್ರಿಕೆಟ್ ಜಮಾನಾದಲ್ಲಿ ಟೆಸ್ಟ್ ಪಂದ್ಯವೊಂದನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದಕ್ಕೆ ಪಾಕಿಸ್ಥಾನ ಅತ್ಯುತ್ತಮ ನಿದರ್ಶನವೊದಗಿಸಿದೆ.
ಹೆಚ್ಚು-ಕಡಿಮೆ ಪೂರ್ತಿ ಎರಡು ದಿನ ಕ್ರೀಸ್ ಆಕ್ರಮಿಸಿಕೊಂಡು, 171.4 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿ 7ಕ್ಕೆ 443 ರನ್ ಪೇರಿಸಿ, ಆಸ್ಟ್ರೇಲಿಯ ಎದುರಿನ ಕರಾಚಿ ಟೆಸ್ಟ್ ಪಂದ್ಯವನ್ನು ಡ್ರಾ ಮಾಡುವ ಮೂಲಕ ಪಾಕ್ ಗೆಲುವಿಗೂ ಮಿಗಿಲಾದ ಪ್ರತಿಷ್ಠೆಗೆ ಪಾತ್ರವಾಗಿದೆ.
506 ರನ್ನುಗಳ ಕಠಿನ ಗುರಿಯನ್ನು ಪಡೆದ ಪಾಕಿಸ್ಥಾನವನ್ನು ಬಚಾಯಿಸಿದ್ದು ಕೇವಲ ಮೂರೇ ಮಂದಿ. ನಾಯಕ ಬಾಬರ್ ಆಜಂ, ಕೀಪರ್ ಮೊಹಮ್ಮದ್ ರಿಜ್ವಾನ್ ಮತ್ತು ಆರಂಭಕಾರ ಅಬ್ದುಲ್ಲ ಶಫೀಕ್. ಇವರು ಒಟ್ಟು 907 ಎಸೆತಗಳನ್ನು ನಿಭಾಯಿಸಿ ನಿಂತರು.
ಇವರಲ್ಲಿ ಕಪ್ತಾನನ ಆಟವಾಡಿದ ಬಾಬರ್ ಆಜಂ 425 ಎಸೆತಗಳನ್ನು ಎದುರಿಸಿ 196 ರನ್ ಬಾರಿಸಿದರು (21 ಬೌಂಡರಿ, 1 ಸಿಕ್ಸರ್). ಇದು 4ನೇ ಕ್ರಮಾಂಕದಲ್ಲಿ ನಾಯಕನೊಬ್ಬ ಬಾರಿಸಿದ ಅತ್ಯಧಿಕ ರನ್ ದಾಖಲೆ. ಇಂಗ್ಲೆಂಡಿನ ಮೈಕಲ್ ಆಥರ್ಟನ್ ಅಜೇಯ 185 ರನ್ ಬಾರಿಸಿದ ದಾಖಲೆ ಪತನಗೊಂಡಿತು.
ರಿಜ್ವಾನ್ ಕೊಡುಗೆ ಅಜೇಯ 104 ರನ್ (177 ಎಸೆತ, 11 ಬೌಂಡರಿ, 1 ಸಿಕ್ಸರ್). ಅಬ್ದುಲ್ಲ ಶಫೀಕ್ 305 ಎಸೆತ ನಿಭಾಯಿಸಿ 96 ರನ್ ಬಾರಿಸಿದರು. ಶಫೀಕ್-ಬಾಬರ್ 3ನೇ ವಿಕೆಟಿಗೆ 228 ರನ್ ಪೇರಿಸುವ ಮೂಲಕ ಆಸ್ಟ್ರೇಲಿಯದ ಗೆಲುವಿನ ಯೋಜನೆಯನ್ನು ವಿಫಲಗೊಳಿಸಿದರು.
ಸರಣಿಯ ಮೊದಲ ಟೆಸ್ಟ್ ಕೂಡ ಡ್ರಾಗೊಂಡಿತ್ತು. ಅಂತಿಮ ಟೆಸ್ಟ್ ಮಾ. 21ರಂದು ಲಾಹೋರ್‌ನಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-9 ವಿಕೆಟಿಗೆ 556 ಡಿಕ್ಲೇರ್ ಮತ್ತು 2 ವಿಕೆಟಿಗೆ 97 ಡಿಕ್ಲೇರ್. ಪಾಕಿಸ್ಥಾನ-148 ಮತ್ತು 7 ವಿಕೆಟಿಗೆ 443 (ಬಾಬರ್ 196, ರಿಜ್ವಾನ್ ಔಟಾಗದೆ 104, ಶಫೀಕ್ 96, ಲಿಯೋನ್ 112ಕ್ಕೆ 4, ಕಮಿನ್ಸ್ 75ಕ್ಕೆ 2).
ಪಂದ್ಯಶ್ರೇಷ್ಠ: ಬಾಬರ್ ಆಜಂ.