Advertisement
ಇದು ಭಾರತ-ದಕ್ಷಿಣ ಆಫ್ರಿಕಾ ನಡುವಿನ 2ನೇ ಏಕದಿನ ಪಂದ್ಯದ ಒಟ್ಟು ಚಿತ್ರಣ. ಇನ್ನು ಸ್ಕೋರ್ ವಿವರ: ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 32.2 ಓವರ್‌ಗಳಲ್ಲಿ 118 ಆಲೌಟ್, ಭಾರತ 20.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 119 ರನ್. 6 ಪಂದ್ಯಗಳ ಸರಣಿಯಲ್ಲೀಗ ಟೀಮ್ ಇಂಡಿಯಾ 2-0 ಮುನ್ನಡೆಯಲ್ಲಿದ್ದು, ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಸರಣಿ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.
ಈ ಪಂದ್ಯ ಒಟ್ಟು 52.5 ಓವರ್‌ಗಳಲ್ಲಿ ಮುಗಿದು ಹೋಯಿತು. ಸಾಮಾನ್ಯ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ಭಾರತ ರೋಹಿತ್ ಶರ್ಮ (15) ವಿಕೆಟನ್ನಷ್ಟೇ ಕಳೆದುಕೊಂಡಿತು. ಶಿಖರ್ ಧವನ್ ಅಜೇಯ ಅರ್ಧ ಶತಕ ಬಾರಿಸಿದರು (56 ಎಸೆತ, 51 ರನ್, 9 ಬೌಂಡರಿ). ವಿರಾಟ್ ಕೊಹ್ಲಿ ಗಳಿಕೆ ಅಜೇಯ 46 ರನ್ (50 ಎಸೆತ, 4 ಬೌಂಡರಿ, 1 ಸಿಕ್ಸರ್). ಇವರಿಬ್ಬರ ದ್ವಿತೀಯ ವಿಕೆಟ್ ಜತೆಯಾಟದಲ್ಲಿ 93 ರನ್ ಒಟ್ಟುಗೂಡಿತು. ಏಕೈಕ ಯಶಸ್ಸು ವೇಗಿ ರಬಾಡ ಪಾಲಾಯಿತು. ಸ್ಪಷ್ಟ ಫಲಿತಾಂಶ ಸನಿಹದಲ್ಲೇ ಇದ್ದುದರಿಂದ ಲಂಚ್ ಅವಧಿಯನ್ನು 15 ನಿಮಿಷ ವಿಳಂಬಗೊಳಿಸಲಾಯಿತು. ಆದರೂ ಆಗ ಭಾರತದ ಜಯಕ್ಕೆ 2 ರನ್ ಅಗತ್ಯವಿತ್ತು. ಬ್ರೇಕ್ ಬಳಿಕ 1.3 ಓವರ್‌ಗಳಲ್ಲಿ ಭಾರತ ಗುರಿ ಮುಟ್ಟಿತು.
Related Articles
ದಕ್ಷಿಣ ಆಫ್ರಿಕಾಕ್ಕೆ ಹಾಶಿಮ್ ಆಮ್ಲ (23) ಮತ್ತು ಕ್ವಿಂಟನ್ ಡಿ ಕಾಕ್ (20) ನಿಧಾನ ಗತಿಯ ಆರಂಭ ಒದಗಿಸಿದ್ದರು. ಮೊದಲ ವಿಕೆಟಿಗೆ 9.4 ಓವರ್‌ಗಳಲ್ಲಿ 39 ರನ್ ಬಂದಿತ್ತು. ಆದರೆ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಅವರ ರಿಸ್ಟ್-ಸ್ಪಿನ್ ಮ್ಯಾಜಿಕ್ ಆರಂಭವಾದೊಡನೇ ಹರಿಣಗಳ ಪಡೆ ದಿಕ್ಕಾಪಾಲಾಯಿತು. ಕೇವಲ 79 ರನ್ ಅಂತರದಲ್ಲಿ ಆತಿಥೇಯರ ಅಷ್ಟೂ ವಿಕೆಟ್‌ಗಳು ಹಾರಿಹೋದವು!
Advertisement
ರವಿವಾರ ಸೆಂಚುರಿಯನ್ ಸ್ಟೇಡಿಯಂನಲ್ಲಿ ಕಿಕ್ಕಿರಿದು ನೆರೆದಿದ್ದ ತವರಿನ ವೀಕ್ಷಕರು ತಮ್ಮ ತಂಡದ ಪೆವಿಲಿಯನ್ ಪರೇಡ್ ಕಂಡು ಆಘಾತಕ್ಕೊಳಗಾದರು! ದಕ್ಷಿಣ ಆಫ್ರಿಕಾ 32.2 ಓವರ್‌ಗಳಲ್ಲಿ 118 ರನ್ನಿಗೆ ಗಂಟುಮೂಟೆ ಕಟ್ಟಿತು. ಇದು ಆಲೌಟ್ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತವರಿನಲ್ಲಿ ಗಳಿಸಿದ ಅತ್ಯಂತ ಕಡಿಮೆ ರನ್ ಎಂಬುದು ಭಾರತದ ಬೌಲಿಂಗ್ ದಾಳಿಗೆ ಸಂದ ಗೌರವ. ಇದಕ್ಕೂ ಮುನ್ನ ಇಂಗ್ಲೆಂಡ್ ಎದುರಿನ 2009ರ ಪೋರ್ಟ್ ಎಲಿಜಬೆತ್ ಪಂದ್ಯದಲ್ಲಿ 119ಕ್ಕೆ ಆಲೌಟಾದದ್ದು ತವರಿನಲ್ಲಿ ಆಫ್ರಿಕಾದ ಕನಿಷ್ಠ ಗಳಿಕೆಯಾಗಿತ್ತು. ಕಾಕತಾಳೀಯವೆಂದರೆ, ಇದು ಸೆಂಚುರಿಯನ್‌ನಲ್ಲಿ ತಂಡವೊಂದು ದಾಖಲಿಸಿದ ಕನಿಷ್ಠ ಮೊತ್ತವೂ ಆಗಿದೆ. 2009ರಲ್ಲಿ ಪ್ರವಾಸಿ ಜಿಂಬಾಬ್ವೆ 119ಕ್ಕೆ ಆಲೌಟಾದದ್ದು ಈವರೆಗಿನ ದಾಖಲೆಯಾಗಿತ್ತು.
ಚಾಹಲ್-ಕುಲದೀಪ್ ಕಂಟಕಹರಿಯಾಣದ ಲೆಗ್‌ಬ್ರೇಕ್ ಗೂಗ್ಲಿ ಬೌಲರ್ ಯಜುವೇಂದ್ರ ಚಾಹಲ್ ಹರಿಣಗಳ ಬ್ಯಾಟಿಂಗ್ ಸರದಿಗೆ ಅಪಾರ ಹಾನಿಗೈದರು. ಚಾಹಲ್ ಸಾಧನೆ 22ಕ್ಕೆ 5 ವಿಕೆಟ್. ಇದು ಅವರ ಜೀವನಶ್ರೇಷ್ಠ ಗಳಿಕೆಯಾಗಿದ್ದು, ಮೊದಲ ಸಲ ಏಕದಿನದಲ್ಲಿ 5 ವಿಕೆಟ್ ಉಡಾಯಿಸಿ ಮೆರೆದರು. ಕುಲದೀಪ್ ಯಾದವ್ 20 ರನ್ನಿಗೆ 3 ವಿಕೆಟ್ ಕಿತ್ತರು. ಇವರಿಬ್ಬರು ಒಟ್ಟು 42 ರನ್ ನೀಡಿ 8 ವಿಕೆಟ್ ಹಂಚಿಕೊಂಡªನ್ನು ಕಂಡಾಗ ತವರಿನಲ್ಲೇ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳ “ಸ್ಪಿನ್ ವೈಫಲ್ಯ’ ಬಟಾಬಯಲಾದದ್ದು ಸ್ಪಷ್ಟವಾಗುತ್ತದೆ. ಡರ್ಬನ್‌ನ ಮೊದಲ ಪಂದ್ಯದಲ್ಲೂ ಚಾಹಲ್-ಕುಲದೀಪ್ ಜೋಡಿಯ ಸ್ಪಿನ್ ದಾಳಿಗೆ ಡು ಪ್ಲೆಸಿಸ್ ಪಡೆ ತತ್ತರಿಸಿತ್ತು. ಅಲ್ಲಿ ಇವರಿಬ್ಬರು 5 ವಿಕೆಟ್ ಉಡಾಯಿಸಿದ್ದರು. ಈ ಘಾತಕ ದಾಳಿ ವೇಳೆ ಚಾಹಲ್-ಕುಲದೀಪ್ ಜೋಡಿ ನೂತನ ಮೈಲುಗಲ್ಲೊಂದನ್ನು ನೆಟ್ಟಿತು. ಸ್ಪಿನ್ನರ್‌ಗಳಿಬ್ಬರು ಒಂದೇ ಇನ್ನಿಂಗ್ಸ್‌ನಲ್ಲಿ 3 ಪ್ಲಸ್ ವಿಕೆಟ್ ಕಿತ್ತ ಕೇವಲ 2ನೇ ಸಂದರ್ಭ ಇದಾಗಿದೆ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧವೇ ಆಡಲಾದ 1999ರ ಬ್ಲೋಮ್‌ಫಾಂಟೀನ್ ಪಂದ್ಯದಲ್ಲಿ ವೆಸ್ಟ್ ಇಂಡೀಸಿನ ಕಾರ್ಲ್ ಹೂಪರ್ ಮತ್ತು ಕೀತ್ ಆರ್ಥರ್ಟನ್ ಈ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಅವರದೇ ನೆಲದಲ್ಲಿ 5 ವಿಕೆಟ್ ಬೇಟೆಯಾಡಿದ ಭಾರತದ ಮೊದಲ ಸ್ಪಿನ್ನರ್ ಎಂಬ ಹಿರಿಮೆಗೆ ಪಾತ್ರರಾದ ಚಾಹಲ್, ಇನ್ನೂ ಒಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಇದು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಸ್ಪಿನ್ನರ್ ಓರ್ವನ ಶ್ರೇಷ್ಠ ಬೌಲಿಂಗ್ ಆಗಿದೆ. 2003ರ ವಿಶ್ವಕಪ್ ವೇಳೆ ನಮೀಬಿಯಾ ವಿರುದ್ಧ ಪೀಟರ್ ಮರಿಟ್ಸ್‌ಬರ್ಗ್‌ನಲ್ಲಿ ಯುವರಾಜ್ ಸಿಂಗ್ 6 ರನ್ನಿಗೆ 4 ವಿಕೆಟ್ ಕಿತ್ತ ದಾಖಲೆ ನೆಲಸಮಗೊಂಡಿತು. ಚಾಹಲ್ ದಕ್ಷಿಣ ಆಫ್ರಿಕಾದ ಪಂದ್ಯದಲ್ಲಿ 5 ವಿಕೆಟ್ ಕಿತ್ತ ಭಾರತದ ಕೇವಲ 2ನೇ ಬೌಲರ್. 2003ರ ಇಂಗ್ಲೆಂಡ್ ಎದುರಿನ ಡರ್ಬನ್ ಪಂದ್ಯದಲ್ಲಿ 23ಕ್ಕೆ 6 ವಿಕೆಟ್ ಉಡಾಯಿಸಿದ ಆಶಿಷ್ ನೆಹ್ರಾ ಮೊದಲಿಗ. ದಕ್ಷಿಣ ಆಫ್ರಿಕಾ ಪರ ನಾಯಕ ಮಾರ್ಕ್‌ರಮ್ ಮತ್ತು ಮೊದಲ ಪಂದ್ಯವಾಡಿದ ಜೊಂಡೊ ತಲಾ 25 ರನ್ ಹೊಡೆದದ್ದೇ ಹೆಚ್ಚಿನ ಗಳಿಕೆ. ಇಪ್ಪತ್ತರ ಗಡಿ ಮುಟ್ಟಿದ ಮತ್ತಿಬ್ಬರೆಂದರೆ ಆಮ್ಲ (23) ಹಾಗೂ ಡಿ ಕಾಕ್ (20). ಖಯ ಜೊಂಡೊ ಪಾದಾರ್ಪಣೆ
ದ್ವಿತೀಯ ಏಕದಿನ ಪಂದ್ಯಕ್ಕಾಗಿ ಭಾರತ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಡರ್ಬನ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಹನ್ನೊಂದರ ಬಳಗವನ್ನೇ ಕಣಕ್ಕಿಳಿಸಲಾಯಿತು. ಆದರೆ ನಾಯಕ ಫಾ ಡು ಪ್ಲೆಸಿಸ್ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ ಅವರ ಅನುಪಸ್ಥಿತಿಯಲ್ಲಿ ತತ್ತರಿಸಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ ಸಂಭವಿಸಿತು. ಡು ಪ್ಲೆಸಿಸ್ ಬದಲು 27ರ ಹರೆಯದ ಬಲಗೈ ಬ್ಯಾಟ್ಸ್‌ಮನ್ ಖಯ ಜೊಂಡೊ ಅವಕಾಶ ಪಡೆದರು. ಇದು ಜೊಂಡೊ ಅವರ ಮೊದಲ ಏಕದಿನ ಪಂದ್ಯ. ಚೈನಾಮನ್ ಬೌಲರ್ ತಬ್ರೈಜ್ ಶಂಸಿ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಂಡರು. ಆ್ಯಂಡಿಲ್ ಫೆಲುಕ್ವಾಯೊ ಅವರನ್ನು ಹೊರಗಿಡಲಾಯಿತು. ಡು ಪ್ಲೆಸಿಸ್ ಗೈರಲ್ಲಿ ಕೇವಲ 2 ಪಂದ್ಯಗಳ ಅನುಭವಿ ಐಡನ್ ಮಾರ್ಕ್‌ರಮ್ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದರು. ಅವರು ದಕ್ಷಿಣ ಆಫ್ರಿಕಾದ 2ನೇ ಕಿರಿಯ ಹಾಗೂ ವಿಶ್ವದ 10ನೇ ಕಿರಿಯ ಏಕದಿನ ನಾಯಕನಾಗಿ ಮೂಡಿಬಂದರು. ಸ್ಕೋರ್‌ಪಟ್ಟಿ
ದಕ್ಷಿಣ ಆಫ್ರಿಕಾ
ಹಾಶಿಮ್ ಆಮ್ಲ ಸಿ ಧೋನಿ ಬಿ ಭುವನೇಶ್ವರ್ 23
ಕ್ವಿಂಟನ್ ಡಿ ಕಾಕ್ ಸಿ ಪಾಂಡ್ಯ ಬಿ ಚಾಹಲ್ 20
ಐಡನ್ ಮಾರ್ಕ್‌ರಮ್ ಸಿ ಭುವನೇಶ್ವರ್ ಬಿ ಕುಲದೀಪ್ 8
ಜೆಪಿ ಡ್ಯುಮಿನಿ ಎಲ್‌ಬಿಡಬ್ಲ್ಯು ಚಾಹಲ್ 25
ಡೇವಿಡ್ ಮಿಲ್ಲರ್ ಸಿ ರಹಾನೆ ಬಿ ಕುಲದೀಪ್ 0
ಖಯ ಜೊಂಡೊ ಸಿ ಪಾಂಡ್ಯ ಬಿ ಚಾಹಲ್ 25
ಕ್ರಿಸ್ ಮಾರಿಸ್ ಸಿ ಭುವನೇಶ್ವರ್ ಬಿ ಚಾಹಲ್ 14
ಕಾಗಿಸೊ ರಬಾಡ ಎಲ್‌ಬಿಡಬ್ಲ್ಯು ಕುಲದೀಪ್ 1
ಮಾರ್ನೆ ಮಾರ್ಕೆಲ್ ಎಲ್‌ಬಿಡಬ್ಲ್ಯು ಚಾಹಲ್ 1
ಇಮ್ರಾನ್ ತಾಹಿರ್ ಬಿ ಬುಮ್ರಾ 0
ತಬ್ರೈಜ್ ಶಂಸಿ ಔಟಾಗದೆ 0
ಇತರ 1
ಒಟ್ಟು (32.2 ಓವರ್‌ಗಳಲ್ಲಿ ಆಲೌಟ್) 118
ವಿಕೆಟ್ ಪತನ: 1-39, 2-51, 3-51, 4-51, 5-99, 6-107, 7-110, 8-117, 9-118.
ಬೌಲಿಂಗ್:
ಭುವನೇಶ್ವರ್ ಕುಮಾರ್ 5-1-19-1
ಜಸ್‌ಪ್ರೀತ್ ಬುಮ್ರಾ 5-1-12-1
ಹಾರ್ದಿಕ್ ಪಾಂಡ್ಯ 5-0-34-0
ಯಜುವೇಂದ್ರ ಚಾಹಲ್ 8.2-1-22-5
ಕುಲದೀಪ್ ಯಾದವ್ 6-0-20-3
ಕೇದಾರ್ ಜಾಧವ್ 3-0-11-0 ಭಾರತ
ರೋಹಿತ್ ಶರ್ಮ ಸಿ ಮಾರ್ಕೆಲ್ ಬಿ ರಬಾಡ 15
ಶಿಖರ್ ಧವನ್ ಔಟಾಗದೆ 51
ವಿರಾಟ್ ಕೊಹ್ಲಿ ಔಟಾಗದೆ 46
ಇತರ 7
ಒಟ್ಟು (20.3 ಓವರ್‌ಗಳಲ್ಲಿ ಒಂದು ವಿಕೆಟಿಗೆ) 119
ವಿಕೆಟ್ ಪತನ: 1-26.
ಬೌಲಿಂಗ್:
ಮಾರ್ನೆ ಮಾರ್ಕೆಲ್ 4-0-30-0
ಕಾಗಿಸೊ ರಬಾಡ 5-0-24-1
ಕ್ರಿಸ್ ಮಾರಿಸ್ 3-0-16-0
ಇಮ್ರಾನ್ ತಾಹಿರ್ 5.3-0-30-0
ತಬ್ರೈಜ್ ಶಂಸಿ 3-1-18-0
ಪಂದ್ಯಶ್ರೇಷ್ಠ: ಯಜುವೇಂದ್ರ ಚಾಹಲ್
3ನೇ ಪಂದ್ಯ: ಕೇಪ್‌ಟೌನ್ (ಫೆ. 7)