ಗಾಲೆ: ಐಸಿಸಿ ವನಿತಾ ಚಾಂಪಿಯನ್‌ಶಿಪ್ ಸರಣಿಯ ಏಕದಿನ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ 7 ರನ್ನುಗಳ ರೋಚಕ ಜಯ ಸಾಧಿಸಿದೆ.
ಗಾಲೆಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಸರಿಯಾಗಿ 50 ಓವರ್‌ಗಳಲ್ಲಿ 219ಕ್ಕೆ ಆಲೌಟಾದರೆ, ಶ್ರೀಲಂಕಾ 48.1 ಓವರ್‌ಗಳಲ್ಲಿ 212ಕ್ಕೆ ಕುಸಿಯಿತು.
ಭಾರತದ ಪರ ನಾಯಕಿ ಮಿಥಾಲಿ ರಾಜ್ (52) ಮತ್ತು ಕೀಪರ್ ತನ್ಯಾ ಭಾಟಿಯಾ (68) ಅರ್ಧ ಶತಕ ಬಾರಿಸಿ ಮಿಂಚಿದರು. 66 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ 68 ರನ್ ಹೊಡೆದ ತನ್ಯಾ ಅವರದೇ ಈ ಪಂದ್ಯದ ಟಾಪ್ ಸ್ಕೋರ್ ಎನಿಸಿತು. ಪೂನಂ ರಾವತ್ (3) ಮತ್ತು ಸ್ಮತಿ ಮಂಧನಾ (14) ವಿಕೆಟ್ ಬೇಗನೇ ಉರುಳಿದ ಬಳಿಕ ಎಚ್ಚರಿಕೆಯ ಆಟವಾಡಿದ ಮಿಥಾಲಿ ರಾಜ್ 121 ಎಸೆತಗಳಿಂದ 52 ರನ್ ಹೊಡೆದರು. ಇದರಲ್ಲಿ ನಾಲ್ಕೇ ಬೌಂಡರಿ ಒಳಗೊಂಡಿತ್ತು. ಕೊನೆಯಲ್ಲಿ ಡಿ. ಹೇಮಲತಾ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿ 35 ರನ್ ಬಾರಿಸಿದರು (31 ಎಸೆತ, 3 ಬೌಂಡರಿ, 1 ಸಿಕ್ಸರ್). ಲಂಕಾ ಪರ ಚಾಮರಿ ಜಯಾಂಗನಿ 3, ಉದೇಶಿಕಾ ಪ್ರಬೋಧನಿ ಮತ್ತು ಶ್ರೀಪಾಲಿ ವೀರಕ್ಕೋಡಿ ತಲಾ 2 ವಿಕೆಟ್ ಕಿತ್ತರು.
ಆರಂಭಿಕರಾಗಿ ಬಂದು ಬ್ಯಾಟಿಂಗಿನಲ್ಲೂ ಮಿಂಚಿದ ನಾಯಕಿ ಚಾಮರಿ ಜಯಾಂಗನಿ 57 ರನ್ ಬಾರಿಸಿ ಲಂಕಾ ಹೋರಾಟವನ್ನು ಜಾರಿಯಲ್ಲಿರಿಸಿದರು. ಜಯಾಂಗನಿ ಕ್ರೀಸಿನಲ್ಲಿ ಇರುವಷ್ಟು ಹೊತ್ತು ಲಂಕೆಗೆ ಗೆಲುವಿನ ಅವಕಾಶವಿತ್ತು. ಉಳಿದಂತೆ ಶಶಿಕಲಾ ಸಿರಿವರ್ಧನೆ 49, ನೀಲಾಕ್ಷಿ ಡಿ’ಸಿಲ್ವ 31 ರನ್ ಹೊಡೆದರು.
ಭಾರತದ ಪರ ಮಾನ್ಸಿ ಜೋಶಿ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಉರುಳಿಸಿದರು. ಲಂಕೆಯ ಮೂವರು ರನೌಟ್ ಆಗಿ ನಿರ್ಗಮಿಸಿದರು.