Advertisement

ಮುಂಬಯಿನಲ್ಲಿ 2 ಕಿ.ಮೀ. ದಾಟಂಗಿಲ್ಲ ಏಕೆ?

08:26 AM Jun 30, 2020 | mahesh |

ಮುಂಬಯಿ: ಮಹಾನಗರದ ನಿವಾಸಿಗಳು ಮನೆಯಿಂದ 2 ಕಿ.ಮೀ ವ್ಯಾಪ್ತಿಯಿಂದಾಚೆ ಹೋಗುವಂತಿಲ್ಲ ಎಂಬ ಹೊಸ ನಿಯಮಕ್ಕೆ ನಾಗರಿಕರಿಂದ ವಿರೋಧ ವ್ಯಕ್ತವಾಗಿದೆ. ಜತೆಗೆ, ಈ ನಿಯಮ ಏಕೆ ಜಾರಿಯಲ್ಲಿದೆ, ಯಾವ ಉದ್ದೇಶಗಳಿಗಾಗಿ 2 ಕಿ.ಮೀ ವ್ಯಾಪ್ತಿಯಿಂದಾಚೆ ಹೋಗಬಹುದು, ಯಾವ ಕಾರಣಗಳಿಗೆಲ್ಲಾ ಅವಕಾಶವಿಲ್ಲ, ನಾವು ಎಲ್ಲಿಂದ ಬಂದಿದ್ದೇವೆಂದು ಪೊಲೀಸರಿಗೆ ಹೇಗೆ ಗೊತ್ತಾಗುತ್ತದೆ… ಎಂಬ ಹಲವು ಪ್ರಶ್ನೆಗಳು ನಾಗರಿಕರನ್ನು ಕಾಡುತ್ತಿವೆ.

Advertisement

ನಿಯಮ ಜಾರಿ ಏಕೆ?: ಕೋವಿಡ್ ದ ನಂ.1 ಹಾಟ್‌ಸ್ಪಾಟ್‌ ಆಗಿದ್ದರೂ ಮುಂಬಯಿನ ಬೀಚ್‌ಗಳು, ಪಾರ್ಕ್‌ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ಜನ ಸೇರುತ್ತಿದ್ದಾರೆ. ಈಗಾಗಲೆ ಲಾಕ್‌ಡೌನ್‌ ನಿಯಮಗಳು ಜಾರಿಯಲ್ಲಿದ್ದು, ಇದ­ರೊಂ­ದಿಗೆ 2 ಕಿ.ಮೀ ವ್ಯಾಪ್ತಿಯ ನಿಯಮ ಜಾರಿ­ಯಾದರೆ ಜನ ಅನಗತ್ಯವಾಗಿ ಗುಂಪು ಸೇರುವುದನ್ನು ತಡೆಯಬಹುದು ಎಂಬುದು ಪೊಲೀಸರ ಐಡಿಯಾ.

ಯಾವ ಉದ್ದೇಶಕ್ಕೆ ಅವಕಾಶ?
ಕಿರಾಣಿ ಸಾಮಗ್ರಿ ಖರೀದಿ, ಕೇಶ ವಿನ್ಯಾಸ, ಸಲೂನ್‌, ಬ್ಯೂಟಿ ಪಾರ್ಲರ್‌, ಸ್ನೇಹಿತರ-ಸಂಬಂಧಿಕರ ಮನೆಗೆ ಭೇಟಿ, ಬೀಚ್‌ ಮತ್ತಿತರ ಸಾರ್ವಜನಿಕ ಸ್ಥಳಗಳಿಗೆ ಮನರಂಜನೆಗಾಗಿ ಭೇಟಿ ನೀಡುವುದು, ಧಾರ್ಮಿಕ ಕೇಂದ್ರಗಳ ಭೇಟಿ ಉದ್ದೇಶಕ್ಕಾಗಿ 2 ಕಿ.ಮೀ ವ್ಯಾಪ್ತಿ ಮೀರಿ ಹೋಗಲು ಅವಕಾಶವಿಲ್ಲ. ಕಚೇರಿಗೆ, ವೈದ್ಯಕೀಯ ತುರ್ತು ಉದ್ದೇಶಕ್ಕೆ ಮಾತ್ರ ಈ ವ್ಯಾಪ್ತಿಯಾಚೆ ಹೋಗಬಹುದು.

ವಿರೋಧ ಏಕೆ?: ರವಿವಾರವೇ ನಿಯಮ ಜಾರಿಗೊಳಿಸಲಾಗಿದೆ. ಹೀಗಾಗಿ ಮಾನಸಿಕವಾಗಿ ನಿಯಮ ಪಾಲನೆಗೆ ಸಿದ್ಧರಾಗಲು ಸಮಯಾವಕಾಶ ಸಿಕ್ಕಿಲ್ಲ ಎಂಬ ಆಕ್ರೋಶವಿದೆ. ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರುತ್ತಿದ್ದರೆ, ಅಂತಹ ಸ್ಥಳಗಳನ್ನು ಸೀಲ್‌ಡೌನ್‌ ಮಾಡಿ ಎಂಬ ಸಲಹೆ ಕೂಡ ಕೇಳಿಬಂದಿದೆ.

2 ಕಿ.ಮೀ ದಾಟಿದರೆ?
ಹೊರಗೆ ಸುತ್ತಾಡುವವರು ಮನೆಯ ವಿಳಾಸವಿರುವ ಗುರುತಿನ ಚೀಟಿಯೊಂದಿಗೇ ಮನೆಯಿಂದ ಹೊರಡಬೇಕು. ಬಾಡಿಗೆ ಮನೆಯಲ್ಲಿರುವವರು ಬಾಡಿಗೆ ಕರಾರು ಪತ್ರದ ನಕಲಿ ಪ್ರತಿ ಕೊಂಡೊಯ್ಯಬೇಕು. ಇದರಿಂದ ಪೊಲೀಸರಿಗೆ ಜನರ ಮನೆಯ ವಿಳಾಸ ತಿಳಿಯುತ್ತದೆ. ನಿಗದಿತ ವ್ಯಾಪ್ತಿ ಮೀರಿ ಬಂದಿರುವುದು ಖಾತ್ರಿಯಾದರೆ ಐಪಿಸಿ ಸೆಕ್ಷನ್‌ 188ರ ಅಡಿಯಲ್ಲಿ 6 ತಿಂಗಳು ಜೈಲು ಶಿಕ್ಷೆ ಅಥವಾ 1,000 ರೂ. ದಂಡ ವಿಧಿಸಬಹುದು. ಜೊತೆಗೆ ಹೆಚ್ಚುವರಿ 500 ರೂ. ದಂಡ ಹಾಕಲು ಸಹ ಅವಕಾಶವಿದ್ದು, ನಿಯಮ ಉಲ್ಲಂಘಿಸಿದವರ ವಾಹನವನ್ನು ಪೊಲೀಸರು ಜಪ್ತಿ ಮಾಡುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next