ಹೊಸದಿಲ್ಲಿ : ಕೇಂದ್ರ ಸರಕಾರ 2ಜಿ ಸ್ಪೆಕ್ಟ್ರಂ ಹಗರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ವಿಚಾರಣಾ ನ್ಯಾಯಾಲಯವು ಈ ಹಗರಣದಲ್ಲಿ ಶಾಮೀಲಾದ ಬಹುತೇಕ ಎಲ್ಲರನ್ನೂ ಖುಲಾಸೆಗೊಳಿಸಿದ್ದು ಇದನ್ನು ಮತ್ತೆ ಬೆಂಬತ್ತಲು ಕೇಂದ್ರ ಸರಕಾರ ನಿರ್ಧರಿಸಿದೆ.
ಅಂತೆಯೇ ಕೇಂದ್ರ ಸರಕಾರ ಅಡಿಶನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಈ ಕೇಸನ್ನು ನಿರ್ವಹಿಸುವುದಕ್ಕಾಗಿ ಸ್ಪೆಶಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸರಕಾರ ನೇಮಿಸಿದೆ.
ಮೆಹ್ತಾ ಅವರು ಆನಂದ್ ಗ್ರೋವರ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಇವರನ್ನು 2014ರ ಸೆಪ್ಟಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೇಮಿಸಿತ್ತು. ಆಗಿನ ಎಸ್‌ಪಿಪಿ ಯುಯು ಲಲಿತ್ ಅವರನ್ನು ಸರ್ವೋಚ್ಚ ನ್ಯಾಯಾಲಯವು ನ್ಯಾಯಾಧೀಶರ ಹುದ್ದೆಗೆ ಭಡ್ತಿ ನೀಡಿದ್ದುದು ಇದಕ್ಕೆ ಕಾರಣವಾಗಿತ್ತು.
ಮೆಹ್ತಾ ಅವರನ್ನು ಸ್ಪೆಶಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸುವ ಪ್ರಕಟನೆಯು ಮೊನ್ನೆ ಗುರುವಾರ ಗಜೆಟ್‌ನಲ್ಲಿ ಪ್ರಕಟವಾಗಿತ್ತು. ಮೆಹ್ತಾ ಅವರು ಗುಜರಾತ್ ಸರಕಾರದಲ್ಲಿ 2008ರಿಂದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಕಾರ್ಯಭಾರ ನಿರ್ವಹಿಸುತ್ತಿದ್ದರು.
2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷ್ಯಗಳು ಅಪರ್ಯಾಪ್ತ ಮತ್ತು ಅತೃಪ್ತಿಕರ ಎಂಬ ಕಾರಣ ನೀಡಿ ವಿಶೇಷ ಸಿಬಿಐ ಕೋರ್ಟ್ ನ್ಯಾಯಾಧೀಶರಾದ ಒ ಪಿ ಸಯಾನಿ ಅವರು ಖುಲಾಸೆಗೊಳಿಸಿದ ಆರೋಪಿಗಳಲ್ಲಿ ಮಾಜಿ ಟೆಲಿಕಾ, ಸಚಿವ ಎ ರಾಜಾ ಮತ್ತು ಡಿಎಂಕೆ ಸಂಸದೆ ಕೆ ಕಣಿಮೋಳಿ ಅವರು ಪ್ರಧಾನರಾಗಿದ್ದರು.