ಈ ತೀರ್ಪು ಕಳೆದ ಕೆಲ ಸಮಯದಿಂದ ಚೇತರಿಕೆಯ ಹಾದಿಯಲ್ಲಿರುವ ಕಾಂಗ್ರೆಸ್‌ಗೆ ಹೊಸ ನೈತಿಕ ಸ್ಥೈರ್ಯವನ್ನು ತಂದು ಕೊಟ್ಟಿದ್ದರೆ, ಬಿಜೆಪಿಯ ಒಂದು ಪ್ರಬಲ ಅಸ್ತ್ರವನ್ನೇ ಕಸಿದುಕೊಂಡಿದೆ.
ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಸಿಎಜಿ ಬಯಲುಗೊಳಿಸಿದ 2ಜಿ ಹಗರಣದ ಮೊತ್ತವನ್ನು ನೋಡಿ ಇಡೀ ದೇಶವೇ ದಂಗುಬಡಿದು ಹೋಗಿತ್ತು. 1.74 ಲಕ್ಷ ಕೋ. ರೂ.ಯ ಹಗರಣ ಎಂದಾಗ 1ರ ಎದುರು ಎಷ್ಟು ಸೊನ್ನೆಗಳನ್ನು ಬರೆಯಬೇಕೆಂಬ ಅಂದಾಜು ಕೂಡ ಸಾಮಾನ್ಯರಿಗೆ ಇರಲಿಲ್ಲ. ಹಗರಣಗಳು ಹೊಸತಲ್ಲವಾದರೂ ಇಷ್ಟು ಭಾರೀ ಮೊತ್ತದ ಹಗರಣವನ್ನು ದೇಶ ಕಂಡದ್ದು ಇದೇ ಮೊದಲು.ಅಧಕಾರದಲ್ಲಿದ್ದವರು ಈ ಪರಿ ನುಂಗಲು ಸಾಧ್ಯವೇ ಎಂದು ಜನರು ಆಶ್ಚರ್ಯಚಕಿತರಾಗಿದ್ದರು. ದೇಶಾದ್ಯಂತ 2ಜಿ ಹಗರಣ ಸಂಚಲನಕ್ಕೆ ಕಾರಣವಾಗಿತ್ತು. ಇದೀಗ ಐದೂವರೆ ವರ್ಷಗಳ ಬಳಿಕ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ 2ಜಿ ಹಗರಣದ ತೀರ್ಪು ಮತ್ತೂಮ್ಮೆ ಇದೇ ರೀತಿಯ ಸಂಚಲನವುಂಟು ಮಾಡಿದೆ. ಮಾಜಿ ಸಚಿವರಾದ ಡಿ. ರಾಜಾ ಮತ್ತು ಕನ್ನಿಮೋಳಿ ಹಾಗೂ ಇತರ 15 ಅಧಿಕಾರಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿದೆ ಎಂಬ ನೆಲೆ ಯಲ್ಲಿ ಖುಲಾಸೆಗೊಳಿಸಿರುವ ತೀರ್ಪು ಸಿಬಿಐಯ ತನಿಖಾ ಸಾಮರ್ಥ್ಯದ ಎದುರು ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯಿಟ್ಟಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಸರಕಾರದ ವರ್ಚಸ್ಸಿಗೆ ಇನ್ನಿಲ್ಲದ ಕಳಂಕ ಮೆತ್ತಿದ, 2014ರ ಸಾರ್ವತ್ರಿಕ ಚುನಾವಣೆಯ ಮೇಲೆ ಪ್ರಭಾವ ಬೀರಿದ ಹಗರಣದ ತನಿಖೆ ಇಷ್ಟು ನೀರಸವಾಗಿ ಮುಗಿಯಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಒಂದು ವೇಳೆ ಇದೇ ತೀರ್ಪು ಒಂದು ವಾರದ ಹಿಂದೆ ಏನಾದರೂ ಬಂದಿದ್ದರೆ ಗುಜರಾತ್ ಚುನಾವಣೆಯ ಫಲಿತಾಂಶದ ಮೇಲೂ ಪ್ರಭಾವವಾಗುವ ಸಾಧ್ಯತೆಯೂ ಇತ್ತು. ಈ ತೀರ್ಪು ಕಳೆದ ಕೆಲ ಸಮಯದಿಂದ ಚೇತರಿಕೆಯ ಹಾದಿಯಲ್ಲಿರುವ ಕಾಂಗ್ರೆಸ್‌ಗೆ ಹೊಸ ನೈತಿಕ ಸ್ಥೈರ್ಯವನ್ನು ತಂದು ಕೊಟ್ಟಿದ್ದರೆ, ಬಿಜೆಪಿಯ ಒಂದು ಪ್ರಬಲ ಅಸ್ತ್ರವನ್ನೇ ಕಸಿದುಕೊಂಡಿದೆ. ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು ವರ್ಣಿಸಲು 2ಜಿ ಹಗರಣವನ್ನು ಬಿಜೆಪಿ ಬಳಸಿಕೊಳ್ಳುತ್ತಿತ್ತು. ಅಂತೆಯೇ ತಮಿಳುನಾಡಿನ ಡಿಎಂಕೆ ಪಕ್ಷಕ್ಕೂ ಆರ್. ಕೆ. ನಗರ ಉಪಚುನಾವಣೆ ಸಂದರ್ಭದಲ್ಲೇ ತೀರ್ಪು ಪ್ರಕಟವಾಗಿರುವುದು ವರದಾನವಾಗಲೂಬಹುದು.
ಸಿಬಿಐ ತನಿಖೆಗೂ ಮೊದಲೇ ಸುಪ್ರೀಂ ಕೋರ್ಟ್ 2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಅವ್ಯವಹಾರವಾಗಿ ರುವುದನ್ನು ಕಂಡುಕೊಂಡಿತ್ತು ಹಾಗೂ ಡಿ. ರಾಜಾ 8 ಟೆಲಿಕಾಂ ಕಂಪೆನಿಗಳಿಗೆ ಹಂಚಿದ 122 ಸ್ಪೆಕ್ಟ್ರಂ ಲೈಸೆನ್ಸ್‌ಗಳನ್ನು ರದ್ದುಗೊಳಿಸಿತ್ತು. ನಂತರ ತನಿಖೆ ನಡೆಸಿ ಸಾವಿರಾರು ಪುಟದ ದೋಷಾ ರೋಪಪಟ್ಟಿ ಸಲ್ಲಿಸಿ ರುವ ಸಿಬಿಐಇಗೆ ಆರೋಪವನ್ನು ಸಾಬೀತುಗೊಳಿ ಸುವ ಒಂದೇ ಒಂದು ಪುರಾವೆ ಸಿಕ್ಕಿಲ್ಲ ಎನ್ನುವುದಾದರೆ ಸಿಬಿಐ ಯಾವ ನೆಲೆಯಲ್ಲಿ ತನಿಖೆಯನ್ನು ಮಾಡಿತ್ತು ಎಂದು ಪ್ರಶ್ನಿಸಬೇಕಾಗು ತ್ತದೆ. ಸುಪ್ರೀಂ ಕೋರ್ಟಿಗೆ ಕಂಡಿ ರುವ ಅವ್ಯವಹಾರ ಸಿಬಿಐ ಕೋಟಿಗೆ ಕಾಣಲಿಲ್ಲ ಎನ್ನುವ ಅಂಶ ಸಂದೇಹಕ್ಕೆಡೆ ಮಾಡಿಕೊಡುತ್ತಿದೆ. ಹಾಗೆಂದು ಸಿಬಿಐ ಒಂದೇ ಈ ಹಗರಣದ ತನಿಖೆ ನಡೆಸಿರುವುದಲ್ಲ. ಸಿವಿಸಿ, ಸಿಎಜಿಯೂ ತನಿಖೆ ನಡೆಸಿತ್ತು. ಜತೆಗೆ ವಿಪಕ್ಷಗಳ ಒತ್ತಾಯದಿಂದ ರಚಿಸಲ್ಪಟ್ಟ ಜಂಟಿ ಸಂಸದೀಯ ಸಮಿತಿಯೂ ತನಿಖೆ ನಡೆಸಿದೆ. ಈ ಪೈಕಿ ಜೆಪಿಸಿ ನಿರೀಕ್ಷಿಸಿದಂತೆಯೇ ಯುಪಿಎ ಸರಕಾರಕ್ಕೆ ಕ್ಲೀನ್‌ಚಿಟ್ ನೀಡಿಯೂ ಆಗಿದೆ. ವಿಶೇಷವೆಂದರೆ ಯಾವ ತನಿಖಾ ಸಂಸ್ಥೆಗೂ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಯಾವ ರೀತಿ ಹಗರಣ ನಡೆದಿದೆ ಎಂದು ಪೂರ್ಣವಾಗಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಎಲ್ಲ ತನಿಖಾ ಸಂಸ್ಥೆಗಳು ಕುರುಡರು ಆನೆಯನ್ನು ಮುಟ್ಟಿ ನೋಡಿ ವರ್ಣಿಸಿದಂತೆ ತಮ್ಮ ಗ್ರಹಿಕೆಗೆ ದಕ್ಕಿದಷ್ಟನ್ನೇ ವರದಿ ಮಾಡಿದ್ದವು. ಹೀಗಾಗಿ ಇಂದಿಗೂ 2ಜಿ ಸ್ಪೆಕ್ಟ್ರಂ ಹಗರಣದ ಮೊತ್ತ ಎಷ್ಟು ಎನ್ನುವುದು ಸ್ಪಷ್ಟವಾಗಿಲ್ಲ. ಸಿಎಜಿ 1.74 ಲಕ್ಷ ಕೋಟಿ ಎಂದದ್ದು ಸಿಬಿಐ ತನಿಖೆಯಿಂದ 30,984 ಕೋ.ರೂ.ಗಿಳಿದಿತ್ತು.
ಸಿಬಿಐ ಸ್ಥಿತಿ ಬೆಟ್ಟ ಅಗೆದು ಇಲಿಯನ್ನೂ ಹಿಡಿಯಲು ಸಾಧ್ಯವಾಗ ದಂತಾಗಿದೆ. ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಾದ ಬಾಧ್ಯತೆ ಸಿಬಿಐ ಮೇಲಿದೆ. ಉದಾಹರಣೆಗೆ ಹೇಳುವುದಾದರೆ ರಿಲಯನ್ಸ್ ಮತ್ತು ಯುನಿ ಟೆಕ್‌ನ ಸೇರಿ ಸ್ವಾನ್ ಟೆಲಿಕಾಮ್ ಎಂಬ ಕಂಪೆನಿಯನ್ನು ಸೃಷ್ಟಿಸಿಕೊಂಡು ಒಂದೇ ಲೈಸೆನ್ಸ್ ಪಡೆಯಲು ಸಂಚು ಮಾಡಿವೆ ಎಂದು ಸಿಬಿಐ ಆರೋಪಿ ಸಿತ್ತು. ಆದರೆ ಪ್ರತಿಸ್ಪರ್ಧಿ ಕಂಪೆನಿಗಳು ಪರಸ್ಪರ ಕೈಜೋಡಿಸಿದ್ದು ಏಕೆ ಎನ್ನುವುದನ್ನು ವಿವರಿಸಲು ಸಿಬಿಐಯಿಂದ ಸಾಧ್ಯವಾಗಿಲ್ಲ. ಡಿ. ರಾಜಾ ಏಕೆ ಯುನಿಟೆಕ್‌ಗೆ ಸಹಾಯ ಮಾಡಿದರು? ಡಿಎಂಕೆ ಮಾಲಕತ್ವದ ಕಲೈನಾರ್ ಮತ್ತು ಡಿಬಿ ಗ್ರೂಪ್ ನಡುವೆ ನಡೆದಿರುವ 200 ಕೋಟಿ ರೂಪಾಯಿ ವ್ಯವಹಾರ ಲಂಚದ ಹಣವೇ ಆಗಿದ್ದರೆ ಅದನ್ನು ಸಾಬೀತುಪಡಿಸಲು ಏಕೆ ಸಾಧ್ಯ ವಾಗಲಿಲ್ಲ ಎಂಬಿತ್ಯಾದಿ ಪ್ರಶ್ನೆಗೆ ಸಿಬಿಐ ಉತ್ತರಿಸಬೇಕು. ನಮ್ಮ ಕಾನೂನಿನ ಬಲೆಗೆ ಬೀಳುವುದು ಚಿಕ್ಕ ಮೀನುಗಳು ಮಾತ್ರ, ದೊಡ್ಡ ಮೀನುಗಳಿಗೆ ಬಲೆಯನ್ನೇ ಹರಿದು ಬರುವ ಸಾಮರ್ಥ್ಯವಿದೆ ಎನ್ನುವುದು 2ಜಿ ತೀರ್ಪಿನಿಂದ ಮತ್ತೂಮ್ಮೆ ಸಾಬೀತಾಗಿದೆ.