Advertisement

2B reservation ಮರುಸ್ಥಾಪಿಸ ಬೇಕು: ರಾಜ್ಯಪಾಲರಿಗೆ ಭಟ್ಕಳ ತಂಝೀಮ್ ಮನವಿ

08:58 PM Apr 05, 2023 | Team Udayavani |

ಭಟ್ಕಳ: ಮುಸ್ಲಿಮರಿಗೆ ನೀಡುತ್ತಿದ್ದ ಸಂವಿಧಾನ ಬದ್ಧ ಹಕ್ಕಾಗಿರುವ 2 ಬಿ ಮೀಸಲಾತಿಯನ್ನು ಮರುಸ್ಥಾಪಿಸ ಬೇಕು ಎಂದು ಇಲ್ಲಿನ ಮಜ್ಲಿಸೆ ಇಸ್ಲಾ-ವ-ತಂಝೀಮ್ ವತಿಯಿಂದ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Advertisement

ಮನವಿಯಲ್ಲಿ ಅಲ್ಪ ಸಂಖ್ಯಾತ ಮುಸ್ಲಿಂ ಸಮುದಾಯದ ಶೈಕ್ಷಣಿಕ ಮತ್ತು ಉದ್ಯೋಗದ ಸವಲತ್ತುಗಳಿಗೆ ಮೀಸಲಿರಿಸಿದ ಶೇ.4 ರ ಪ್ರವರ್ಗ ‘2 ಬಿ’ ಮೀಸಲಾತಿಯನ್ನು ರಾಜ್ಯ ಬಿಜೆಪಿ ಸರಕಾರ ರದ್ದುಗೊಳಿಸಿ ಇತರ ಸಮುದಾಯಕ್ಕೆ ನೀಡಿದ ಕ್ರಮ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು ಇದನ್ನು ಭಟ್ಕಳ ತಂಝೀಮ್ ಸಂಸ್ಥೆ ತೀವ್ರವಾಗಿ ಖಂಡಿಸುತ್ತದೆ. ಅಲ್ಪಸಂಖ್ಯಾತ ಮುಸ್ಲಿಮರನ್ನು ೨ಬಿ ಮೀಸಲಾತಿಯಿಂದ ಕೈಬಿಡುವ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಂಡು ಮುಸ್ಲಿಮರಿಗೆ ನೀಡುತ್ತಿದ್ದ ಶೇ.4 ರ ಮೀಸಲಾತಿಯ ಬದಲಿಗೆ ಶೇ.7 ರ ಮೀಸಲಾತಿ ನೀಡಿ ಆದೇಶಿಸಬೇಕು ಎಂದು ಆಗ್ರಹಿಸಲಾಗಿದೆ.

ಸಂವಿಧಾನ ಬದ್ಧವಾಗಿರುವ ಮುಸ್ಲಿಮ್ ಸಮುದಾಯದ 2 ಬಿ ಮೀಸಲಾತಿಯನ್ನು ರಾಜ್ಯ ಸರಕಾರ ರದ್ದುಗೊಳಿಸಿರುವುದು ಮತೀಯ ತಾರತಮ್ಯ ಮತ್ತು ಸಮುದಾಯವನ್ನು ಶೈಕ್ಷಣಿಕ ಹಕ್ಕುಗಳಿಂದ ವಂಚಿಸುವ ಪ್ರಯತ್ನವಾಗಿದೆ. ಮುಸ್ಲಿಮರ ಹಕ್ಕನ್ನು ಕಸಿದು ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳಿಗೆ ಹಂಚಿರುವುದು ಅನ್ಯಾಯದ ಪರಮಾವಧಿಯಾಗಿದ್ದು ರಾಜ್ಯ ಸರಕಾರ ತಕ್ಷಣ ಮುಸ್ಲಿಮ್ ಸಮುದಾಯದ ಮೀಸಲಾತಿಯನ್ನು ಮರು ಸ್ಥಾಪಿಸ ಬೇಕು ಎಂದೂ ಒತ್ತಾಯಿಸಿದ್ದಾರೆ.

ಕರ್ನಾಟಕ ಸರಕಾರದಿಂದ ನೇಮಕಗೊಂಡ ಚಿನ್ನಪ್ಪ ರೆಡ್ಡಿ ಆಯೋಗವು 1990 ರಲ್ಲಿ ತನ್ನ ವರದಿಯನ್ನು ನೀಡಿತ್ತು. ವರದಿ ಮತ್ತು ಅಂದಿನ ಅಲ್ಪಸಂಖ್ಯಾತ ಆಯೋಗದ ವರದಿಯನ್ನು ಆಧರಿಸಿ ಕರ್ನಾಟಕ ಸರಕಾರವು 2ಎ (ಶೇ.15), ೨ಬಿ (ಶೇ.04), ೩ಎ (ಶೇ.4), 2ಬಿ (ಶೇ.5 ), ಪ್ರವರ್ಗ-1 (ಶೇ.4)ರ ಗುಂಪುಗಳನ್ನು ರಚಿಸಿ ಹಿಂದುಳಿದ ಸಮುದಾಯಗಳಿಗೆ ಶೇ.32 ರ ಮೀಸಲಾತಿಯನ್ನು ಕಲ್ಪಿಸಲಾಯಿತು. ರೆಹಮಾನ್ ಖಾನ್ ಅಧ್ಯಕ್ಷರಾಗಿದ್ದಾಗ ಅಂದಿನ ಅಲ್ಪಸಂಖ್ಯಾತ ಆಯೋಗವು ಮುಸ್ಲಿಮರ ಸಾಮಾಜಿಕ, ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಅಧ್ಯಯನ ಮಾಡಿ ಶೇ.6 ರ ಮೀಸಲಾತಿಯನ್ನು ಶಿಫಾರಸು ಮಾಡಿತ್ತು. ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನೇತೃತ್ವದ ಸರಕಾರ ಶೇ.6 ರ ಮೀಸಲಾತಿಯನ್ನು ನೀಡಲು ಮುಂದಾಗಿದ್ದರೂ ಕೂಡಾ ಒಟ್ಟು ಮೀಸಲಾತಿಯ ಪ್ರಮಾಣ ಶೇ.50 ನ್ನು ಮೀರಬಾರದು ಎಂಬ ನ್ಯಾಯಾಲಯದ ಆದೇಶದಂತೆ ಮುಸ್ಲಿಮರಿಗೆ ಶೇ.4 ರ ಮೀಸಲಾತಿಯನ್ನು ಮಿತಿಗೊಳಿಸಲಾಯಿತು. ಮುಂದೆ ಅಧಿಕಾರಕ್ಕೆ ಬಂದ ದೇವೇಗೌಡರ ನೇತೃತ್ವದ ಸರಕಾರ ಈ ಮೀಸಲಾತಿ ನೀತಿಯನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತಂದರು. ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸು ಆಧರಿಸಿ ಸುಮಾರು 28 ವರ್ಷಗಳ ಹಿಂದೆ ಅನುಷ್ಠಾನಗೊಂಡ ಮೀಸಲಾತಿ ವ್ಯವಸ್ಥೆಯನ್ನು ಯಾವುದೇ ಮುಂದಾಲೋಚನೆಯಿಲ್ಲದೆ ಕೇವಲ ತಮ್ಮ ರಾಜಕೀಯ ಸ್ವಾರ್ಥಕ್ಕೂಸ್ಕರ ಮುಸ್ಲಿಮ್ ಅಲ್ಪಸಂಖ್ಯಾತರಿಗೆ ಅನ್ಯಾಯವೆಸಗುತ್ತಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಮಜ್ಲಿಸೆ ಇಸ್ಲಾ-ವ-ತಂಝೀಮ್ ಅಧ್ಯಕ್ಷ ಇನಾಯತ್‌ವುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುರ್‌ರಖೀಬ್ ಎಂ.ಜೆ., ನಿಕಟಪೂರ್ವ ಅಧ್ಯಕ್ಷ ಎಸ್.ಎಂ.ಪರ್ವೇಜ್, ಅಲ್ತಾಫ್ ಖರೂರಿ, ಜೈಲಾನಿ ಶಾಬಂದ್ರಿ, ಅಜೀಜುರ್‌ರೆಹಮಾನ್ ನದ್ವಿ ಮುಂತಾದವರು ಉಪಸ್ಥಿತರಿದ್ದರು.

Advertisement

ಮನವಿಯನ್ನು ಸ್ವೀಕರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಹಿರಿಯ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಕಳುಹಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next