Advertisement

ಪಂಚಮಸಾಲಿ 2ಎ ಮೀಸಲಾತಿಗೆ ಹೊಸ ಗಡುವು

09:05 PM Mar 31, 2022 | Team Udayavani |

ಬೆಂಗಳೂರು:  ಲಿಂಗಾಯತ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಹೋರಾಟದ ನೇತೃತ್ವದ ವಹಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರಕ್ಕೆ ಎ.14ರ ಅಂಬೇಡ್ಕರ್‌ ಜಯಂತಿಯ ಅಂತಿಮ ಗಡುವು ನೀಡಿದ್ದಾರೆ.  ಅಷ್ಟರೊಳಗೆ  ಮೀಸಲಾತಿ ಕಲ್ಪಿಸದಿದ್ದರೆ ಎ.21ರಂದು ಕೂಡಲಸಂಗಮದಲ್ಲಿ ಅಂತಿಮ ಹಂತದ ಹೋರಾಟ ನಡೆಸಲಾಗುತ್ತದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Advertisement

ಈ ಕುರಿತು ಗುರುವಾರ ನಗರದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಬಜೆಟ್‌ ಅಧಿವೇಶನದಲ್ಲಿಯೇ ಸರ್ಕಾರ ಮೀಸಲಾತಿ ಕಲ್ಪಿಸುವುದಾಗಿ ಮಾತು ನೀಡಿತ್ತು. ಆದರೆ, ಹಿಂದುಳಿದ ವರ್ಗದ ಆಯೋಗದಿಂದ ವರದಿ ತರಿಸಿಕೊಳ್ಳುವುದು ತಡವಾಗಿದೆ. ಮುಂದಿನ 15 ದಿನಗಳಲ್ಲಿ ಮೀಸಲಾತಿ ಕಲ್ಪಿಸುವುದಾಗಿ ಹೇಳಿದ್ದಾರೆ. ಸರ್ಕಾರ ವರದಿ ತರಿಸಿಕೊಳ್ಳುತ್ತೋ ಬಿಡುತ್ತೋ ಗೊತ್ತಿಲ್ಲ. ಇದು ಅಂತಿಮ ಹಂತದ ಗಡುವು ಎಮದು ಹೇಳಿದರು.

ಮೀಸಲಾತಿ ಅನುಷ್ಠಾನಕ್ಕಾಗಿ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಚಿವರಾದ ಸಿ.ಸಿ. ಪಾಟೀಲ್‌, ಶಂಕರಪಾಟೀಲ್‌ ಮುನೇನಕೊಪ್ಪ, ಶಾಸಕರಾದ ಬಸವನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ, ವಿಜಯಾನಂದ ಕಾಶಪ್ಪನವರ್‌ ಅವರನ್ನು ಒಳಗೊಂಡ 12 ಮಂದಿ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಷ್ಟ್ರೀಯ ಸ್ವಾಗತ ಸಮಿತಿ ಅಧ್ಯಕ್ಷ ಬಸವನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ 15 ದಿನಗಳಲ್ಲಿ ಪಂಚಮಸಾಲಿಗಳಿಗೆ ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ವಿನಯ್‌ ಕುಲಕರ್ಣಿ, ಎ.ಬಿ. ಪಾಟೀಲ್‌ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next