ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ತನ್ನ ಕಬಂಧಬಾಹುವನ್ನು ಚಾಚಿದ್ದು ಸೋಂಕಿತರ ಸಂಖ್ಯೆ 29ಕ್ಕೇ ಏರಿಕೆಯಾಗಿದೆ. ಹರಿಯಾಣ ಗುರುಗ್ರಾಮದ ಪೇಟಿಎಂ(Paytm) ಉದ್ಯೋಗಿಯೊಬ್ಬರಲ್ಲಿ ಕೂಡ ಮಾರಕ ಕೊರೊನಾ ವೈರಸ್ ಸೋಂಕು ಇರುವುದು ಬುಧವಾರ ಧೃಢಪಟ್ಟಿದೆ.
ಕೆಲವು ದಿನಗಳ ಹಿಂದಷ್ಟೆ ಇಟಲಿ ಪ್ರವಾಸವನ್ನು ಮುಗಿಸಿ ನಮ್ಮ ಉದ್ಯೋಗಿಗಳು ತವರಿಗೆ ಮರಳಿದ್ದರು ಅವರಲ್ಲಿ ಒಬ್ಬರಿಗೆ ಇದೀಗ ಕೋವಿಡ್-19 ಇರುವುದು ದೃಢಪಟ್ಟಿದೆ ಎಂದು ಪೇಟಿಎಂ ಸಂಸ್ಥೆ ತಿಳಿಸಿದೆ.
ಉದ್ಯೋಗಿಯಲ್ಲಿ ಕೊರೊನಾ ಕಂಡುಬಂದಿರುವುದರಿಂದ ಉತ್ತರ ಪ್ರದೇಶದ ನೋಯ್ಡಾ ಮತ್ತು ಹರಿಯಾಣದ ಗುರುಗ್ರಾಮದಲ್ಲಿರುವ ಕಚೇರಿಗಳನ್ನು ಎರಡು ದಿನಗಳವರೆಗೆ ಬಂದ್ ಮಾಡಿ, ಶುಚಿಗೊಳಿಸಲು ಪೇಟಿಎಂ ಆದೇಶಿಸಿದೆ. ಇದರೊಂದಿಗೆ ಪೇಟಿಎಂ ತನ್ನ ಉದ್ಯೋಗಿಗಳಿಗೆ ಮುಂದಿನ ಕೆಲ ದಿನಗಳವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಿದೆ.
ಈ ಬಗ್ಗೆ ಮಾತನಾಡಿರುವ ಪೇಟಿಎಂ ವಕ್ತಾರ, ಇಟಲಿ ಪ್ರವಾಸ ಮುಗಿಸಿ ಬಂದವರಿಗೆ ಸೋಂಕು ತಗುಲಿದೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರ ಕುಟುಂಬಕ್ಕೆ ಸಂಪೂರ್ಣವಾಗಿ ನೆರವಾಗುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಉದ್ಯೋಗಿಗಳಿಗೆ ಮುಂಜಾಗೃತಾ ಕ್ರಮಕ್ಕೂ ಸೂಚಿಸಲಾಗಿದೆ.
ಸೋಮವಾರ ಇಟಲಿಯಿಂದ ಮರಳಿದ ಪೇಟಿಎಂ ಉದ್ಯೋಗಿಗಳು ಸದ್ಯ ಸಫರ್ ದರ್ ಜಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.