ಬೆಂಗಳೂರು: ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸ್ ತನಿಖೆ ನಡೆಸುವುದಕ್ಕೆ ಅವಕಾಶ ನೀಡಿ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಸಿದ್ದು, ಪ್ರಕರಣ ಇಂದೇ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಯಡಿಯೂರಪ್ಪ, ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಅಧಿಕಾರಿಗಳು, ಗುತ್ತಿಗೆದಾರರನ್ನು ಆರೋಪಿಗಳನ್ನಾಗಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶ ನೀಡಿತ್ತು.
ಬಹುಮಹಡಿ ವಸತಿ ಯೋಜನೆಯ ಗುತ್ತಿಗೆ ಮುಂದುವರಿಸಲು 29 ಕೋಟಿ ರೂ. ಲಂಚವನ್ನು ಯಡಿಯೂರಪ್ಪ ಹಾಗೂ ಕುಟುಂಬ ವರ್ಗ ಪಡೆದಿದೆ. ವಿಜಯೇಂದ್ರ ಹಾಗೂ ಶಶಿಧರ ಮರಡಿ ಒಡೆತನಕ್ಕೆ ಸೇರಿದ ಬೆಲ್ ಗ್ರಾವಿಯಾ ಹಾಗೂ ಎಸ್ವಿಎಸ್ ಸಂಸ್ಥೆಗಳಿಗೆ ಬಂಗಾಲದ ಶೆಲ್ ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಅಬ್ರಾಹಂ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಇದನ್ನೂ ಓದಿ:ಸೆಲ್ಫಿ ಕ್ಲಿಕ್ಕಿಸಲು ಹೋಗಿ ಕಾಲುವೆಗೆ ಬಿದ್ದ ವಿದ್ಯಾರ್ಥಿಗಳು; ಇಬ್ಬರು ಸಾವು!
ಹೈಕೋರ್ಟ್ ವಿಚಾರಣೆಗೆ ಅಸ್ತು ಹೇಳಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸುಪ್ರೀಂ ಕೋರ್ಟ್ ಗೆ ನೇಲ್ಮನವಿ ಸಲ್ಲಿಸಿದ್ದಾರೆ. ವಿಚಾರಣೆ ರದ್ದುಪಡಿಸುವಂತೆ ಅವರು ಮನವಿ ಮಾಡಿದ್ದಾರೆ.