Advertisement

ಬೊರಿವಲಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ 28ನೇ ವಾರ್ಷಿಕ ಮಹೋತ್ಸವ

04:42 PM May 31, 2018 | |

ಮುಂಬಯಿ: ಬೊರಿವಲಿ ಪಶ್ಚಿಮ, ಜೈರಾಜ್‌ ನಗರದ ಶ್ರೀ ಮಹಿಷ ಮರ್ದಿನಿ ದೇವಸ್ಥಾನ ಟ್ರಸ್ಟ್‌ ಇದರ 28ನೇ ವಾರ್ಷಿಕ ಮಹೋತ್ಸವವು ಮೇ 30ರಂದು ಪ್ರಾರಂಭಗೊಂಡಿದ್ದು, ಜೂ. 3ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

Advertisement

ಬ್ರಹ್ಮಶ್ರೀ ಕೊಯ್ಯೂರು ನಂದ ಕುಮಾರ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ಸ್ಥಾಪಕ ಮೊಕ್ತೇಸರ, ವಂಶಸ್ಥರಾದ ಜಯರಾಜ ಶ್ರೀಧರ ಶೆಟ್ಟಿ ಕಲ್ಲಮುಂಡ್ಕೂರು ಹರಿಯಾಳಗುತ್ತು, ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ, ಮೊಕ್ತೇಸರ ಜಯಪಾಲಿ ಅಶೋಕ್‌ ಶೆಟ್ಟಿ ದಂಪತಿ ಮತ್ತು ಅರ್ಚಕ ವೃಂದ, ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ, ಶ್ರೀ ಮಹಿಷ ಮರ್ದಿನಿ ಭಜನ ಮಂಡಳಿಯವರ ನೇತೃತ್ವದಲ್ಲಿ ಮತ್ತು ಉಪಸ್ಥಿತಿಯಲ್ಲಿ ವಾರ್ಷಿಕ ಮಹೋತ್ಸವವು ಪ್ರಾರಂಭಗೊಂಡಿತು.

ಧಾರ್ಮಿಕ ಕಾರ್ಯಕ್ರಮವಾಗಿ  ಬೆಳಗ್ಗೆ 8 ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ನವಕ ಕಲಶ ಹಾಗೂ ಪ್ರಧಾನ ಹೋಮ, ಗಣಹೋಮ, ಸಾರ್ವಜನಿಕ ನವಗ್ರಹ ಹೋಮ, ಸಾರ್ವಜನಿಕ ಅಶ್ಲೇಷಾ ಬಲಿ ನಡೆಯಿತು. ಪರಿಸರದ ನೂರಾರು ತುಳು-ಕನ್ನಡಿಗ ಭಕ್ತಾದಿಗಳು ಸಾರ್ವಜನಿಕ ಆಶ್ಲೇಷಾಬಲಿಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಮಧ್ಯಾಹ್ನ 12ರಿಂದ ಪ್ರಸನ್ನ ಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾದರು. ಸಂಜೆ 6.30 ರಿಂದ ಉತ್ಸವ ಬಲಿ, ವಸಂತಕಟ್ಟೆ ಪೂಜೆ, ಮಹಾಪೂಜೆ, ನಿತ್ಯ ಬಲಿ, ರಾತ್ರಿ 10 ರಿಂದ  ಶ್ರೀ ಮಹಿಷಮರ್ದಿನಿ ಭಜನ ಮಂಡಳಿ ಮತ್ತು ಆಹ್ವಾನಿತ ವಿವಿಧ ಭಜನ ಮಂಡಳಿಗಳಿಂದ ಏಕಾಹ ಭಜನ ಕಾರ್ಯಕ್ರಮವು ಅದ್ದೂರಿ ಯಾಗಿ ನೆರವೇರಿತು.

Advertisement

ಕಾರ್ಯಕ್ರಮದಲ್ಲಿ ಸ್ಥಳೀಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ರಾಜಕೀಯ ಧುರೀಣರು, ವಿವಿಧ ಕನ್ನಡ ಮತ್ತು ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಮತ್ತು ಅರ್ಚಕ ವೃಂದ, ಶ್ರೀ ಮಹಿಷ ಮರ್ದಿನಿ ದೇವಸ್ಥಾನ ಆಡಳಿತ ಮಂಡಳಿ, ಶ್ರೀ ಮಹಿಷ ಮರ್ದಿನಿ ಭಜನ ಮಂಡಳಿಯವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಬೊರಿವಲಿ ಪರಿಸರದಲ್ಲಿ ಹಲವಾರು ವರ್ಷಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಈ ಕ್ಷೇತ್ರವು ಪ್ರಸಿದ್ಧಿಯನ್ನು ಪಡೆಯುವುದರ ಜೊತೆಗೆ ಕಾರಣಿಕ ಕ್ಷೇತ್ರವಾಗಿ ಬಿಂಬಿತಗೊಂಡಿದೆ. ಶ್ರೀ ಕ್ಷೇತ್ರದ ಸ್ಥಾಪಕ ಮೊಕ್ತೇಸರ, ವಂಶಸ್ಥರಾದ ಜಯರಾಜ ಶ್ರೀಧರ ಶೆಟ್ಟಿ ಕಲ್ಲಮುಂಡ್ಕೂರು ಹರಿಯಾಳಗುತ್ತು, ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ, ಮೊಕ್ತೇಸರ ಜಯಪಾಲಿ ಅಶೋಕ್‌ ಶೆಟ್ಟಿ ದಂಪತಿಗಳ ಮಾರ್ಗದರ್ಶನದಲ್ಲಿ ಮಂದಿರವು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಶ್ರೀ ಕ್ಷೇತ್ರದಲ್ಲಿ ಮಹಿಷ ಮರ್ದಿನಿ, ಗಣಪತಿ, ನಾಗದೇವರು, ವಂಶದ ದೈವ ಕೊಡಮಣಿತ್ತಾಯ ಮೊದಲಾದ ದೈವ-ದೇವರುಗಳ ಸೇವೆಗಳು ದಿನಂಪ್ರತಿ ನಡೆಯುತ್ತಿದೆ. ದೇವಸ್ಥಾನದ ಅರ್ಚಕ ವೃಂದ, ಆಡಳಿತ ಮಂಡಳಿ ಮತ್ತು ಮಹಿಷ ಮರ್ದಿನಿ ಭಜನ ಮಂಡಳಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ. 

ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next