ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ವ್ಯಾಪ್ತಿಯ ರೈತರಿಗೆ ಪ್ರತ್ಯಕ್ಷ- ಪರೋಕ್ಷವಾಗಿ ನೆರವಾಗಲು ರಾಜ್ಯ ಸರಕಾರ ತನ್ನ ಬಜೆಟ್‌ನಲ್ಲಿ ಕೋಟ್ಯಂತರ ರೂ.ಗಳನ್ನು ಮೀಸಲಿಡುತ್ತದೆ. ಅಧಿಕಾರಿಗಳು- ಜನಪ್ರತಿನಿಧಿಗಳ ನಿರ್ಲಕ್ಷ್ಯದ ಫಲವಾಗಿ ಕಳೆದ 6 ವರ್ಷಗಳಿಂದ ಕ್ರಿಯಾಯೋಜನೆ ಇಲ್ಲದೇ ಅನುದಾನ ವಾಪಸ್ ಹೋಗುತ್ತಿದೆ.
2020-21 ನೇ ಸಾಲಿನಲ್ಲಿ ಕಾಡಾ ಪ್ರದೇಶದ ವ್ಯಾಪ್ತಿಯಲ್ಲಿ ಖರ್ಚು ಮಾಡಲು ರಾಜ್ಯ ಸರಕಾರ 28 ಕೋಟಿ ರೂ.ಗಳನ್ನು ಮೀಸಲಿರಿಸಿದ್ದರೂ ಅದನ್ನು ಖರ್ಚು ಮಾಡದೇ ನಿರ್ಲಕ್ಷé ವಹಿಸಿದ್ದರಿಂದ ಮಾರ್ಚ್ 31 ನಂತರ ಈ ಹಣವನ್ನು ಸರಕಾರ ವಾಪಸ್ ಪಡೆಯಲಿದೆ. ತುಂಗಭದ್ರಾ ಕಾಡಾ ವ್ಯಾಪ್ತಿಯ ರಾಯಚೂರು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈತರಿಗೆ ಮತ್ತು ಪರೋಕ್ಷವಾಗಿ ಕೃಷಿಗೆ ನೆರವಾಗಲು ಸರಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುತ್ತದೆ.
ಈ ಹಣವನ್ನು ಕಾಡಾ ಅ ಧಿಕಾರಿಗಳು ಕ್ರಿಯಾಯೋಜನೆ ಸಿದ್ಧ ಮಾಡಿ ಹಣ ಖರ್ಚು ಮಾಡಬೇಕಾಗುತ್ತದೆ. ಪ್ರಸಕ್ತ ವರ್ಷ ಸರಕಾರ 28 ಕೋಟಿ ರೂ.ಗಳನ್ನು ತುಂಗಭದ್ರಾ ಕಾಡಾಗೆ ಮಂಜೂರು ಮಾಡಿತ್ತು. ಸಿಬ್ಬಂದಿ ಕೊರತೆ ನೆಪದಲ್ಲಿ ಇಲ್ಲಿಯ ಆಡಳಿತಾಧಿಕಾರಿಗಳು ಕ್ರಿಯಾ ಯೋಜನೆ ತಯಾರು ಮಾಡದೇ ಇರುವ ಕಾರಣ ಹಣ ಮರಳಿ ಹೋಗುತ್ತಿದೆ.
ಈ ಕುರಿತು ಅಚ್ಚುಕಟ್ಟು ವ್ಯಾಪ್ತಿಯ ಸಂಸದರು ಶಾಸಕರು-ಸಚಿವರು-ವಿಧಾನ ಪರಿಷತ್ ಸದಸ್ಯರಿಗೆ ಮಾಹಿತಿ ಇದ್ದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಪ್ರಕ್ರಿಯೆ ಕಳೆದ ಆರು ವರ್ಷಗಳಿಂದ ನಡೆಯುತ್ತಿದ್ದರೂ ಈ ಭಾಗದ ರೈತರು ನೀರು ಬಳಕೆದಾರರ ಸಂಘದವರು ಚಕಾರವೆತ್ತುತ್ತಿಲ್ಲ. ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಹೊಲ ಗದ್ದೆಗಳಿಗೆ ಹೋಗಲು ರಸ್ತೆ, ಗೋಡೌನ್, ನೀರು ಬಳಕೆದಾರರ ಸಹಕಾರಿ ಸಂಘದ ಕಟ್ಟಡ ನಿರ್ಮಾಣ ರಿಪೇರಿ, ಬೆಳೆ ಹೊಕ್ಕಲು ಕಣ, ಉಪಕಾಲುವೆಗಳ ಜಂಗಲ್ ಕಟಿಂಗ್, ಸಮಗ್ರ ಬೆಳೆ ಪದ್ಧತಿ ವೈಜ್ಞಾನಿಕ ಕೃಷಿ ಮಾಡಲು ರೈತರಿಗೆ ತರಬೇತಿ ಮತ್ತು ಸವಳು ಮತ್ತು ಬರಡು ಭೂಮಿಯನ್ನು ಫಲವತ್ತತೆ ಮಾಡುವ ಯೋಜನೆ ಮತ್ತು ಎಸ್ಸಿ-ಎಸ್ಟಿ ಕೆಟಗರಿ ಒಂದರಲ್ಲಿ ಬರುವ ರೈತರಿಗೆ ಸಾಮೂಹಿಕ ಪಂಪ್‌ಸೆಟ್ ಯೋಜನೆ ಮಾಡಿಕೊಳ್ಳಲು ಹಣ ನೀಡಲು ಕಾಡಾ ಯೋಜನೆಯಲ್ಲಿ ಅವಕಾಶವಿದೆ.
ರಾಜ್ಯ ಸರಕಾರ ಕೊಟ್ಟ ಹಣವನ್ನು ಪ್ರಸಕ್ತ ಹಣಕಾಸು ಯೋಜನೆಯಲ್ಲಿ ಖರ್ಚು ಮಾಡದಿದ್ದರೆ ಪ್ರತಿ ವರ್ಷ ಶೇ.25 ಅನುದಾನ ಕಡಿತವಾಗುತ್ತದೆ. ಕಳೆದ ವರ್ಷ 33 ಕೋಟಿ ರೂ. ಹಣ ಸರಕಾರಕ್ಕೆ ವಾಪಸ್ ಹೋಗಿದೆ. ಪ್ರಸಕ್ತ ಸಾಲಿನಲ್ಲಿ 7 ಕೋಟಿ ರೂ. ಕಡಿತವಾಗಿ 28 ಕೋಟಿ ರೂ. ಹಣ ತುಂಗಭದ್ರಾ ಕಾಡಾ ಗೆ ಮಂಜೂರಿಯಾಗಿದ್ದರೂ ಅಧಿ ಕಾರಿಗಳು ಸೂಕ್ತ ಕ್ರಿಯಾ ಯೋಜನೆ ಮಾಡಿ ಹಣ ಹಂಚಿಕೆ ಮಾಡದೇ ಇರುವುದರಿಂದ ಪುನಃ ಅನುದಾನ ವಾಪಸ್ ಹೋಗುತ್ತಿದೆ. ಸಿಬ್ಬಂದಿ ಕೊರತೆ: ತುಂಗಭದ್ರಾ ಕಾಡಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು 291 ಜನ ಅ ಧಿಕಾರಗಳು ಸೇರಿ ಸಿಬ್ಬಂದಿ ವರ್ಗದವರ ಅವಶ್ಯವಿದ್ದು, ಕಳೆದ 10 ವರ್ಷಗಳಿಂದ 98 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ.
ಅಚ್ಚುಕಟ್ಟು ವ್ಯಾಪ್ತಿ ದೊಡ್ಡದಿರುವುದರಿಂದ ಕೇವಲ 98 ಜನರಿಂದ ಕಾರ್ಯ ಮಾಡಲು ಆಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಾಜ್ಯ ಸರಕಾರ ಕಳೆದ ಹತ್ತು ವರ್ಷಗಳಿಂದ ತುಂಗಭದ್ರಾ ಕಾಡಾ ಕಚೇರಿಯ ಆಡಳಿತಾ ಧಿಕಾರಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುವ ಆಡಳಿತಾ ಧಿಕಾರಿಗಳು ನಿವೃತ್ತಿಗೆ 6 ತಿಂಗಳು ಅವಧಿ ಇರುತ್ತದೆ. 6 ತಿಂಗಳ ಅವ ಧಿ ಇರುವ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಹಣಕಾಸು ಜವಾಬ್ದಾರಿ ತೆಗೆದುಕೊಳ್ಳಲು ಹಿಂದೇಟು ಹಾಕುವುದು ಸಹಜವಾಗಿದೆ. ಪ್ರಸ್ತುತ ಇರುವ ಆಡಳಿತಾಧಿ ಕಾರಿ ಸಿಬ್ಬಂದಿ ಹಾಗೂ ಕ್ರಿಯಾ ಯೋಜನೆ ನೆಪದಲ್ಲಿ 28 ಕೋಟಿ ರೂ. ಹಣ ವಾಪಸ್ ಹೋಗಲು ಕಾರಣರಾಗಿದ್ದಾರೆ ಎನ್ನಲಾಗುತ್ತಿದೆ.