ನವದೆಹಲಿ:18 ವರ್ಷಕ್ಕಿಂತ ಮೇಲ್ಪಟ್ಟವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರು ಬುಧವಾರ(ಏಪ್ರಿಲ್ 28) ಸಂಜೆ 4ಗಂಟೆಯಿಂದ ಕೋ ವಿನ್ ಮೂಲಕ ಹೆಸರು ನೋಂದಣಿ ಮಾಡಲು ಆರಂಭಿಸಿದ್ದು, ಕೋ ವಿನ್ ಸೈಟ್ ಒಂದು ನಿಮಿಷಕ್ಕೆ ಬರೋಬ್ಬರಿ 27 ಲಕ್ಷ ಹಿಟ್ಸ್ ಬಂದಿರುವುದಾಗಿ ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಆಕ್ಸಿಜನ್‍ಗಾಗಿ ಹಾಹಾಕಾರ: 5 ವರ್ಷಗಳ ಹಿಂದೆ ಪ್ರಾಣೇಶ್ ಹೇಳಿದ್ದ ಮಾತು ಇಂದು ನಿಜವಾಯ್ತು
ರಾಜ್ಯ ಸರಕಾರ ನಿಗದಿಪಡಿಸಿರುವ ಸ್ಲಾಟ್ಸ್ ಆಧಾರದ ಮೇಲೆ ಖಾಸಗಿ ಮತ್ತು ಸರಕಾರಿ ಕೇಂದ್ರಗಳಲ್ಲಿ ಅಪಾಯಿಂಟ್ ಮೆಂಟ್ಸ್ ಲಭ್ಯವಾಗಲಿದೆ ಎಂದು ವರದಿ ವಿವರಿಸಿದೆ. ಒಂದು ವೇಳೆ ಲಸಿಕೆ ಹಾಕಿಸಿಕೊಳ್ಳಲು ಅಪಾಯಿಂಟ್ ಮೆಂಟ್ ದೊರೆಯದಿದ್ದರೆ ಸ್ವಲ್ಪ ಸಮಯದ ನಂತರ ಮತ್ತೆ ಚೆಕ್ ಮಾಡಿ. ನೀವು ತಾಳ್ಮೆಯಿಂದ ಇರುವಂತೆ ಮನವಿ ಮಾಡಿಕೊಳ್ಳುವುದಾಗಿ ಸರಕಾರದ ಮೂಲಗಳು ತಿಳಿಸಿವೆ.
ಮೇ 1ರಿಂದ ದೇಶಾದ್ಯಂತ ಮೂರನೇ ಹಂತದ ಲಸಿಕೆ ಅಭಿಯಾನದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರಕಾರ ತಿಳಿಸಿತ್ತು. ಇದಕ್ಕಾಗಿ ಏಪ್ರಿಲ್ 28ರಿಂದ ಲಸಿಕೆ ಪಡೆಯಲು ಹೆಸರು ನೋಂದಾಯಿಸುವಂತೆ ಸೂಚಿಸಿತ್ತು.
ಇಂದು 4ಗಂಟೆಗೆ ನಿಗದಿಯಂತೆ ಕೋ ವಿನ್ ಪೋರ್ಟಲ್ ಲಾಗಿನ್ ಆಗಿ ಹೆಸರು ನೋಂದಣಿ ಮಾಡುವ ಸಂದರ್ಭದಲ್ಲಿ ಹಲವು ಮಂದಿಗೆ ಸರ್ವರ್ ಕ್ರ್ಯಾಶ್ ಆಗಿ ಸಮಸ್ಯೆ ತಲೆದೋರಿತ್ತು. ನಂತರ ಸರ್ವರ್ ಸಮಸ್ಯೆ ಬಗೆಹರಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಮುಂದುವರಿಸಿ ಎಂದು ಕೋ ವಿನ್ ತಿಳಿಸಿತ್ತು.