Advertisement
ಉಳಿದ 27 ಪಂ.ಗಳ ಪೈಕಿ ಆರು ಪಂಚಾಯತ್‌ಗಳ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದರೆ, ಇನ್ನುಳಿದ 21 ಗ್ರಾ.ಪಂ.ಗಳು ಇನ್ನೂ ಸ್ವಂತ ಕಟ್ಟಡಕ್ಕಾಗಿ ಪರದಾಡುತ್ತಿವೆ. ಇನ್ನೊಂದೆಡೆ ನೆರೆಯ ಉಡುಪಿ ಜಿಲ್ಲೆಯ ಕಥೆಯೂ ಇದೇ ಆಗಿದೆ. ಈ ಜಿಲ್ಲೆಯಲ್ಲಿ ಒಟ್ಟು 15 ಹೊಸ ಗ್ರಾಮ ಪಂಚಾಯತ್‌ಗಳು ರಚನೆಯಾಗಿದ್ದು, ಇಲ್ಲಿವರೆಗೆ ಯಾವುದೇ ಪಂಚಾಯತ್‌ಗೂ ಸ್ವಂತ ಕಟ್ಟಡ ಹೊಂದುವ ಭಾಗ್ಯ ಬಂದಿಲ್ಲ ಎನ್ನುವುದು ಗಮನಾರ್ಹ.
ಹೊಸದಾಗಿ ರಚನೆಗೊಂಡಿರುವ ಪ್ರತಿ ಗ್ರಾ.ಪಂ.ಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಸರಕಾರ ಒಟ್ಟು 20 ಲಕ್ಷ ರೂ. ಅನುದಾನ ನೀಡುತ್ತದೆ. ಅದರಲ್ಲಿ 10 ಲಕ್ಷ ರೂ.ಗಳನ್ನು ಈಗಾಗಲೇ ಬಹುತೇಕ ಎಲ್ಲ ಹೊಸ ಗ್ರಾ.ಪಂ.ಗಳಿಗೂ ಮಂಜೂರು ಮಾಡಲಾಗಿದೆ. ಉಳಿದಂತೆ, 18.22 ಲಕ್ಷ ರೂ.ವನ್ನು ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲಾ ಪಂಚಾಯತ್‌ಗಳ ಮೂಲಕ ನೀಡಲಾಗುತ್ತದೆ. ಹೊಸ ಕಟ್ಟಡಕ್ಕೆ ಹೆಚ್ಚುವರಿ ಹಣದ ಆವಶ್ಯಕತೆಯಿದ್ದರೆ ಗ್ರಾ.ಪಂ.ಗಳೇ ಭರಿಸಬೇಕಾಗುತ್ತದೆ.
Related Articles
ಹೊಸ ಗ್ರಾ.ಪಂ.ಗಳ ಪೈಕಿ ಸ್ವಂತ ಕಟ್ಟಡ ಹೊಂದಿರುವ ಎರಡೂ ಗ್ರಾ.ಪಂ.ಗಳು ಬಂಟ್ವಾಳ ತಾಲೂಕಿನಲ್ಲಿವೆೆ. ಇಲ್ಲಿನ ಅಮ್ಮುಂಜೆ ಹಾಗೂ ಅರಳ ಗ್ರಾಮ ಪಂಚಾಯತ್‌ಗಳು ಸ್ವಂತ ಕಟ್ಟಡ ನಿರ್ಮಿಸುವಲ್ಲಿ ಯಶಸ್ವಿಯಾಗಿವೆ. ಉಳಿದಂತೆ, ತಾಲೂಕಿನಲ್ಲಿ ಬರಿಮಾರು, ಬೋಳಂತೂರು, ಇರ್ವತ್ತೂರು, ಕಳ್ಳಿಗೆ, ಮಣಿನಾಲ್ಕೂರು, ಮಾಣಿಲ, ನೆಟ್ಲಮುಟ್ನೂರು, ಪೆರಾಜೆ, ಸಜಿಪಪಡು, ಸಾಲೆತ್ತೂರು ಹೀಗೆ ಒಟ್ಟು 10 ಹೊಸ ಪಂಚಾಯತ್‌ಗಳಿಗೆ ಇನ್ನೂ ಸ್ವಂತ ಕಟ್ಟಡ ಹೊಂದುವ ಕನಸು ಈಡೇರಿಲ್ಲ.
Advertisement
ಬೆಳ್ತಂಗಡಿ ತಾಲೂಕಿನಲ್ಲಿ ಕಡಿರುದ್ಯಾ ವರ, ಕಳಂಜ, ಪಿಲ್ಯ, ನಾವೂರು, ತೆಕ್ಕಾರು ಹೀಗೆ ಒಟ್ಟು ಐದು ಗ್ರಾ.ಪಂ.ಗಳು ರಚನೆ ಗೊಂಡಿದ್ದು, ಯಾವ ಗ್ರಾ.ಪಂ.ಗಳಕಟ್ಟಡ ಕಾಮಗಾರಿಯೂ ಪ್ರಾರಂಭ ಗೊಂಡಿಲ್ಲ. ಸುಳ್ಯ ತಾಲೂಕಿನಲ್ಲಿ ರಚನೆ ಗೊಂಡಿರುವ ಏಕ ಮಾತ್ರ ಹೊಸ ಗ್ರಾ.ಪಂ. ಪೆರುವಾಜೆಯ ಹೊಸ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು, ಮಂಗಳೂರು ತಾಲೂಕಿನಲ್ಲಿ ಅತಿಕಾರಿಬೆಟ್ಟ, ಬಡಎಡಪದವು, ಇರು ವೈಲು, ಕೊಂಡೆಮೂಲ (ಕಟೀಲು), ಮಲ್ಲೂರು, ಮುತ್ತೂರು, ವಾಲ್ವಾಡಿ ಹೀಗೆ ಒಟ್ಟು 7 ಹೊಸ ಗ್ರಾ.ಪಂ.ಗಳು ರಚನೆಗೊಂಡಿದ್ದು, ಆ ಪೈಕಿ ಅತಿಕಾರಿಬೆಟ್ಟ ಗ್ರಾ.ಪಂ.ನ ಕಟ್ಟಡ ಕಾಮಗಾರಿಮಾತ್ರ ಪ್ರಗತಿಯಲ್ಲಿದೆ. ಪುತ್ತೂರು ತಾಲೂಕಿನಲ್ಲಿಯೂ ಕೊಣಾಜೆ, ಕೆಯ್ಯೂರು, ಕುಡಿಪ್ಪಾಡಿ ಹೀಗೆ 4 ಹೊಸ ಗ್ರಾ.ಪಂ.ಗಳು ಮಂಜೂರಾ ಗಿದ್ದು, ಕುಡಿಪ್ಪಾಡಿ ಗ್ರಾ.ಪಂ.ನ ಕಟ್ಟಡ ಕಾಮಗಾರಿ ಮಾತ್ರ ಪ್ರಾರಂಭಗೊಂಡಿದೆ. ಜಿಲ್ಲೆಯಲ್ಲಿ ಸ್ವಂತ ಕಟ್ಟಡ ಹೊಂದಿರದ ಹೊಸ ಗ್ರಾ.ಪಂ.ಗಳು ಸದ್ಯಕ್ಕೆ ಸರಕಾರಿ ಶಾಲಾ ಕಟ್ಟಡ, ಸೇವಾ ಕೇಂದ್ರ ಸೇರಿದಂತೆ ಬೇರೆ ಕಡೆ ಕಾರ್ಯಾಚರಿಸುತ್ತಿವೆ. ನಿವೇಶನದ ಕಾರ್ಯ ಪ್ರಗತಿಯಲ್ಲಿದೆ
“ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಒಟ್ಟು 29 ಗ್ರಾಮ ಪಂಚಾಯತ್‌ಗಳ ಪೈಕಿ ಎರಡು ಗ್ರಾ.ಪಂ.ಗಳು ಈಗ ತನ್ನ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಬಹುತೇಕ ಗ್ರಾ.ಪಂ.ಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇನ್ನು ಕೆಲವೊಂದು ಗ್ರಾ.ಪಂ.ಗಳ ನಿವೇಶನ ಗುರುತಿಸುವಿಕೆ ಕಾರ್ಯ ಕೂಡ ನಡೆಯುತ್ತಿದೆ.’ ಎನ್.ಆರ್.ಉಮೇಶ್, ಉಪಕಾರ್ಯದರ್ಶಿ, ದ.ಕ.ಜಿ.ಪಂ. ಕಿರಣ್ ಸರಪಾಡಿ