Advertisement

Politics: ಉದಯನಿಧಿ ವಿರುದ್ಧ ಕ್ರಮಕ್ಕೆ 262 ಗಣ್ಯರ ಆಗ್ರಹ

10:16 PM Sep 05, 2023 | Team Udayavani |

ನವದೆಹಲಿ: “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿ’ ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಹೇಳಿಕೆಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿಗೆ ದೇಶದ 262 ಗಣ್ಯರು ಪತ್ರ ಬರೆದಿದ್ದಾರೆ.

Advertisement

ಈ ಪತ್ರ ಬರೆದವರಲ್ಲಿ ಹೈಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳೂ ಸೇರಿದ್ದಾರೆ. ಉದಯನಿದಿ ಅವರ ಹೇಳಿಕೆಯು ದ್ವೇಷ ಭಾಷಣವಾಗಿದ್ದು, ಅದು ಕೋಮು ಸಾಮರಸ್ಯವನ್ನು ಹದಗೆಡಿಸುವಂಥ ಮತ್ತು ಜನಾಂಗೀಯ ಹಿಂಸಾಚಾರಕ್ಕೆ ಪ್ರೇರೇಪಿಸುವಂಥ ಹೇಳಿಕೆಯಾಗಿದೆ. ಅವರ ಭಾಷಣವು ಭಾರತದ ಜನಸಾಮಾನ್ಯರ ಮನಸ್ಸುಗಳ ಮೇಲೆ ವಿಶೇಷವಾಗಿ ಸನಾತನ ಧರ್ಮವನ್ನು ನಂಬಿಕೊಂಡು ಬಂದವರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಭಾರತವನ್ನು ಜಾತ್ಯತೀತ ರಾಷ್ಟ್ರ ಎಂದು ಕರೆಯುವ ದೇಶದ ಸಂವಿಧಾನದ ಮೂಲ ಆಶಯಕ್ಕೇ ಉದಯನಿಧಿ ಅವರ ಹೇಳಿಕೆ ಕೊಡಲಿಯೇಟು ನೀಡಿದೆ. ಇಂಥ ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಅವರ ವಿರುದ್ಧ ತಮಿಳುನಾಡು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ, ಅದನ್ನು ಸಮರ್ಥಿಸಿಕೊಂಡಿರುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಇಂಥ ಪ್ರಕರಣದಲ್ಲಿ ಔಪಚಾರಿಕ ದೂರು ಸಲ್ಲಿಕೆ ಆಗುವವರೆಗೆ ಕಾಯದೇ ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದೆಯೇ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಹೀಗಾಗಿ, ಉದಯನಿಧಿ ವಿವಾದಿತ ಹೇಳಿಕೆಯನ್ನು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ದೆಹಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಸ್‌.ಎನ್‌.ಧಿಂಗ್ರಾ, ಕೇಂದ್ರದ ಮಾಜಿ ಶಿಪ್ಪಿಂಗ್‌ ಕಾರ್ಯದರ್ಶಿ ಗೋಪಾಲ ಕೃಷ್ಣ ಸೇರಿದಂತೆ 14 ನಿವೃತ್ತ ಜಡ್ಜ್ಗಳು, 130 ಅಧಿಕಾರಿಗಳು(20 ರಾಯಭಾರಿಗಳು) ಮತ್ತು 118 ಸೇನಾಧಿಕಾರಿಗಳು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ಹಿಟ್ಲರ್‌ ಇದ್ದಂತೆ:
ಇದೇ ವೇಳೆ, ಉದಯನಿಧಿ ವಿರುದ್ಧ ರಾಜಕೀಯ ವಲಯದಲ್ಲಿ ಆಕ್ರೋಶ ಮುಂದುವರಿದಿದೆ. “ಯಹೂದಿಗಳನ್ನು ಸರ್ವನಾಶ ಮಾಡಲೆಂದು ಹಿಟ್ಲರ್‌ ಕರೆ ನೀಡಿದಂತೆ, ಇದೀಗ ಭಾರತದಲ್ಲಿ ಸನಾತನ ಧರ್ಮವನ್ನು ಅನುಸರಿಸುತ್ತಿರುವ ಶೇ.80ರಷ್ಟು ಜನರ ನರಮೇಧಕ್ಕೆ ಉದಯ್‌ ಸ್ಟಾಲಿನ್‌ ಈ ಮೂಲಕ ಕರೆ ನೀಡಿದ್ದಾರೆ ಎಂದು ಬಿಜೆಪಿ ಟ್ವೀಟ್‌ ಮಾಡಿ ಟೀಕಿಸಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೇಳಿಕೆ ಆಕ್ಷೇಪ ಮಾಡಿ, ನಾನೂ ಸನಾತನ ಧರ್ಮದವನು. ನಾವು ಒಬ್ಬರು ಮತ್ತೂಬ್ಬರ ಧರ್ಮವನ್ನು ಗೌರವಿಸುವುದು ಕಲಿಯಬೇಕು ಎಂದಿದ್ದಾರೆ. ತಮಿಳುನಾಡು ವಿಪಕ್ಷ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಕೂಡ ಆಕ್ಷೇಪಿಸಿ, ಡಿಎಂಕೆ ಸರ್ಕಾರವು ಆಡಳಿತ ವೈಫ‌ಲ್ಯವನ್ನು ಮುಚ್ಚಿಹಾಕಲು ಇಂಥ ನಾಟಕ ಸೃಷ್ಟಿಸಲಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next