ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ “ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯ 4ನೇ ಹಂತದಲ್ಲಿ ಒಟ್ಟು 20.75 ಕಿ.ಮೀ. ರಸ್ತೆ ಅಭಿವೃದ್ಧಿಗೆ 26 ಕೋ. ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕ ಮೊದಿನ್ ಬಾವಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಲೋಕೋಪಯೋಗಿ ಇಲಾಖೆ ವತಿಯಿಂದ 23.02 ಕಿ.ಮೀ. ರಸ್ತೆ ಅಭಿವೃದ್ಧಿಯ 8 ಕಾಮಗಾರಿಗೆ 15 ಕೋಟಿ, ಇದೇ ಇಲಾಖೆಯ ಯೋಜನೇತರ ಶೀರ್ಷಿಕೆಯಡಿ ರಸ್ತೆ ಅಭಿವೃದ್ಧಿಯ 7 ಕಾಮಗಾರಿಗೆ 62 ಲಕ್ಷ ರೂ., ಆಸ್ಕರ್ ಫೆರ್ನಾಂಡಿಸ್ ಅವರ ರಾಜ್ಯಸಭಾ ನಿಧಿಯಿಂದ 1 ಕೋಟಿ ರೂ., ಮುಖ್ಯಮಂತ್ರಿ ಗ್ರಾಮೀಣ ಅಭಿವೃದ್ಧಿ ಯೋಜನೆ ಯಲ್ಲಿ 10 ಕಾಮಗಾರಿಗೆ 76 ಲಕ್ಷ ರೂ. ಮಂಜೂರಾಗಿದೆ. ಶೀಘ್ರವೇ ಕಾಮಗಾರಿ ನಡೆಯಲಿದೆ ಎಂದರು.
ಪೊಳಲಿ ದ್ವಾರದಿಂದ ಅಡೂxರು ಸಂಪರ್ಕಿಸುವ ರಸ್ತೆಗೆ 2 ಕೋ. ರೂ. ವೆಚ್ಚದಲ್ಲಿ ವಿಸ್ತರಣೆ ಕಾಮಗಾರಿ ನಡೆಯಲಿದ್ದು, ಬಜಪೆಯಿಂದ ಕೈಕಂಬ ಪೇಟೆ ಸಂಪರ್ಕದ ರಸ್ತೆಯನ್ನು 10 ಕೋಟಿ ರೂ.ಯಲ್ಲಿ ಅಭಿವೃದ್ಧಿಗೊಳಿಸ ಲಾಗುವುದು. ಕೈಕಂಬದಿಂದ ಕೆಂಜಾರು ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಯನ್ನು 20 ಕೋ. ರೂ.ಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇನ್ನು 2 ಕೋ. ರೂ. ಮೊತ್ತ ವಿನಿಯೋಗಿಸಿದರೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಗ್ಯಾಸ್ ಬೆಲೆ ಏರಿಕೆ, ನೋಟು ಅಪಮೌಲ್ಯ ಮೊದಲಾದ ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರೋಧಿಸಿ ಉತ್ತರ ಕಾಂಗ್ರೆಸ್ ವತಿಯಿಂದ ಫೆ. 23ರಂದು ಬೆಳಗ್ಗೆ 11 ಗಂಟೆಗೆ ಗುರುಪುರ-ಕೈಕಂಬದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಬಾವಾ ಹೇಳಿದರು.
ಕೇರಳ ಸಿಎಂ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸುವ ಸಂದರ್ಭ ಪೊಲೀಸ್ ಇಲಾಖೆ ಪೂರ್ಣ ಭದ್ರತೆ ನೀಡಲಿದೆ. ಪಿಣರಾಯಿ ಒಂದು ರಾಜ್ಯದ ಮುಖ್ಯಮಂತ್ರಿ. ಅವರ ಆಗಮನ ವೇಳೆ ಸೂಕ್ತ ರಕ್ಷಣೆ, ಭದ್ರತೆ ನೀಡುವುದು ನಮ್ಮ ಕರ್ತವ್ಯ ಎಂದರು.
ಈ ಸಂದರ್ಭ ಗುರುಪುರ ಬ್ಲಾಕ್ ಅಧ್ಯಕ್ಷ ಪೃಥ್ವಿರಾಜ್, ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಪದ್ಮನಾಭ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಸದಸ್ಯ ಭಾಷಾ, ಮಹಿಳಾ ಕಾಂಗ್ರೆಸ್ ಸುರತ್ಕಲ್ ವಿಭಾಗದ ಅಧ್ಯಕ್ಷೆ ಶಕುಂತಳಾ ಕಾಮತ್, ಜಿ.ಪಂ. ಮಾಜಿ ಸದಸ್ಯ ಮಿಲ್ವಿನ್ ಡಿ’ಸೋಜಾ, ಸುರತ್ಕಲ್ ವಿಭಾಗದ ಉಪಾಧ್ಯಕ್ಷ ಅಬ್ದುಲ್ ಜಲೀಲ್, ಜಾನ್, ಡಿ.ಎಚ್. ಶ್ರೀಧರ್, ಬಿ.ಎ. ಇಲಿಯಾಸ್, ಕೃಷ್ಣ ಅಮೀನ್, ತಾ.ಪಂಚಾಯತ್ ಸದಸ್ಯ ಯೂಸುಫ್ ಮೊದಲಾದವರು ಉಪಸ್ಥಿತರಿದ್ದರು.