Advertisement

ಕಳೆದೊಂದು ವರ್ಷದಲ್ಲಿ  250 ಹೆಕ್ಟೇರ್‌ ಭತ್ತ  ಬೇಸಾಯ ಕುಸಿತ

02:25 PM Dec 23, 2017 | |

ಇಂದು ವಿಶ್ವ ರೈತ ದಿನಾಚರಣೆ. ವಿಶ್ವ ದಿನಗಳು ಆಚರಣೆಗಷ್ಟೇ ಸೀಮಿತ ಆಗುತ್ತಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಆಚರಣೆ ಬಳಿಕ ಒಂದಷ್ಟು ಬೆಳವಣಿಗೆ, ಬದಲಾವಣೆ ಆದಲ್ಲಿ ಮಾತ್ರ ಆಚರಣೆಗೆ ಮಹತ್ವ. ಈ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನ ಭತ್ತ ಬೇಸಾಯದ ಸ್ಥಿತಿ ಹೇಗಿದೆ ಎಂದು ನೋಡಲಾಯಿತು. ನಿರೀಕ್ಷೆಯಿಂದ ವರ್ಷದಿಂದ ವರ್ಷಕ್ಕೆ ಭತ್ತ ಬೇಸಾಯ ಇಳಿಕೆ ಆಗುತ್ತಿದೆ. ಆಚರಣೆ ಹೆಸರಿಗೆ ಮಾತ್ರ ನಡೆಯುತ್ತಿದೆ.

Advertisement

ಪುತ್ತೂರು: ವರ್ಷದಿಂದ ವರ್ಷಕ್ಕೆ ಭತ್ತ ಬೇಸಾಯ ಕುಸಿಯುತ್ತಿದೆ. ಯಂತ್ರ ಗದ್ದೆಗೆ ಇಳಿದರೂ, ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 250 ಹೆಕ್ಟೇರ್‌ನಷ್ಟು ಗದ್ದೆ ಬೇಸಾಯ ಕುಸಿತ ಕಂಡಿದೆ.

ಪುತ್ತೂರು, ಸುಳ್ಯ ಕೃಷಿ ಪ್ರಧಾನ ಪ್ರದೇಶ. ಯಾವುದೇ ಕೃಷಿ ಚಟುವಟಿಕೆ ನಡೆಯುವುದಿದ್ದರೂ ಪುತ್ತೂರೇ ಕೇಂದ್ರ. ಆದರೆ ಭತ್ತದ ವಿಷಯದಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ. ಜಿಲ್ಲೆಯ ಭತ್ತ ಬೇಸಾಯದಲ್ಲಿ ಪುತ್ತೂರು ತಾಲೂಕಿಗೆ ನಾಲ್ಕನೇ ಸ್ಥಾನ. ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಆಗಿ ಬಳಿಕದ ಸ್ಥಾನ ಪುತ್ತೂರಿಗೆ. ಸುಳ್ಯಕ್ಕೆ ಅನಂತರದ ಸ್ಥಾನ.

ಭತ್ತದ ಜಾಗವನ್ನು ತೋಟಗಾರಿಕಾ ಬೆಳೆಗಳು ಆಕ್ರಮಿಸಿಕೊಳ್ಳುತ್ತಿವೆ. ವಾಣಿಜ್ಯ ಬೆಳೆಗಳ ಒಲವು ಹೆಚ್ಚಾದಂತೆ ಭತ್ತದ ಉಳಿವು ಕಷ್ಟವಾಗುತ್ತಿದೆ. ಜೀವನ ನಿರ್ವಹಣೆಗೆ ಕೃಷಿಯನ್ನೇ ನಂಬಿಕೊಂಡಿರುವ ಮಂದಿ ವಾಣಿಜ್ಯ ಬೆಳೆಗಳ ಕಡೆಗೆ ಹೊರಳುವುದು ಸಾಮಾನ್ಯವೇ. ಆದರೆ ವಾಣಿಜ್ಯ ಬೆಳೆಗಳು ಆರ್ಥಿಕ ಸಮೃದ್ಧಿ ನೀಡಬಲ್ಲವೇ ಹೊರತು; ಆಹಾರವಲ್ಲ. ಈ ಹಿನ್ನೆಲೆಯಲ್ಲಿ ಭತ್ತ ಬೇಸಾಯ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. 

ಆಮದು ಅನಿವಾರ್ಯ
ಭತ್ತದ ಜಾಗವನ್ನು ಅಡಿಕೆ, ಕರಿಮೆಣಸು, ಬಾಳೆ, ತೆಂಗು ಆಕ್ರಮಿಸಿಕೊಂಡಿವೆ. ಎರಡು ವರ್ಷಗಳ ಹಿಂದೆ ರಬ್ಬರ್‌ಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನವಿತ್ತು. ಆದರೆ ಈಗಿಲ್ಲ. ಪ್ರಮುಖ ಸ್ಥಾನದಲ್ಲಿದ್ದ ಭತ್ತ ಕೊನೆಯ ಸ್ಥಾನಕ್ಕೆ ಉರುಳುತ್ತಿದೆ. ಅನ್ನದ ಬಟ್ಟಲು ತುಂಬಲು ಆಮದು ಅನಿವಾರ್ಯ ಎನಿಸತೊಡಗಿದೆ.

Advertisement

ಇಲಾಖೆ ಕ್ರಮ
ಭತ್ತ ಬೇಸಾಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೃಷಿ ಇಲಾಖೆ ಕೆಲ ಕ್ರಮ ಕೈಗೊಂಡಿದೆ. ಆದರೂ ಇದು ರೈತರಿಗೆ
ತಲುಪಿದಂತೆ ಕಾಣುತ್ತಿಲ್ಲ.
ನೇರ ಸಬ್ಸಿಡಿ: ಯಂತ್ರದಿಂದ ನಾಟಿ ಮಾಡಿದರೆ 1 ಹೆಕ್ಟೇರ್‌ಗೆ 4 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತಿದೆ.

ವಿಮೆ: ಭತ್ತ ಬೆಳೆ ಹಾನಿಯಾದರೆ ವಿಮೆ ಇದೆ. ಆದರೆ ವಿಮೆಯನ್ನು ಹೆಚ್ಚಾಗಿ ವಾಣಿಜ್ಯ ಬೆಳೆಗಳಿಗೆ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ. ಕಡಿಮೆ ಅವಧಿಯ ಬೆಳೆಯಾದ ಭತ್ತಕ್ಕೆ ಇದರ ಮಾನ್ಯತೆ ಸಿಗುತ್ತಿಲ್ಲ.

ಪರಿಕರ ವಿತರಣೆ: ಸುಣ್ಣ, ಲಘು ಪೋಷಕಾಂಶಗಳಾದ   ಜ್ಹಿಂಕ್‌ ಸಲ್ಫಾಯ್ಡ್ , ಬೊರೆಕ್ಸನ್ನು ಇಲಾಖೆ ವತಿಯಿಂದ ನೀಡಲಾಗುತ್ತಿದೆ.

 ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next