ಮುಂಬಯಿ: 25 ಲಕ್ಷ ರೂ. ಲಂಚದ ಹಣದೊಂದಿಗೆ ಪರಾರಿಯಾಗಿರುವ ಆರೋ ಪದಲ್ಲಿ ಕೇಂದ್ರ ಜಿಎಸ್‌ಟಿಯ ಆ್ಯಂಟಿ ಎವಿಕ್ಷನ್ ವಿಭಾಗದ ಸೂಪರಿಂಟೆಂಡೆಂಟ್ ಧೀರೇಂದ್ರ ಕುಮಾರ್ ಮತ್ತು ಇತರ ಇಬ್ಬರ ವಿರುದ್ಧ ಕೇಂದ್ರ ತನಿಖಾ ದಳ(ಸಿಬಿಐ)ದ ಭ್ರಷ್ಟಾಚಾರ ವಿರೋಧಿ ವಿಭಾಗ ಶುಕ್ರವಾರ ಪ್ರಕರಣ ದಾಖಲಿಸಿದೆ.
ಮುಂಬಯಿ ನಿವಾಸಿಯಾಗಿರುವ ಧೀರೇಂದ್ರ ಕುಮಾರ್ ಚಿನ್ನ ಮಾರಾಟಗಾರನಿಂದ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ಅಮೃತ್‌ಲಾಲ್ ಶಂಕಾಲ ಮತ್ತು ಬಾಬನ್ ಇತರ ಇಬ್ಬರು ಆರೋಪಿಗಳಾಗಿದ್ದು, ಇವರು ಧೀರೇಂದ್ರ ಅವರಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮೂವರಿಗಾಗಿ ಸಿಬಿಐ ಹುಡುಕಾಟ ನಡೆಸುತ್ತಿದೆ.
ಆದರೆ ಮತ್ತೂಂದೆಡೆ ಇದು ಜಿಎಸ್‌ಟಿ ಮತ್ತು ಸಿಬಿಐ ಅಧಿಕಾರಿಗಳ ನಡುವಿನ ಜಗಳ ಎನ್ನಲಾಗಿದೆ.
ಎ.20ರಂದು ಚಿನ್ನ ಮಾರಾಟಗಾರ ಅರ್ಪಿತ್ ಜಗೆಟಿಯಾ ಅವರನ್ನು ಮುಂಬಯಿಯ ಕಲಾº ದೇವಿ ಪ್ರದೇಶದ ಸರ್ಫಾ ಬಜಾರ್‌ನಿಂದ ಧೀರೇಂದ್ರ ಅವರು ವಶಕ್ಕೆ ಪಡೆದಿದ್ದರು. ಅರ್ಪಿತ್ ಅವರು ಶ್ರೀ ಬುಲಿಯನ್ ಮತ್ತು ಇತರ ಕಂಪೆನಿಗಳಿಂದ ಚಿನ್ನ ಖರೀದಿ ಮತ್ತು ಮಾರಾಟದಲ್ಲಿ ತೊಡಗಿದ್ದರು. ವ್ಯವಹಾರದಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಜಿಎಸ್‌ಟಿಯಿಂದ ಅರ್ಪಿತ್ ವಿರುದ್ಧ ಪ್ರಕರಣ ದಾಖಲಾಗಿದೆ. ಅರ್ಪಿತ್ ಅವರನ್ನು ಧೀರೇಂದ್ರ ಕುಮಾರ್ ಅವರು ಸುಮಾರು 6-7 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಜೈಲಿಗೆ ಹೋಗು ವುದನ್ನು ತಪ್ಪಿಸಲು 1 ಕೋಟಿ ರೂ.ಗೆ ಬೇಡಿಕೆ ಇರಿಸಿದ್ದಾರೆ. ಈ ಬಗ್ಗೆ ಅರ್ಪಿತ್ ಅವರು ಅವರ ಸ್ನೇಹಿತ ಜಿತೇಂದ್ರ ಲುನಾವತ್‌ಗೆ ತಿಳಿಸಿದ್ದಾರೆ. ಜಿತೇಂದ್ರ ಅವರು ಧೀರೇಂದ್ರ ಅವರೊಂದಿಗೆ ಮಾತುಕತೆ ನಡೆಸಿ, ಅಂತಿಮವಾಗಿ 25 ಲಕ್ಷ ರೂ. ಲಂಚ ನೀಡಲು ಒಪ್ಪಿಸಿದ್ದಾರೆ. ಈ ಎಲ್ಲ ಫೋನ್ ಸಂಭಾಷಣೆಯನ್ನು ಜಿತೇಂದ್ರ ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಜಿತೇಂದ್ರ ಅವರು 25 ಲಕ್ಷ ರೂ.ಗಳನ್ನು ಧೀರೇಂದ್ರ ಅವರಿಗೆ ಕೊಡಲು ಬರುತ್ತಿದ್ದಾಗ, ಜಿಎಸ್‌ಟಿ ಕಚೇರಿ ಸಮೀಪ, ಬೈಕ್‌ನಲ್ಲಿ ಬಂದ ಇಬ್ಬರು ದುಡ್ಡು ಇರುವ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಎಲ್ಲ ಘಟನೆಗಳ ಬಗ್ಗೆ ಜಿತೇಂದ್ರ ಅವರು ಸಿಬಿಐಗೆ ದೂರು ನೀಡಿದ್ದಾರೆ. ಬೈಕ್‌ನಲ್ಲಿ ಬಂದ ಕಳ್ಳರನ್ನು ಅಮೃತಲಾಲ್ ಶಂಕಾಲ ಮತ್ತು ಬಾಬನ್ ಎಂದು ಸಿಸಿಟಿವಿ ಆಧಾರದಲ್ಲಿ ಗುರುತಿಸಲಾಗಿದೆ. ಈ ಇಬ್ಬರು ಧೀರೇಂದ್ರ ಅವರಿಗೆ ಪರಿಚಿತರು ಎನ್ನಲಾಗಿದೆ. ಮೂವ ರಿಗಾಗಿ ಸಿಬಿಐ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.