Advertisement

ಸುಡುಗಾಡು ಸಿದ್ಧರು,ಬುಡ್ಗ ಜಂಗಮರರಿಗೆ 25 ಮನೆಗಳು

03:45 AM Jul 08, 2017 | |

ಉಡುಪಿ: ಬಡಜನರ ಕಷ್ಟ-ಕಾರ್ಪಣ್ಯಕ್ಕೆ ಸ್ಪಂದಿಸುವ ಕೈಂಕರ್ಯದಲ್ಲಿ ತಮ್ಮನ್ನು ನಿರಂತರ ತೊಡಗಿಸಿಕೊಂಡ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ “ಹೊಸ ಬೆಳಕು-ಹೊಸ ಬದುಕು’ ಯೋಜನೆಯಡಿ ಸುಡುಗಾಡು ಸಿದ್ಧರು ಮತ್ತು ಬುಡ್ಗ ಜಂಗಮದವರ ಇಪ್ಪತ್ತೈದು ನಿರಾಶ್ರಿತ ಕುಟುಂಬಗಳಿಗೆ ಉಡುಪಿ ನಗರಸಭೆ ಮಾರ್ಗದರ್ಶನದೊಂದಿಗೆ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ಹಾಗೂ ವಿವಿಧ ಇಲಾಖೆಗಳ ಸಹಕಾರದ ಸಂಗಮದಿಂದ ಸುಸಜ್ಜಿತ ಮನೆಗಳನ್ನು ಕಟ್ಟಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

Advertisement

ಉದ್ಘಾಟನೆ
ತನ್ಮೂಲಕ ಸಚಿವರ “ವಿಷನ್‌ ಉಡುಪಿ-2015′ ಆಶಯದಂತೆ “ಸೂರು ಇಲ್ಲದವರಿಗೆ ಸೂರು’ ನೀಡುವ ಪ್ರಮುಖ ಯೋಜನೆಗೆ ಪುಷ್ಟಿ ದೊರಕಿದೆ. ಇದೀಗ ಕೊಡಂಕೂರು ಸಂಸ್ಕೃತ ವಿದ್ಯಾಪೀಠದ ಬಳಿಯಲ್ಲಿ ನಿರ್ಮಿಸಲಾದ “ಪ್ರಮೋದ್‌ ಮಧ್ವರಾಜ್‌ ಬಡಾವಣೆ’ಯ ಉದ್ಘಾಟನೆ ಸಮಾರಂಭ ಜು. 9ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ. 

ಹೊಸ ಯೋಜನೆ-ಯೋಚನೆ
ರಾಷ್ಟ್ರೀಯ ಹೆದ್ದಾರಿಯ ವಿಸ್ತೀರ್ಣ ಸಂದರ್ಭ ನಿರಾಶ್ರಿತರಾದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಜೋಪಡಿಗಳನ್ನು ಕಟ್ಟಿಕೊಂಡು ದುಸ್ತರ ಬದುಕು ಸಾಗಿಸುತ್ತಿರುವ ಸುಡುಗಾಡು ಸಿದ್ಧರು ಮತ್ತು ಬುಡ್ಗ ಜಂಗಮದವರ 25 ಕುಟುಂಬಗಳನ್ನು ಸ್ಥಳಾಂತರಿಸುವ, “ಸುಂದರ ಉಡುಪಿ’ಯ ನೈರ್ಮಲ್ಯತೆಗೆ ಹಾಗೂ ದುರ್ಬಲರಿಗೆ ಸಕಲ ಸೌಲಭ್ಯಗಳೊಂದಿಗೆ ಆಶ್ರಯ ನೀಡುವ ಸಂಕಲ್ಪದ ನೆಲೆಯಲ್ಲಿ ಶಾಸಕ ಪ್ರಮೋದ್‌ ಮಧ್ವರಾಜ್‌ ಅವರು ಹೊಸ ಯೋಜನೆ-ಯೋಚನೆ ನಡೆಸಿದರು.  ಸರಕಾರಿ ವಸತಿ ಜಾಗದ ಕೊರತೆ ಎದುರಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಸಕರು ನಿರಾಶ್ರಿತ ಸಂತ್ರಸ್ತರ ಮನವೊಲಿಸಿ ಕೊಡಂಕೂರಿನಲ್ಲಿ ಸುಮಾರು 55 ಸೆಂಟ್ಸ್‌ ನಿವೇಶನ ಖರೀದಿಸುವರೇ ಸಹಕರಿಸಿದರು. 

ವ್ಯವಸ್ಥಿತ ಬಡಾವಣೆ
ವಿವಿಧ ಇಲಾಖೆಗಳ ಮಾರ್ಗದರ್ಶನದೊಂದಿಗೆ ವ್ಯವಸ್ಥಿತ ಬಡಾವಣೆ ರೂಪಿಸಿ, ಸರಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದರು. ತನ್ಮೂಲಕ “ಕರ್ನಾಟಕದ ಮಾದರಿ ವಸತಿ ಯೋಜನೆ’ಯ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾದುದನ್ನು ಗಮನಿಸಬಹುದು.

ವೈಶಿಷ್ಟ್ಯತೆ 
ರಾಜ್ಯ ಹಾಗೂ ಕೇಂದ್ರ ಸರಕಾರದ ವಸತಿ ಯೋಜನೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿ ಉಡುಪಿ ನಗರಸಭೆ ಮಾರ್ಗದರ್ಶನದೊಂದಿಗೆ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ಸಹಕಾರದೊಂದಿಗೆ ಆಡಳಿತದಲ್ಲಿ ದಕ್ಷತೆ, ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಅನುಷ್ಠಾನಗೊಳಿಸಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಸರಕಾರದಿಂದ ಪ್ರಾಯೋಜಿಸಲ್ಪಟ್ಟ ವಸತಿ ಯೋಜನೆಗಳಡಿ ವಸತಿ ನಿರ್ಮಾಣಗೊಂಡಿವೆ. 

Advertisement

ಅವಶ್ಯ ಸೌಲಭ್ಯ
ಸರಕಾರೇತರ ಸಂಸ್ಥೆಗಳಾದ ಸಾಮಾಜಿಕ ಬದ್ಧತೆಯ ಕಾಳಜಿಯೊಂದಿಗೆ ಕಾರ್ತಿಕ್‌ ಶೆಟ್ಟಿ ಅಲೆವೂರು ಅವರ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಅಲೆವೂರಿನ ಕಿನ್‌ಫ್ರಾಟೆಕ್‌ ಸಂಸ್ಥೆ ಯೋಜನಾ ನಿರ್ವಹಣೆ ಹಾಗೂ ತಾಂತ್ರಿಕ ನೆರವು ಮತ್ತು ಪ್ಲಶ್‌ ಲಿವಿಂಗ್‌ ಸಂಸ್ಥೆ ವಿನ್ಯಾಸದ ನೆರವು ನೀಡಿವೆ. ವಿಶಿಷ್ಟವಾಗಿ ಮೂಡಿಬಂದ ನೂತನ ಪರಿಕಲ್ಪನೆಯಾದ “ಹೊಸ ಬೆಳಕು-ಹೊಸ ಬದುಕು’ ಎನ್ನುವ ಈ ಯೋಜನೆಯೊಂದಿಗೆ ವಿದ್ಯುತ್‌ ಸಂಪರ್ಕ, ಸ್ವಂತ ನೀರಿನ ವ್ಯವಸ್ಥೆ, ರಸ್ತೆ ಮುಂತಾದ ಅವಶ್ಯ ಸೌಲಭ್ಯಗಳನ್ನೂ ಒದಗಿಸಲಾಗಿದೆ. 

ಮುಂಬರುವ ಯೋಜನೆಗಳು 
– ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಕಾಂಕ್ರಿಟೀಕೃತ ರಸ್ತೆ 
– ಕಾಂಕ್ರೀಟ್‌ ಚರಂಡಿ 
– ನಗರಸಭೆಯ ನೀರಿನ ಸೌಲಭ್ಯ 
– ದಾರಿ ದೀಪದ ವ್ಯವಸ್ಥೆ ಇತ್ಯಾದಿ. 

ಪ್ರಮೋದ್‌ ಮಧ್ವರಾಜ್‌ ಬಡಾವಣೆ 
ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ, ಖಾಸಗಿ ನಿರ್ಮಾಣಗಾರರ ಸಹಕಾರದೊಂದಿಗೆ “ಹೊಸ ಬೆಳಕು-ಹೊಸ ಬದುಕು’ ಯೋಜನೆಯನ್ನು ಕಾರ್ಯಗತಗೊಳಿಸಲು ಸಚಿವ ಪ್ರಮೋದ್‌ ಮಧ್ವರಾಜ್‌ ಕಾರಣೀಭೂತರಾಗಿದ್ದಾರೆ. ಸಚಿವರ ಅರ್ಥಪೂರ್ಣ ಕಾರ್ಯ ವೈಖರಿಗೆ ಪ್ರೇರಣೆಯಾಗಿ, ಪ್ರೀತಿಪೂರ್ವಕವಾಗಿ ಕೊಡಂಕೂರಿನಲ್ಲಿರುವ ಈ ಬಡಾವಣೆಗೆ “ಪ್ರಮೋದ್‌ ಮಧ್ವರಾಜ್‌ ಬಡಾವಣೆ’ ಎನ್ನುವುದಾಗಿ ನಾಮಾಂಕಿತಗೊಳಿಸಿದ್ದೇವೆ ಎಂದು ಕೊಡಂಕೂರು ಸುಡುಗಾಡು ಸಿದ್ಧರು ಮತ್ತು ಬುಡ್ಗ ಜಂಗಮದವರ ಪರವಾಗಿ ನಾಗಾರ್ಜುನ್‌ ವಿಭೂತಿ ತಿಳಿಸಿದ್ದಾರೆ.

– ಎಸ್‌.ಜಿ.ನಾಯ್ಕ

Advertisement

Udayavani is now on Telegram. Click here to join our channel and stay updated with the latest news.

Next