ಬೆಂಗಳೂರು: ರಾಜ್ಯದ ಅರಣ್ಯ ಹಾಗೂ ಹಸಿರು ವ್ಯಾಪ್ತಿಯ ಹೆಚ್ಚಳಕ್ಕಾಗಿ ಪ್ರಸಕ್ತ ವರ್ಷ 5 ಕೋಟಿ ಗಿಡ ನೆಡುವ ಯೋಜನೆಗೆ ಮುಂದಾಗಿರುವ ಅರಣ್ಯ ಇಲಾಖೆ, ನೆಟ್ಟ ಸಸಿಗಳ ಪೈಕಿ ಎಷ್ಟು ಉಳಿದುಕೊಂಡಿದೆ ಎಂಬುದರ ಬಗ್ಗೆ ಕಾಳಜಿ ವಹಿಸಲು ಜಿಯೋ ಟ್ಯಾಗ್ ವ್ಯವಸ್ಥೆ ಮೂಲಕ ಆಡಿಟ್ ಮಾಡಲು ನಿರ್ಧರಿಸಿದೆ.
ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಒಟ್ಟಾರೆ ಭೌಗೋಳಿಕ ಪ್ರದೇಶದ ಪೈಕಿ ಅರಣ್ಯ ಹಾಗೂ ಹಸಿರು ವ್ಯಾಪ್ತಿ ಕನಿಷ್ಠ ಶೇ.33ಕ್ಕೆ ಇರಬೇಕು. ರಾಜ್ಯದಲ್ಲಿ ಈ ವ್ಯಾಪ್ತಿ ಸುಮಾರು 20.19ರಷ್ಟು ಮಾತ್ರವೇ ಇದ್ದು, ಸರ್ಕಾರ ವ್ಯಾಪ್ತಿ ಹೆಚ್ಚಳವನ್ನು ಆದ್ಯ ಕರ್ತವ್ಯ ಎಂದು ಪರಿಗಣಿಸಿದೆ. ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಲು ಯೋಜನೆ ರೂಪಿಸಿದ್ದು, ಶಿಕ್ಷಣ ಇಲಾಖೆಯೂ ಸೇರಿ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಸಹಯೋಗದಲ್ಲಿ ಪ್ರಸಕ್ತ ವರ್ಷ 5 ಕೋಟಿ ಸಸಿ ನೆಟ್ಟು, ಪೋಷಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಲಾಗುವುದು. ಮುಂದಿನ ಐದು ವರ್ಷದಲ್ಲಿ 25 ಕೋಟಿ ಸಸಿ ನೆಡುವ ಗುರಿ ಸರ್ಕಾರದ ಮುಂದಿದೆ ಎಂದು ಹೇಳಿದರು.
ಜುಲೈ 1ರಿಂದ 7 ದಿನಗಳ ಕಾಲ ಆಚರಿಸಲಾಗುತ್ತಿರುವ ವನಮಹೋತ್ಸವಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಪಂ ಸಿಇಒಗಳೂ ಇದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಜಿಲ್ಲೆಯ ಇತರ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ. ಇದೊಂದೇ ವಾರದಲ್ಲಿ 1 ಕೋಟಿ ಸಸಿ ನೆಡಲಾಗುತ್ತದೆ ಎಂದು ವಿವರಿಸಿದರು.
2.5 ಕೋಟಿಯಷ್ಟು ಸಸಿಗಳನ್ನು ಅರಣ್ಯ ವ್ಯಾಪ್ತಿಯಲ್ಲಿ ಇಲಾಖೆಯಿಂದ ನೆಡಲಾಗುತ್ತಿದೆ. ನಾನು ಅಧಿಕಾರ ವಹಿಸಿಕೊಳ್ಳುವ ಮೊದಲೇ ರೈತರಿಗೆ ಪೂರೈಕೆ ಮಾಡುತ್ತಿದ್ದ ಸಸಿಗಳ ದರವನ್ನು ಹೆಚ್ಚಳ ಮಾಡಲಾಗಿತ್ತು. ಈ ಬಗ್ಗೆ ಪುನರ್ ಪರಿಶೀಲನೆ ಮಾಡಿ, 5-8 ಗಿಡಗಳಿಗೆ 2 ರೂ. 6-8 ಗಿಡಗಳಿಗೆ 3 ರೂ. ಮತ್ತು 8 -12 ಗಿಡಗಳಿಗೆ 6 ರೂ. ನಿಗದಿ ಮಾಡಲಾಗಿದೆ ಎಂದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸ್ಥಳೀಯ ನಗರ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ನೆಟ್ಟ ಸಸಿಗಳು ಜೀವಂತ ಉಳಿಯಬೇಕು, ಬೆಳೆಯಬೇಕು. ಇದಕ್ಕಾಗಿ ಜಿಯೋ ಟ್ಯಾಗ್ ಮೂಲಕ ಆಡಿಟ್ ಮಾಡಿಸಲಾಗುವುದು, ಅಗತ್ಯ ಬಿದ್ದರೆ ಮೂರನೆ ವ್ಯಕ್ತಿ ಮೂಲಕ ಆಡಿಟ್ ಕೂಡ ಮಾಡಿಸಲಾಗುವುದು ಎಂದರು.
ಕ್ರಮ : ಅಕೇಶಿಯಾ ಮತ್ತು ನೀಲಗಿರಿ ಗಿಡಗಳ ತೋಪುಗಳ ನಿರ್ಮಾಣದಿಂದ ಆಗುವ ದುಷ್ಪರಿಣಾಮದ ಬಗ್ಗೆಯೂ ಕ್ರಮ ವಹಿಸುತ್ತೇವೆ. ಅಕೇಷಿಯಾ ನಿಷೇಧ ವಿಚಾರಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ಜತೆಗೆ ಚರ್ಚೆ ನಡೆಸುತ್ತೇವೆ ಎಂದು ಸಚಿವರು ಹೇಳಿದರು.