ಸಿಂಧನೂರು: ತಾಲೂಕಿನಲ್ಲಿ ಕುಡಿಯುವ ನೀರು, ರಸ್ತೆ, ಶಾಲೆ ಕೊಠಡಿಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದೀಗ ನಗರದಲ್ಲಿ ಅಭಿವೃದ್ಧಿ ಕೆಲಸಕ್ಕಾಗಿ 25.50 ಕೋಟಿ ರೂ. ಸರಕಾರದಿಂದ ಬಿಡುಗಡೆಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದಲ್ಲಿ 13ರಿಂದ 15 ಕೋಟಿ ರೂ. ಅಂದಾಜು ಮೊತ್ತದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕೆಲಸಗಳು ಸಾಗಿವೆ. ವಿಶೇಷ ಅಭಿವೃದ್ಧಿ ಯೋಜನೆಯಡಿ 4 ಕೋಟಿ ರೂ.ಬಂದಿದೆ. ಹೊಸದಾಗಿ ಮತ್ತೆ 25.50 ಕೋಟಿ ರೂ. ನಗರೋತ್ಥಾನ ಯೋಜನೆ 4ರಲ್ಲಿ ದೊರಕಿರುವುದರಿಂದ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.
ವಾರದಲ್ಲಿ ಟೆಂಡರ್ಗೆ ಸೂಚನೆ: ನಗರೋತ್ಥಾನ ಯೋಜನೆಯಡಿ ಅನುದಾನಕ್ಕೆ ಪೂರಕವಾಗಿ ಅಂದಾಜು ಪ್ರತಿಗಳನ್ನು ರೂಪಿಸಿ, ಟೆಂಡರ್ ಕರೆಯಲು ಲೋಕೋಪಯೋಗಿ ಇಲಾಖೆಗೆ ವಹಿಸಲು ಸೂಚನೆ ನೀಡಲಾಗಿದೆ. ವಾರದಲ್ಲಿ ಈ ಪ್ರಕ್ರಿಯೆ ಆರಂಭವಾಗಲಿವೆ. ನಗರದಲ್ಲಿ ಒಡೆದ ಕೆರೆ ಒಡ್ಡು ನಿರ್ಮಾಣಕ್ಕೆ ಸಂಬಂಧಿಸಿ ನಗರಾಭಿವೃದ್ಧಿ ಇಲಾಖೆಯಿಂದ 98 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಈ ಮೊದಲು ನಗರಸಭೆಯಲ್ಲಿ ಲಭ್ಯ ಹಣ ಜೋಡಿಸಲಾಗಿದ್ದು, ಅದನ್ನು ವಾರ್ಡ್‌ಗಳಿಗೆ ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದರು.
ಸೂರ್ಯಕಾಂತಿ ಬೀಜ ಪೂರೈಕೆ: ಮುಂಗಾರು ಮುನ್ನವೇ ಪ್ರವೇಶವಾಗಿ ಉತ್ತಮ ಮಳೆಯಾಗಿರುವುದರಿಂದ ರೈತರು ಸೂರ್ಯಕಾಂತಿ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಬೀಜದ ಕೊರತೆಯ ಬಗ್ಗೆ ರೈತರಿಂದು ದೂರುಗಳು ಬಂದಿದ್ದು, ಅದನ್ನು ಸರಿಪಡಿಸಲು ತಿಳಿಸಲಾಗಿದೆ. ರೈತರು ಗೊಂದಲಕ್ಕೆ ಒಳಗಾಗಬಾರದು. ಅಗತ್ಯ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ಮೂಲಕ ವ್ಯವಸ್ಥೆ ಮಾಡಲಾಗುವುದು. ಇಫ್ಕೋ ಸಂಸ್ಥೆಯು ಸಹಕಾರಿ ಸಂಘಗಳಿಗೆ 15-20 ದಿನಗಳ ಉದ್ರಿ ರೂಪದಲ್ಲಿ ರಸಗೊಬ್ಬರವನ್ನು ಪೂರೈಸಲು ಮುಂದೆ ಬಂದಿರುವುದರಿಂದ ರಸಗೊಬ್ಬರ ಕೊರತೆಯೂ ನಿವಾರಣೆಯಾಗುತ್ತದೆ ಎಂದರು.
ಮುಖಂಡರಾದ ಬಸವರಾಜ ನಾಡಗೌಡ, ಎಂ.ಡಿ. ನದಿಮುಲ್ಲಾ, ಚಂದ್ರುಭೂಪಾಲ ನಾಡಗೌಡ, ಅಶೋಕಗೌಡ ಗದ್ರಟಗಿ, ಧರ್ಮನಗೌಡ ಮಲ್ಕಾಪುರ, ಶರಣಬಸವ ಗೋರೆಬಾಳ, ಸತ್ಯನಾರಾಯಣ ದಾಸರಿ, ಕೆ.ಹನುಮೇಶ, ಅಲ್ಲಂಪ್ರಭು ಪೂಜಾರ್ ಇದ್ದರು.