ಬಳ್ಳಾರಿ: 24/7 ಕುಡಿವ ನೀರಿನ ಯೋಜನೆ ಸಂಪೂರ್ಣ ವಿಫಲ…. ಪಾಲಿಕೆಯಾದರೂ 10 ದಿನಕ್ಕೊಮ್ಮೆ ಕುಡಿವ ನೀರು ಪೂರೈಕೆ… ನಗರದಲ್ಲಿರುವ ಎಲ್ಲ ಓಎಚ್‌ಟಿ ಟ್ಯಾಂಕ್ ಗಳಿಗೆ ಏಕಕಾಲದಲ್ಲಿ ನೀರು ತುಂಬಿಸಲು ಏಕೆ ಸಾಧ್ಯವಾಗುತ್ತಿಲ್ಲ…. ಹಲವು ವರ್ಷಗಳಿಂದ ಇಲ್ಲೇ ಇರುವ ನೀವು ಏನು ಮಾಡಿದ್ದೀರಿ…? ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ನೇಮಕ… ಶಮನಗೊಂಡ ಸದಸ್ಯರ ಭಿನ್ನಮತ…!!!
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಬಳ್ಳಾರಿ ಮಹಾನಗರ ಪಾಲಿಕೆಯ ಮೊದಲ ಸಾಮಾನ್ಯ ಸಭೆಯಲ್ಲಿ ಕುಡಿವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳನ್ನು ಶಾಸಕ ನಾಗೇಂದ್ರ ಸೇರಿ ಸದಸ್ಯರು ತರಾಟೆಗೆ ತೆಗೆದುಕೊಂಡ ಪರಿಯಿದು.
ಬೆಳಗ್ಗೆ 11 ಗಂಟೆಗೆ ಆರಂಭವಾಗಿದ್ದ ಮೊದಲ ಸಾಮಾನ್ಯ ಸಭೆಯು ವಿವಿಧ ಕಾರಣಗಳಿಂದ ತಡವಾದರೂ, ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದ ಸತ್ಯನಾರಾಯಣ ಪೇಟೆ, ಕನಕದುರ್ಗಮ್ಮ ದೇವಸ್ಥಾನ ಬಳಿಯ ಕಳೆಸೇತುವೆಗಳ ವೆಟ್ ವೆಲ್ ಶಿಲ್ಟ್ ತೆರವು, 24/7 ಸೇರಿ ಕುಡಿವ ನೀರಿನ ವಿಷಯದಲ್ಲಿ ಸದಸ್ಯರಾದ ಪೇರಂ ವಿವೇಕ್, ಮುಲ್ಲಂಗಿ ನಂದೀಶ್, ಪ್ರಭಂಜನ್ ಕುಮಾರ್, ಪಿ.ಗಾದೆಪ್ಪ, ನೂರ್ ಅಹ್ಮದ್, ಹನುಮಂತ ಗುಡಿಗಂಟೆ, ಹಿರಿಯ ಸದಸ್ಯ ಇಬ್ರಾಹಿಂ ಬಾಬು ಅವರು ಕೆಯುಡಬ್ಲ್ಯುಎಸ್, ಕೆಯುಡಿಎಫ್‌ಸಿ, ಪಾಲಿಕೆ ಇಂಜಿನೀಯರ್‌ಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಮಧ್ಯದಲ್ಲಿ ಪ್ರವೇಶಿಸುತ್ತಿದ್ದ ಗ್ರಾಮೀಣ ನಾಗೇಂದ್ರ, 24/7 ಕುಡಿವ ನೀರಿನ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಅಧಿ ಕಾರಿಗಳ ಕಿವಿಹಿಂಡಿದರು.
20ನೇ ವಾರ್ಡ್ ಸದಸ್ಯ ಪೇರಂ ವಿವೇಕ್ ಮಾತನಾಡಿ, 24/7 ಕುಡಿವ ನೀರಿನ ಯೋಜನೆಯನ್ನು ನಮ್ಮ ವಾರ್ಡ್‌ನಲ್ಲಿ ಶೇ.90 ರಷ್ಟು ಕೆಲಸ ಮಾಡಿಸಿದ್ದೇನೆ. ಆದರೆ ಜನರಿಗೆ ಸಮರ್ಪಕ ನೀರು ಸಿಗುತ್ತಿಲ್ಲ. ಇದರಿಂದ 10 ದಿನಕ್ಕೊಮ್ಮೆ ಬಿಡುವ ನೀರೇ ನಮಗೆ ಸಾಕಷ್ಟು ಸಿಗುತ್ತಿತ್ತು ಎಂದು ವಾರ್ಡ್‌ನ ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ದನಿಗೂಡಿಸಿದ ಹಿರಿಯ ಸದಸ್ಯ ಇಬ್ರಾಹಿಂ ಬಾಬು, ನಗರಕ್ಕೆ ನೀರು ಪೂರೈಸುವ ಅಲ್ಲೀಪುರ, ಮೋಕಾ ಎರಡು ಕೆರೆಗಳಲ್ಲಿ ಸಾಕಷ್ಟು ನೀರಿದ್ದರೂ ಜನರಿಗೆ ಸಮರ್ಪಕವಾಗಿ ನೀಡಲಾಗುತ್ತಿಲ್ಲ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದ ಅವರು, ನಗರದಲ್ಲಿರುವ ಎಲ್ಲ 43 ಓಹೆಚ್‌ಟಿ ಟ್ಯಾಂಕ್‌ಗಳಿಗೆ ಏಕಕಾಲದಲ್ಲಿ ನೀರು ತುಂಬಿಸಲು ಇನ್ನು ಏನೇನು ಮಾಡಬೇಕು. ಈವರೆಗೆ ಏಕೆ ಸಾಧ್ಯವಾಗಿಲ್ಲ. ಮೂರು ಇಲಾಖೆಯವರು ಪರಸ್ಪರ ಆರೋಪ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದೀರಾ ಎಂದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಜತೆಗೆ ಮೂವರು ಇಂಜಿನೀಯರ್‌ಗಳನ್ನು ಸಾಲಾಗಿ ನಿಲ್ಲಿಸಿ ಜನರಿಗೆ ಪ್ರತಿದಿನ ನೀವು ಹೇಳಿದಂತೆ ನೀರು ಕೊಡಲು ಏನು ಮಾಡಬೇಕು ಎಂಬುದನ್ನು ಇಲ್ಲೇ ಹೇಳಿ ಎಂದು ಏರುದನಿಯಲ್ಲಿ ಟೇಬಲ್ ತಟ್ಟಿ ಪ್ರಶ್ನಿದರು. ಈ ವೇಳೆ ಕೆಲ ಕ್ಷಣ ಇಡೀ ಸಭೆ ಶಾಂತ ಚಿತ್ತವಾಗಿತ್ತು. ಆದರೆ ಯಾವ ಅಧಿಕಾರಿಯೂ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗಲೇ ಇಲ್ಲ.
ಮಧ್ಯಪ್ರವೇಶಿಸಿ 3ನೇ ವಾರ್ಡ್ ಸದಸ್ಯ ಪ್ರಭಂಜನ್ ಕುಮಾರ್, ಹಿಂದೆ ಏನೋ ಆಗಿದೆ. ಇದೀಗ ಮತ್ತೂಂದು ಅವಕಾಶ ಕೊಡುತ್ತೇವೆ.
ಒಂದು ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ 24/7 ನೀರು ಸರಬರಾಜು ಮಾಡಿ, ಅದಕ್ಕೆ ಬೇಕಾದ ಎಲ್ಲ ತಯಾರಿಯೂ ಮಾಡಿಕೊಳ್ಳಿ ಎಂದರೆ, ಭೂಮಿಯ ಗ್ರಾವಿಟಿಯಿಂದ ಎಲ್ಲೆಡೆ ರಭಸವಾಗಿ ನೀರು ತರಲಾಗಲ್ಲ ಎಂದರೆ ಮೋಟರ್‌ಗಳನ್ನು ಬಳಸಿಕೊಳ್ಳಿ 18ನೇ ವಾರ್ಡ್ ಸದಸ್ಯ ಮುಲ್ಲಂಗಿ ನಂದೀಶ್ ಸಲಹೆ ನೀಡಿದರು.
ಇನ್ನು ಇದೇ ವೇಳೆ 24/7 ಕುಡಿವ ನೀರಿನ ಯೋಜನೆ ನೆಪದಲ್ಲಿ ಹೊಸದಾಗಿ ನಿಮಿಸಿದ್ದ ರಸ್ತೆಗಳನ್ನೆಲ್ಲ ಅಗೆದು ಅಗೆದು ಹಾಳು ಮಾಡಲಾಗಿದೆ. ಯೋಜನೆಯೇ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಡಿವ ನೀರಿನ ಯೋಜನೆಯನ್ನು ನಮ್ಮ ವಾರ್ಡ್‌ನಲ್ಲಿ ಶೇ.90 ರಷ್ಟು ಕೆಲಸ ಮಾಡಿಸಿದ್ದೇನೆ. ಆದರೆ ಜನರಿಗೆ ಸಮರ್ಪಕ ನೀರು ಸಿಗುತ್ತಿಲ್ಲ. ಇದರಿಂದ 10 ದಿನಕ್ಕೊಮ್ಮೆ ಬಿಡುವ ನೀರೇ ನಮಗೆ ಸಾಕಷ್ಟು ಸಿಗುತ್ತಿತ್ತು ಎಂದು ವಾರ್ಡ್‌ನ ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ.
-ಪೇರಂ ವಿವೇಕ್, 20ನೇ ವಾರ್ಡ್ ಸದಸ್ಯ