Advertisement

ಜೂ.29 ರಿಂದ 24×7 ಕುಡಿವ ನೀರು ಲಭ್ಯ

06:24 AM May 13, 2020 | Team Udayavani |

ಬಳ್ಳಾರಿ: ದಶಕದಿಂದ ನನೆಗುದಿಗೆ ಬಿದ್ದಿದ್ದ 24×7 ಕುಡಿಯುವ ನೀರಿನ ಯೋಜನೆಯನ್ನು ಮುಂದಿನ ಜೂನ್‌ 29 ರಿಂದ ಬಳ್ಳಾರಿ ಮಹಾನಗರ ಪಾಲಿಕೆಯ 13, ಹೊಸಪೇಟೆ ನಗರಸಭೆಯ 7 ಝೋನ್‌ಗಳು ಕಾರ್ಯಾರಂಭ ಮಾಡಲಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಭರವಸೆ ನೀಡಿದರು.

Advertisement

ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇನ್ನೂ ಒಂದು ತಿಂಗಳೊಳಗೆ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ಕೆಲಸಗಳು ಮುಗಿಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸ್ವತಃ ನಾನೇ ಜೂ.29 ರಂದು ಈ ಎರಡು ನಗರಗಳಲ್ಲಿ ಚಾಲನೆ ನೀಡುತ್ತೇನೆ ಎಂದು ಹೇಳಿದ ಅವರು, ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಬಳ್ಳಾರಿಯಲ್ಲಿ ಮೊದಲ ಹಂತದಲ್ಲಿ ಕೈಗೊಳ್ಳಲಾದ 28 ವಲಯಗಳ ಪೈಕಿ 13 ವಲಯಗಳಲ್ಲಿ ನೀರು ಸರಬರಾಜು ಆರಂಭವಾಗಲಿದ್ದು, ಉಳಿದ ವಲಯಗಳಲ್ಲಿ ಡಿಸೆಂಬರ್‌ ಒಳಗೆ ಸರಬರಾಜು ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ ಸಚಿವರು, ಇನ್ನೂ ಬಾಕಿ ಉಳಿದ 15 ವಲಯಗಳಿಗೆ 24×7 ನೀರು ಸರಬರಾಜು ನೀಡಲು ಯೋಜನಾ ವರದಿ ತಯಾರಿಸಲು ಮಂಡಳಿಗೆ ಸೂಚಿಲಾಗಿದ್ದು, ಇದಕ್ಕಾಗಿ 22.5 ಕೋಟಿ ರೂ.ಗಳನ್ನು ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿ ಕಾಯ್ದಿರಿಸಲಾಗಿದೆ. ಡಿಪಿಎಆರ್‌ ಬಂದ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌. ಎಸ್‌. ನಕುಲ್‌ ಸಚಿವರ ಗಮನಕ್ಕೆ ತಂದರು.

ಅನ್ಯರಾಜ್ಯಗಳ 1093 ಜನರಿಗೆ ಕ್ವಾರಂಟೈನ್‌: ಅನ್ಯರಾಜ್ಯಗಳಿಂದ ಬಳ್ಳಾರಿಗೆ 1093 ಜನರು ಬಂದಿದ್ದು, ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಸಚಿವ ಬೈರತಿ ಬಸವರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಅವರ ಗಮನಕ್ಕೆ ತಂದರು. 6.5 ಕೋಟಿ ರೂ.ಗಳನ್ನು ಕೋವಿಡ್‌ ಆಸ್ಪತ್ರೆಗೆ ಇದುವರೆಗೆ ಖರ್ಚು ಮಾಡಲಾಗಿದ್ದು,ಇದುವರೆಗೆ 16 ಪ್ರಕರಣಗಳು ದೃಢಪಟ್ಟಿದ್ದು, ಅವರಲ್ಲಿ 12 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 4 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ಸಾವಿರ ಜನರ ಗಂಟಲು ಹಾಗೂ ಮೂಗಿನ ದ್ರವ ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 3691 ಜನರ ವರದಿ ನೆಗೆಟಿವ್‌ ಬಂದಿದೆ. ಉಳಿದ ವರದಿಗಳು ಬರಬೇಕಿದೆ. 1 ಲಕ್ಷ ರೇಶನ್‌ ಕಿಟ್‌ಗಳು ದಾನಿಗಳ ನೆರವಿನಿಂದ ಇದುವರೆಗೆ ವಿತರಿಸಲಾಗಿದೆ ಎಂದು ಅವರು ವಿವರಿಸಿದರು.

ಕ್ಯಾಬಿನೆಟ್‌ನಿಂದ ಅನುಮೋದನೆ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬಿ.ಗೋನಾಳ್‌ ಗ್ರಾಮದ ಬಳಿ 102 ಎಕರೆ ಪ್ರದೇಶದಲ್ಲಿ 700 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಹಾಗೂ ಕೊಳಗಲ್ಲು ಬಳಿ 21 ಎಕರೆಯಲ್ಲಿ 14.28ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಈಗಾಗಲೇ ನಾನು ಒಪ್ಪಿಗೆ ನೀಡಿದ್ದೇವೆ. ಶೀಘ್ರ ಸಚಿವ ಸಂಪುಟದ ಮುಂದೆ ಬರಲಿದ್ದು, ಅನುಮೋದನೆ ದೊರಕಲಿದೆ ಎಂದು ನಗರಾಭಿವೃದ್ಧಿ ಸಚಿವರು ಹೇಳಿದರು.

Advertisement

ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಸೋಮಲಿಂಗಪ್ಪ, ಬಿ.ನಾಗೇಂದ್ರ, ಸೋಮಶೇಖರ ರೆಡ್ಡಿ, ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಎಸ್ಪಿ ಸಿ.ಕೆ. ಬಾಬಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next