Advertisement

246 ಪ್ರವಾಹ ಸಂಭಾವ್ಯ ಸ್ಥಳ ಗುರುತು

12:40 AM Apr 25, 2019 | Lakshmi GovindaRaju |

ಬೆಂಗಳೂರು: ಮಳೆಗಾಲದಲ್ಲಿ ನಗರದ ಕಾಲುವೆಗಳಲ್ಲಿ 246 ಕಡೆ ಪ್ರವಾಹ ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದ್ದು, ಪ್ರವಾಹ ತಡೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ರಾಜ ಕಾಲುವೆ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು.

Advertisement

ರಸ್ತೆ ಗುಂಡಿ ಸಮಸ್ಯೆ ನಿವಾರಣೆ ಜತೆಗೆ ಮಳೆಗಾಲದಲ್ಲಿ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಬಿಬಿಎಂಪಿ, ಪೊಲೀಸ್‌ ಇಲಾಖೆ, ಬೆಸ್ಕಾಂ ಇತರೆ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮುಂಗಾರು ಪೂರ್ವ ಸಿದ್ಧತಾ ಕ್ರಮಗಳ ಬಗ್ಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ವರ್ಷಗಳ ಮಳೆ ಪ್ರಮಾಣ ಹಾಗೂ ಪ್ರವಾಹ ಸಂಭವಿಸಿದ ವಿವರ ಪರಿಶೀಲಿಸಿ ನಗರದಲ್ಲಿ ಸದ್ಯ 246 ಪ್ರವಾಹ ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದೆ.

ತಗ್ಗು ಪ್ರದೇಶ, ಕಾಲುವೆಗಳು ಕೂಡುವ ಜಾಗ, ತಿರುವು ಸೇರಿದಂತೆ ಪ್ಲಾಸ್ಟಿಕ್‌ ಕಸ, ಇತರೆ ವಸ್ತುಗಳು ಸಿಕ್ಕಿಕೊಂಡು ತೊಂದರೆ ಉಂಟಾಗುವ ಸ್ಥಳಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಆ ಸ್ಥಳಗಳಲ್ಲಿ ಪ್ರವಾಹ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡಗಳು ನಿರ್ಮಾಣಗೊಂಡಿರುವ ಸ್ಥಳಗಳನ್ನು ಪತ್ತೆ ಹೆಚ್ಚಿರುವ ಅಧಿಕಾರಿಗಳು ಮ್ಯಾಪಿಂಗ್‌ ಮಾಡಿದ್ದಾರೆ. ಮಳೆ ನೀರು ಹರಿಯುವಿಕೆಗೆ ಅಡ್ಡಿಯಾಗುವ ಕಡೆ ಒತ್ತುವರಿ ತೆರವಿಗೆ ಸೂಚಿಸಲಾಗಿದೆ. ಯಾವ ಒತ್ತಡಕ್ಕೂ ಮಣಿಯುವ ಪ್ರಶ್ನೆ ಇಲ್ಲ. ಕೆಲ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶಗಳು ಇವೆ. ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಕಾಲುವೆ ಒತ್ತುವರಿ ಪತ್ತೆ ನಿರಂತರ ಪ್ರಕ್ರಿಯೆ. ಈವರೆಗೆ 1950 ಒತ್ತುವರಿ ಸ್ಥಳಗಳನ್ನು ಗುರುತಿಸಲಾಗಿದೆ. ಈ ಪೈಕಿ 450 ಕಡೆ ಒತ್ತುವರಿ ತೆರವುಗೊಳಿಸಲಾಗಿದೆ. ಉಳಿದೆಡೆಯೂ ಹಂತ ಹಂತವಾಗಿ ತೆರವುಗೊಳಿಸಲಾಗುವುದು. ಈ ಹಿಂದೆ ಸರ್ವೇ ನಡೆದಿರಲಿಲ್ಲ. ಇದೀಗ ಸರ್ವೇ ನಡೆದಿದ್ದು, ಒತ್ತುವರಿಯನ್ನು ನಿರಂತರವಾಗಿ ಪತ್ತೆ ಹಚ್ಚಿ ತೆರವುಗೊಳಿಸಲಾಗುವುದು ಎಂದು ಹೇಳಿದರು.

ಪರಮೇಶ್ವರ್‌ ಮಾತು ಮುಂದುವರಿಸಿ, ಪಾಲಿಕೆ ಅಧಿಕಾರಿಗಳ ಮೊದಲ ಸಭೆ ನಡೆಸಿದಾಗ ಸರ್ವೇಯರ್‌ ಕೊರತೆ ಸಮಸ್ಯೆ ಗೊತ್ತಾಗಿತ್ತು. ಆ ಹಿನ್ನೆಲೆಯಲ್ಲಿ ನಾಲ್ಕು ಮಂದಿ ಕಾಯಂ ಸರ್ವೇಯರ್‌ಗಳನ್ನು ನೇಮಿಸಲಾಗಿದೆ. ಕೆಲವೆಡೆ ಒತ್ತುವರಿ ತೆರವುಗೊಳಿಸಿದ ನಂತರವೂ ಒತ್ತುವರಿ ನಡೆದಿದ್ದು, ಅವುಗಳ ತೆರವಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರದಲ್ಲಿ 840 ಕಿ.ಮೀ. ಉದ್ದದ ರಾಜಕಾಲುವೆ ಮಾರ್ಗವಿದೆ. ಈ ಪೈಕಿ 440 ಕಿ.ಮೀ. ಉದ್ದದ ಮಾರ್ಗಕ್ಕೆ ತಡೆಗೋಡೆ ನಿರ್ಮಾಣ ಸೇರಿದಂತೆ ಸುಸ್ಥಿತಿಯಲ್ಲಿವೆ. ಹೊಸ ಪ್ರದೇಶಗಳು ಸೇರ್ಪಡೆಯಾದ ಭಾಗದಲ್ಲಿ ಇನ್ನೂ 400 ಕಿ.ಮೀ. ಮಾರ್ಗದ ಕಾಲುವೆಗೆ ತಡೆಗೋಡೆ ನಿರ್ಮಾಣ ಸೇರಿದಂತೆ ಅಭಿವೃದ್ಧಿಪಡಿಸಬೇಕಿದೆ. ಇದನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ವಿವರ ನೀಡಿದರು.

ಕೆರೆಗಳ ಒಡೆತನ ಕಂದಾಯ ಇಲಾಖೆ ಸೇರಿದ್ದಾಗಿದೆ. ಪಾಲಿಕೆಯು 167 ಕೆರೆಗಳ ನಿರ್ವಹಣೆ ಮಾಡುತ್ತಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚು ಅಧಿಕಾರ ನೀಡಿ ಅದರ ವ್ಯಾಪ್ತಿಗೆ ಕೆರೆಗಳನ್ನು ತರುವ ಚಿಂತನೆ ಇದೆ. ಕೆರೆಗಳ ಸರ್ವೇ ಪೂರ್ಣಗೊಂಡಿದ್ದು, ಜಿಲ್ಲಾಡಳಿತ ಕೈಗೊಳ್ಳುವ ತೆರವು ಕಾರ್ಯಕ್ಕೆ ಪಾಲಿಕೆಯ ಸಿಬ್ಬಂದಿ, ಸಲಕರಣೆ ನೆರವು ನೀಡಲಿದೆ. ಒತ್ತುವರಿ ತೆರವುಗೊಳಿಸಿದ ಬಳಿಕ ಬೇಲಿ ಅಳವಡಿಕೆಗೂ ಚಿಂತಿಸಲಾಗಿದೆ ಎಂದು ಹೇಳಿದರು.

ವಾರ್ಡ್‌ವಾರು ಕಸ ವಿಲೇವಾರಿ ಟೆಂಡರ್‌ ಆಹ್ವಾನಿಸಲಾಗಿತ್ತು. ಈ ನಡುವೆ ಪಾಲಿಕೆ ಸದಸ್ಯರು ಹಲವು ಅಮೂಲ್ಯ ಸಲಹೆ ನೀಡಿದ್ದು, ಅದನ್ನು ಅಳವಡಿಸಿಕೊಂಡು 15- 20 ದಿನದಲ್ಲಿ ಅಂತಿಮಗೊಳಿಸಲಾಗುವುದು. ಹಸಿ- ಒಣ ಕಸ ವಿಂಗಡಣೆ ಪ್ರಮಾಣ ಶೇ. 35ರಷ್ಟಿದ್ದು, ಹೆಚ್ಚಳ ಮಾಡಲು ಒತ್ತು ನೀಡಲಾಗಿದೆ. ಹಾಗೆಂದು ದಂಡ ಪ್ರಯೋಗಿಸುವುದಿಲ್ಲ ಎಂದು ತಿಳಿಸಿದರು.

ಮೇಯರ್‌ ಗಂಗಾಬಿಕೆ, ಉಪಮೇಯರ್‌ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಶಿಖಾ, ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ) ಹರಿಶೇಖರನ್‌ ಇತರರು ಉಪಸ್ಥಿತರಿದ್ದರು.

ಜಂಟಿ ಆಯುಕ್ತರೇ ಹೊಣೆ: ವರ್ತುಲ ರಸ್ತೆ, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ವೈಟ್‌ ಟಾಪಿಂಗ್‌ ಕಾಮಗಾರಿಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ರಸ್ತೆಯ ಒಂದು ಬದಿ ನಿರ್ದಿಷ್ಟ ಅಂತರದಲ್ಲಿ ಕೈಗೊಂಡು ನಂತರ ಮತ್ತೂಂದು ಬದಿಯಲ್ಲಿ ಕೈಗೊಳ್ಳುತ್ತಿದ್ದು, ಇದರಿಂದ ಅಡಚಣೆಯಾಗುತ್ತಿದೆ. ಏಕಕಾಲಕ್ಕೆ ಎರಡೂ ಬದಿ ಕೈಗೊಂಡು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆಯೂ ಒತ್ತಡ ಹೇರಲಾಗುತ್ತಿದೆ. ಎಲ್ಲೆಂದರಲ್ಲಿ ಕಟ್ಟಡ ಅವಶೇಷ ತ್ಯಾಜ್ಯ ಸುರಿಯುವುದು ಸೇರಿದಂತೆ ಇತರೆ ಅವ್ಯವಸ್ಥೆಗಳಿಗೆ ಸಂಬಂಧಪಟ್ಟ ಜಂಟಿ ಆಯುಕ್ತರನ್ನೇ ಹೊಣೆ ಮಾಡಲಾಗುವುದು. ಜವಾಬ್ದಾರಿ ನಿರ್ವಹಿಸಲು ಕಷ್ಟವೆಂದು ಜಂಟಿ ಆಯುಕ್ತರು ಹೇಳಿದರೆ ಬೇರೊಬ್ಬರನ್ನು ನಿಯೋಜಿಸುವುದಾಗಿ ಕಟುವಾಗಿಯೇ ಎಚ್ಚರಿಕೆ ನೀಡಲಾಗಿದೆ ಎಂದು ಪರಮೇಶ್ವರ್‌ ಹೇಳಿದರು.

ಯಾರೂ ಪ್ರಶ್ನಿಸದಂತೆ ಗುಂಡಿ ಮುಚ್ಚಿ: ಹೈಕೋರ್ಟ್‌ ಸೂಚನೆ ನೀಡಿದ ಬಳಿಕ ರಸ್ತೆ ಗುಂಡಿ ದುರಸ್ತಿಪಡಿಸುವಂತಹ ಸ್ಥಿತಿ ನಿರ್ಮಿಸಬಾರದು. ಯಾರೂ ಪ್ರಶ್ನಿಸದ ರೀತಿಯಲ್ಲಿ ರಸ್ತೆ ಗುಂಡಿಗಳನ್ನು ನಿಯಮಿತವಾಗಿ ದುರಸ್ತಿಪಡಿಸಬೇಕು. ಮಳೆಗಾಲ ಆರಂಭವಾಗುತ್ತಿದ್ದಂತೆ ರಸ್ತೆಗಳಲ್ಲಿ ಗುಂಡಿ ಸೃಷ್ಟಿಯಾಗಿ ಜನ ತೊಂದರೆ ಅನುಭವಿಸುತ್ತಾರೆ. ಅಪಘಾತಗಳು ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ದುರಸ್ತಿಗೆ ಕ್ರಮ ವಹಿಸುವಂತೆ ಎಲ್ಲ ವಲಯಗಳ ಮುಖ್ಯ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ.

18 ಕೆರೆಗಳ ಹೂಳು ತೆರವು ಪೂರ್ಣ: ನಗರದ ಕೆರೆಗಳಲ್ಲಿ ಹೂಳು ತುಂಬಿರುವುದರಿಂದ ಮಳೆ ನೀರು ಸಂಗ್ರಹ ಸಾಮರ್ಥಯ ಕಡಿಮೆಯಿದ್ದು, ಇದು ಕೂಡ ಪ್ರವಾಹಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಗಿದೆ. ಹಾಗಾಗಿ ಕೆರೆಗಳ ಹೂಳು ತೆರವುಗೊಳಿಸಿ ನೀರು ಸಂಗ್ರಹ ಸಾಮರ್ಥಯ ಹೆಚ್ಚಿಸಲು ಒತ್ತು ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 167 ಕೆರೆಗಳಿದ್ದು, 18 ಕೆರೆಗಳ ಹೂಳು ತೆರವು ಪೂರ್ಣಗೊಂಡಿದೆ. 74 ಕೆರೆಗಳ ಹೂಳು ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ. 31 ಕೆರೆಗಳ ಹೂಳು ತೆರವಿಗೆ ಟೆಂಡರ್‌ ಕರೆಯಲಾಗಿದೆ.

ಬೆಸ್ಕಾಂಗೆ ಸೂಚನೆ: ನಗರದಲ್ಲಿ ಶಿಥಿಲಾವಸ್ಥೆಯ ವಿದ್ಯುತ್‌ ಕಂಬಗಳನ್ನು ಬದಲಾಯಿಸಬೇಕು. ಜೋತುಬಿದ್ದ ವಿದ್ಯುತ್‌ ತಂತಿಗಳನ್ನು ಸರಿಪಡಿಸಬೇಕು. ಬೆಸ್ಕಾಂ ನಿಯಂತ್ರಣ ಕೊಠಡಿಯಲ್ಲಿ 60-80 ದೂರವಾಣಿ ಸಂಪರ್ಕಗಳಿದ್ದು, ಜನರ ದೂರುಗಳಿಗೆ ಸ್ಪಂದಿಸಲಿದ್ದಾರೆ. ಮಳೆಗಾಲದಲ್ಲಿ ದೂರು ನಿರ್ವಹಣೆಗೆಂದೇ ಹೆಚ್ಚುವರಿ ಸಿಬ್ಬಂದಿಯನ್ನು ಬೆಸ್ಕಾಂ ನಿಯೋಜಿಸಿಕೊಂಡು ಮಳೆಗಾಲದ ಸಮಸ್ಯೆಗಳಿಗೆ ಸ್ಪಂದಿಸಲು ಸನ್ನದ್ಧವಾಗಿದೆ.

ಸೊಳ್ಳೆ ನಿಯಂತ್ರಣಕ್ಕೆ ಸೂಚನೆ: ನಗರದಲ್ಲಿ 2017ರಲ್ಲಿ 1,400 ಡೆಂಗೆ ಪ್ರಕರಣ ಪತ್ತೆಯಾಗಿತ್ತು. 2018ರಲ್ಲಿ 250 ಪ್ರಕರಣಗಳಷ್ಟೇ ಕಂಡುಬಂದಿದ್ದವು. ಪ್ರಸಕ್ತ ವರ್ಷ ಈವರೆಗೆ 240 ಪ್ರಕರಣ ಪತ್ತೆಯಾಗಿದೆ. ಮಹದೇವಪುರ, ಪಶ್ಚಿಮ ವಲಯ ಸೇರಿದಂತೆ ಕೆಲವೆಡೆ ಡೆಂಗೆ ಪ್ರಕರಣ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಕಾರಣ ಪತ್ತೆ ಹಚ್ಚಿ ನಿಯಂತ್ರಣಕ್ಕೆ ಗಮನ ಹರಿಸುವಂತೆ ಸೂಚಿಸಲಾಗಿದೆ. ಜತೆಗೆ ಪಾಲಿಕೆ ಆಸ್ಪತ್ರೆಗಳಲ್ಲಿ ಅಗತ್ಯ ಔಷಧ, ವೈದ್ಯರ ಸೇವೆ ಲಭ್ಯವಿರುವಂತೆಯೂ ಕ್ರಮ ವಹಿಸಲಾಗಿದೆ.

ಅಕ್ರಮ ಕಟ್ಟಡ ತೆರವಿಗೆ ನಿರ್ದೇಶನ: ಬಾಂಗ್ಲಾ ವಲಸಿಗರು ಹಾಗೂ ಹೊರರಾಜ್ಯಗಳಿಂದ ಬಂದವರು ಹಲವೆಡೆ ಕಾಲುವೆಗಳ ಅಕ್ಕಪಕ್ಕ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡಲಾರಂಭಿಸಿದ್ದಾರೆ. ಕೂಡಲೇ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಸೂಕ್ತ ಕ್ರಮ ವಹಿಸುವಂತೆ ಜಂಟಿ ಆಯುಕ್ತರಿಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next