ಹುಳಿಯಾರು: ಜಿಲ್ಲೆಯಲ್ಲೆ ಅತೀ ಹೆಚ್ಚು ರಾಗಿ ಬೆಳೆಯುವ ಪ್ರದೇಶವೆಂದು ಹೆಸರಾಗಿರುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸರ್ಕಾರದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಹೆಸರು ನೋಂದಾಯಿಸಿರುವುದು ಕೇವಲ 2400 ಮಂದಿ!.
ಹೌದು… ತಾಲೂಕಿನಲ್ಲಿ ಅಪಾರ ಸಂಖ್ಯೆಯಲ್ಲಿ ರಾಗಿ ಬೆಳೆಗಾರರಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಎಲ್ಲರಿಗೂ ಉತ್ತಮ ಇಳುವರಿಯಾಗಿದೆ. ಎಲ್ಲರಿಗೂ ಸರ್ಕಾರದ 3,150 ರೂ. ಬೆಂಬಲ ಬೆಲೆಯಲ್ಲಿ ರಾಗಿ ಮಾರಲು ಇಚ್ಚೆಯಿದೆ. ಆದರೂ ಹುಳಿಯಾರು ಖರೀದಿ ಕೇಂದ್ರದಲ್ಲಿ 1300 ರೈತರು, ಚಿ.ನಾ.ಹಳ್ಳಿ ಕೇಂದ್ರದಲ್ಲಿ 1,100 ರೈತರು ಮಾತ್ರ ನೋಂದಣಿ ಮಾಡಿಸಿದ್ದಾರೆ. ರೈತರ ನೋಂದಣಿಯಲ್ಲಿ ಕುಂಠಿತವಾಗಲು ಪಹಣಿಯಲ್ಲಿ ಬೆಳೆ ತಪ್ಪಾಗಿ ನಮೂದಾಗಿರುವುದು ಪ್ರಮುಖ ಕಾರಣ ಎನ್ನಲಾಗಿದೆ.
ಸಹವಾಸವೇ ಬೇಡ: ಇತ್ತೀಚೆಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆ ಖರೀದಿ ಕೇಂದ್ರ ತೆರೆಯುತ್ತಿದ್ದಂತೆ ಮಾರುಕಟ್ಟೆಗಿಂತಲೂ ಉತ್ತಮ ಬೆಲೆ ಕಂಡು ಸಂತಸದಿಂದ ರಾಗಿ ಮಾರಾಟಕ್ಕೆ ನೋಂದಣಿಗೆ ಹೋದ ರೈತರಲ್ಲಿ ಸಾಕಷ್ಟು ಜನರಿಗೆ ತಪ್ಪಾದ ಬೆಳೆ ಮಾಹಿತಿಯಿಂದ ಸಂಕಷ್ಟ ಎದುರಾಗಿತ್ತು. ಪಹಣಿಯಲ್ಲಿ ಪರಿಷ್ಕರಣೆಯಾಗದ ಮಾಹಿತಿಯಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿ, ಅನೇಕ ರೈತರು ಪಹಣಿಯಲ್ಲಿನ ದೋಷ ಪರಿಹರಿಸುವ ದಾರಿ ತಿಳಿಯದೆ ಖರೀದಿ ಕೇಂದ್ರದ ಸಹವಾಸವೇ ಬೇಡ ಎಂದು ಸುಮ್ಮನಾಗಿದ್ದಾರೆ.
“ಬೆಳೆ ದರ್ಶಕ’ ಮೊಬೈಲ್ ಆಪ್ ಕೇವಲ 300 ಮಂದಿ ಆಕ್ಷೇಪಣೆ ಸಲ್ಲಿಸಿ ಬೆಳೆ ಸರಿಪಡಿಸಿಕೊಂಡಿದ್ದು, ಉಳಿದ ರೈತರು ಈ ಬಗ್ಗೆ ನಿರಾಸಕ್ತಿ ತಾಳಿದ್ದಾರೆ. ಇದಕ್ಕೆ ರೈತರ ಬಳಿ ಸ್ಮಾರ್ಟ್‌ಫೋನ್‌ಗಳಿಲ್ಲ ಎನ್ನುವುದು ಕಾರಣ ಎನ್ನಲಾಗಿದೆ. “ಬೆಳೆ ದರ್ಶಕ’ ಮೊಬೈಲ್ ಆಪ್ ಮೂಲಕ ಆಕ್ಷೇಪಣೆ ಸಲ್ಲಿಸಲು ತಮ್ಮಿಂದ ಆಗದು ಎಂದು ರೈತರು ಕೊರಗಬಾರದೆಂದು ಹತ್ತಿರದ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರಿಗೆ ಅಥವಾ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಗೆ ರೈತರು ಭೇಟಿ ನೀಡಿ ಲಿಖೀತವಾಗಿಯೂ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಆದರೆ ಈ ಬಗ್ಗೆ ವ್ಯಾಪಕ ಪ್ರಚಾರವಿಲ್ಲದ ಕಾರಣ ರೈತರು ಆಕ್ಷೇಪಣೆಗೆ ಮುಂದಾಗಿಲ್ಲ. ಈ ನಡುವೆ ರಾಗಿ ಖರೀದಿ ಪ್ರಕ್ರಿಯೆ ನೋಂದಣಿ ಫೆ. 29 ಕೊನೇ ದಿನವೆಂದು ಘೋಷಿಸಲಾಗಿದೆ. ಅಷ್ಟರಲ್ಲಿ ಅಗತ್ಯ ದಾಖಲೆಯೊಂದಿಗೆ ರೈತರು ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಆದರೆ ಕಳೆದ ವಾರದಿಂದ ದಿನಕ್ಕೆ ಒಂದಿಬ್ಬರು ರೈತರು ಬಂದು ಹೆಸರು ನೋಂದಾಯಿಸಿದರೆ ಹೆಚ್ಚು ಅನ್ನುವಂತೆ ನೀರಸ ಪ್ರತಿಕ್ರಿಯೆಯಿದೆ. ಹಾಗಾಗಿ ಅಧಿಕಾರಿಗಳು ಮಾಡಿದ ಬೆಳೆ ಮಾಹಿತಿ ತಪ್ಪಿಗೆ ರೈತರು ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ.
“ಬೆಳೆ ದರ್ಶಕ’ ಮೊಬೈಲ್ ಆಪ್ ಮೂಲಕ ಆಕ್ಷೇಪಣೆ ಪಡೆದು ತಪ್ಪು ಸರಿಪಡಿಸಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿಗೆ ಸಮಸ್ಯೆ ತಲೆದೋರದಂತೆ ಸರ್ಕಾರ ವ್ಯವಸ್ಥೆ ಮಾಡಿದೆ.
-ಹನುಮಂತರಾಜು, ತಾಲೂಕು ಕೃಷಿ ಅಧಿಕಾರಿ
* ಎಚ್.ಬಿ.ಕಿರಣ್ ಕುಮಾರ್