ಬೆಂಗಳೂರು: ಹಸಿರು ಪಟಾಕಿಗಳು ರಾಸಾಯನಿಕ ಮುಕ್ತವಲ್ಲ. ಇಂತಹ ಪಟಾಕಿ ಗಳಿಂದಲೂ ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳಿದ್ದು, ಕಡ್ಡಾಯವಾಗಿ ಸುರಕ್ಷತಾ ಕ್ರಮಕೈಗೊಳ್ಳಬೇಕು ಎಂದು ಮಿಂಟೋ ಪ್ರಾದೇಶಿಕ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ನಿರ್ದೇಶನ ಮೇರೆಗೆ ಸರ್ಕಾರವು ಹಸಿರು ಪಟಾಕಿ ಪ್ರೋತಾಹಿಸಲಾಗುತ್ತಿದೆ. ಈ ಪಟಾಕಿ ತಯಾರಿಕೆಯಲ್ಲಿಯೂ ರಾಸಾಯನಿ ಕಗಳನ್ನು ಬಳಸ ಲಾಗಿರುತ್ತದೆ. ಆದರೆ, ಸಾಮಾನ್ಯ ಪಟಾಕಿಗೆ ಹೋಲಿಸಿದರೆ ರಾಸಾಯನಿಕ ಬಳಕೆ ಪ್ರಮಾಣ ಶೇ.30 ರಷ್ಟು ಕಡಿಮೆ ಇರುತ್ತದೆ. ಪ್ರಮುಖ ಬೇರಿಯಂ ಮತ್ತು ಲೀಥಿಯಂ ಹೊರತುಪಡಿಸಿ ಇತರೆ ರಾಸಾಯನಿಕಗಳು ಬಳಸುತ್ತಾರೆ.
ಇದರಿಂದ ಮಾಲಿನ್ಯ ಪ್ರಮಾಣ ಕಡಿಮೆಯಾಗಿದ್ದರೂ, ಸ್ಟೋಟ ಮತ್ತು ಶಬ್ಧದ ತೀವ್ರತೆ ಸಾಮಾನ್ಯವಾಗಿರುತ್ತದೆ. ಹೀಗಾಗಿ, ಹಸಿರು ಪಟಾಕಿ ಯಿಂದ ಯಾವುದೇ ತರಹದ ಹಾನಿಯಾಗುವುದಿಲ್ಲ ಎಂಬ ತಪ್ಪುಕಲ್ಪನೆ ಬೇಡ. ಪಟಾಕಿ ಸಿಡಿಸುವಾಗ ಕಡ್ಡಾಯವಾಗಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ: ಬೆಳಕಿನ ಹಬ್ಬ ದೀಪವಾಳಿ ಬಂತೆಂದರೆ ಪಟಾಕಿ ಸಿಡಿತದಿಂದ ಗಾಯಗೊಂಡ 50ಕ್ಕೂ ಹೆಚ್ಚು ಮಂದಿ ಚಿಕಿತ್ಸೆಗೆ ದಾಖಲಾಗುತ್ತಾರೆ. ಇಂತಹವರಿಗೆ 24/7 ಸೇವೆ ಸೇವೆ ಒದಗಿಸಲು ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ. 90 ಹಾಸಿಗೆಗಳನ್ನು ಮೀಸಲಿ ಟ್ಟಿದ್ದು, ಮಹಿಳೆಯರು, ಮಕ್ಕಳು, ಪುರುಷರಿಗೆ ಪ್ರತ್ಯೇಕ ಕೊಠಡಿಗಳನ್ನು ನಿಗದಿಪಡಿಸಲಾಗಿದೆ. ಒಂದು ಪಾಳಿಯಲ್ಲಿ 18 ರಿಂದ 20 ಎಲ್ಲ ಮಂದಿ ವೈದ್ಯ ಹಾಗೂ ವೈದ್ಯೆàತರ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ವರ್ಷ ಚಿಕಿತ್ಸೆ ಪಡೆದವರು(ಮಕ್ಕಳು)
2014 65 (25)
2015 32(17)
2016 33(15)
2017 45(20)
2018 48 (12)
2019 42 (15)
2020 23 (10)
ಶೇ.40ರಷ್ಟು ತನ್ನದಲ್ಲದ ತಪ್ಪಿನಿಂದ ಹಾನಿ
ಆಸ್ಪತ್ರೆಗಳ ಮಾಹಿತಿ ಪ್ರಕಾರ ಪಟಾಕಿಯಿಂದ ಹಾನಿಗೊಳಗಾದರವ ಪೈಕಿ ಶೇ.40ರಷ್ಟು ಮಂದಿ ಬೇರೆಯವರು ಹಚ್ಚಿದ ಪಟಾಕಿಯಿಂದ ಹಾನಿಗೊಳಗಾಗುತ್ತಿದ್ದಾರೆ. ರಸ್ತೆಯಲ್ಲಿ ಹಾದುಹೋಗುವಾಗ ಯಾರೋ ಹಚ್ಚಿದ ಪಟಾಕಿ ಸಿಡಿದು, ಬೈಕಲ್ಲಿ ಹೋಗುವಾಗ ಒಮ್ಮೆಗೆ ರಸ್ತೆಯಲ್ಲಿ ಪಟಾಕಿ ಸಿಡಿದು, ಮನೆ ಮುಂದೆ ನಿಂತಾಗ ಯಾರೋ ಹಚ್ಚಿದ ರಾಕೆಟ್ ಒಮ್ಮೆಗೆ ಬಂದು ಕಣ್ಣಿಗೆ ಬಿದ್ದು ಹಾನಿಗೊಳಗಾಗುತ್ತಿರುವ ಘಟನೆಗಳು ಸಾಮಾನ್ಯವಾಗಿ ನಡೆಯುತ್ತವೆ. ಹೀಗಾಗಿ, ತಮ್ಮದಲ್ಲದ ತಪ್ಪಿಗೆ ಇಂದಿಗೂ ಹಲವರು ನೋವನ್ನು ಅನುಭವಿಸುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ವಿವರಿಸಿದರು.
ಶೇ.40 ರಷ್ಟು ಮಕ್ಕಳಿಗೆ ಹಾನಿ: ಹಿಂದಿನ ವರ್ಷಗಳಲ್ಲಿ ಪಟಾಕಿಯಿಂದ ಹಾನಿಗೊಳಗಾದವರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಟ್ಟಾರೆ ಹಾನಿಯಾದವರಲ್ಲಿ ಶೇ.40ರಷ್ಟು ಮಕ್ಕಳಿ¨ªಾರೆ. ಅದರಲ್ಲೂ 10ರಿಂದ 14 ವರ್ಷದ ಮಕ್ಕಳು ಹೆಚ್ಚಿದ್ದಾರೆ. ಐದು ವರ್ಷದೊಳಗಿನ ಮಕ್ಕಳಿಗೆ ಪಟಾಕಿ ಹಚ್ಚಲು ಅವಕಾಶ ನೀಡಬೇಡಿ ಎನ್ನುತ್ತಾರೆ ವೈದ್ಯರು.
ಮಾಲಿನ್ಯಕಾರಕ ಪಟಾಕಿ ನಿಷೇಧಿಸಲು ಆಗ್ರಹ:-
ಮಾಲಿನ್ಯಕಾರಕ ಪಟಾಕಿ ನಿಷೇಧಿಸಿ ಅಥವಾ ಹಸಿರು ಪಟಾಕಿ ನಿಯಮ ಸೂಕ್ತ ಜಾರಿಗೊಳಿಸಿ ಮಾರುಕಟ್ಟೆಗಳಲ್ಲಿಯೂ ಹಸಿರು ಪಟಾಕಿ ಲಭ್ಯವಿರುವಂತೆ ಕ್ರಮವಹಿಸಬೇಕು ಎಂದು ನೇತ್ರತಜ್ಞರು ಒತ್ತಾಯಿಸಿದ್ದಾರೆ. ಹಲವು ವರ್ಷಗಳಿಂದ ಪಟಾಕಿ ನಿಷೇಧಕ್ಕೆ ಒತ್ತಾಯಿಸಲಾಗುತ್ತಿದೆ. ಆದರೆ, ಆರ್ಥಿಕತೆ ಹಿನ್ನೆಲೆ ಸರ್ಕಾರ ಪಟಾಕಿ ನಿಷೇಧಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ. ಪರ್ಯಾಯ ಮಾರ್ಗವಾದ ಹಸಿರು ಪಟಾಕಿ ನಿಯಮವನ್ನು ಸೂಕ್ತವಾಗಿ ಜಾರಿಗೊಳಿಸಿ ಮಾರುಕಟ್ಟೆಗಳಲ್ಲಿ ಲಭ್ಯವಾಗುವಂತೆ ಕ್ರಮವಹಿಸಬೇಕು ಎಂದು ಮಿಂಟೋ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಆಗ್ರಹಿಸಿದರು.
ಕೊರೊನಾದಿಂದ ಕಡಿಮೆ ಕೇಸ್-
ಕಳೆದ ವರ್ಷ 23 ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡು ಮಿಂಟೋಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅವರಲ್ಲಿ ಮೂವರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. 2020ರ ಪೂರ್ವದಲ್ಲಿ ವಾರ್ಷಿಕ 50 ಆಸುಪಾಸಿನಲ್ಲಿ ಪಟಾಕಿ ಹಾನಿ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ, ಕೊರೊನಾದಿಂದ ಕಳೆದ ವರ್ಷ ಜನರು ಪಟಾಕಿಯಿಂದ ದೂರ ಉಳಿದಿದ್ದಾರೆ ಎನ್ನುತ್ತಾರೆ ಮಿಂಟೋ ವೈದ್ಯರು.
24/7 ಸಹಾಯವಾಣಿ-
ಹಬ್ಬದ ಸಂದರ್ಭದಲ್ಲಿ ಪಟಾಕಿಯಿಂದ ಕಣ್ಣಿಗೆ ಘಾಸಿಯಾದಾಗ ಮನೆ ಮದ್ದು ಮಾಡದೆ, ಶುದ್ಧ ಬಟ್ಟೆಯಲ್ಲಿ ಕಣ್ಣು ಮುಚ್ಚಿ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಬೇಕು. ನಗರ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದಲ್ಲಿ ಮಿಂಟೋ ಸಹಾಯವಾಣಿ 080-26707176 ಹಾಗೂ ಮೊ. 9481740137 / 9480832430 ಕರೆ ಮಾಡಿ ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಪ್ಪು ಶಿಲೀಂಧ್ರ: ಅರ್ಧದಷ್ಟು ಮಂದಿ ಬಾಳು ಕತ್ತಲೆ ನಗರದ ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಯಲ್ಲಿ 688 ಮಂದಿ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಸೋಂಕಿಯರು ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಶೇ.50 ರಷ್ಟು ಮಂದಿಯ ಕಣ್ಣಿಗೆ ತೀವ್ರಹಾನಿಯಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. 35 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ
.